ಚಿಟಗುಪ್ಪ: ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಗಾಳಿಪಟ ಹಾರಿಸಲು ಬಳಸುವ ಅಪಾಯಕಾರಿ ವೈರ್ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಕುತ್ತಿಗೆ ಸೀಳಿಕೊಂಡು ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಸೇತುವೆ ಸಮೀಪ ನಡೆದಿದೆ.
ಮೃತರನ್ನು ಚಿಟಗುಪ್ಪ ತಾಲೂಕಿನ ಬಂಬುಳಗಿ ಗ್ರಾಮದ ನಿವಾಸಿ ಸಂಜಕುಮಾರ ಗುಂಡಪ್ಪ (48) ಎಂದು ಗುರುತಿಸಲಾಗಿದೆ. ಮೃತರಿಗೆ ಪತ್ನಿ, ಒಬ್ಬ ಪುತ್ರ ಹಾಗೂ ಮೂವರು ಪುತ್ರಿಯರು ಇದ್ದಾರೆ.
ಮಗಳಿಗೆ ಕರೆ ತರಲು ಹೋಗುತ್ತಿದ್ದಾಗ ದುರಂತ
ಇದನ್ನು ಓದಿ : ಕಾನೂನು ಬಾಹಿರ ಟೋಲ್ ಪ್ಲಾಜಾ ಹಾನಿ: ಪ್ರತಿಭಟನಾಕಾರರ ಆಕ್ರೋಶ, ಕ್ಯಾಮೆರಾ ಸಹಿತ ಸಮಗ್ರ ಉಪಕರಣ ನಾಶ
ಸಂಜಕುಮಾರ ಅವರು ಹುಮನಾಬಾದ್ ಪಟ್ಟಣದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಕರೆ ತರಲು ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ತಾಳಮಡಗಿ ಗ್ರಾಮದ ಸೇತುವೆ ಸಮೀಪ ಬೈಕ್ ಸಾಗುತ್ತಿದ್ದಾಗ, ಅಚಾನಕ್ವಾಗಿ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ತಗುಲಿ ತೀವ್ರವಾಗಿ ಕತ್ತರಿಸಿದೆ.
ದಾರದಿಂದ ತೀವ್ರವಾಗಿ ಗಾಯಗೊಂಡ ಸಂಜಕುಮಾರ ಅವರು ಬೈಕ್ ಮೇಲಿಂದ ಕೆಳಗೆ ಬಿದ್ದು, ಕೆಲಕಾಲ ರಕ್ತದ ಮಡವಿನಲ್ಲಿ ಹೊರಳಾಡಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗಾಳಿಪಟ ಹಬ್ಬ ಸಂಭ್ರಮವೇ ಜೀವಾಪಾಯ
ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಚಿಟಗುಪ್ಪ ತಾಲೂಕಿನಲ್ಲಿ ಗಾಳಿಪಟ ಹಾರಿಸುವ ಸಂಪ್ರದಾಯ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಳಸಲಾಗುತ್ತಿರುವ ವೈರ್ ಮಾಂಜಾ ದಾರಗಳು ಮನುಷ್ಯರ ಜೀವಕ್ಕೆ ಭಾರೀ ಅಪಾಯವಾಗುತ್ತಿವೆ. ಈ ಘಟನೆಯ ಎರಡು ದಿನಗಳ ಹಿಂದಷ್ಟೇ, ಗಾಳಿಪಟದ ದಾರ ಕೈಗೆ ಸಿಲುಕಿ ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಕೂಡ ತಾಲೂಕಿನಲ್ಲಿ ವರದಿಯಾಗಿತ್ತು.
ಈ ಹಿನ್ನೆಲೆ ಚಿಟಗುಪ್ಪ ತಹಸೀಲ್ದಾರ್ ಮಂಜುನಾಥ ಪಾಂಚಾಳ ಅವರು, ತಾಲೂಕಿನಾದ್ಯಂತ ವೈರ್ ಮಾಂಜಾ ದಾರಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದರು.
ಇದನ್ನು ಓದಿ : ಗಿಲ್ಲಿ ಕಾಮಿಡಿ ಸ್ಟೈಲ್ ಗೆ ಜನರ ಒಲವು; ಗೆಲುವಿನ ನಗೆ ಬೀರುವ ಸಾಧ್ಯತೆ!
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮನ್ನಾಏಖೆಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು,
“ನಾವು ಸ್ಥಳಕ್ಕೆ ಹೋದ ವೇಳೆ ದಾರ ಕಂಡುಬಂದಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ಪರಿಶೀಲನೆ ಮುಂದುವರಿದಿದೆ.
ಈ ದುರ್ಘಟನೆ ಗಾಳಿಪಟ ಹಬ್ಬದ ಸಂಭ್ರಮದ ನಡುವೆಯೇ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಅಪಾಯಕಾರಿ ಮಾಂಜಾ ದಾರಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಹೆಚ್ಚಾಗಿದೆ.
ವರದಿ: ಅರವಿಂದ ಮಲ್ಲೀಗೆ, ಬೀದರ್ ಜಿಲ್ಲೆ