ಲಖನೌ: ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮುಖ್ಯಸ್ಥೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ತಮ್ಮ 70ನೇ ಜನ್ಮದಿನದ ಅಂಗವಾಗಿ ದೇಶದಾದ್ಯಂತ ಜನಕಲ್ಯಾಣ ದಿನವಾಗಿ ಸರಳವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಮೂಲಕ ಮಾತನಾಡಿದ ಅವರು, ಬಿಎಸ್‌ಪಿ ಆಡಳಿತಾವಧಿಯಲ್ಲಿ ಜಾರಿಗೆ ತಂದ ಜನಪರ ಯೋಜನೆಗಳು ಕಾಗದದಲ್ಲಷ್ಟೇ ಉಳಿಯದೇ ನೆಲಮಟ್ಟದಲ್ಲಿ ಅನುಷ್ಠಾನಗೊಂಡಿದ್ದವು ಎಂದು ಹೇಳಿದರು.
ನವವರ್ಷ 2026ರ ಶುಭಾಶಯಗಳನ್ನು ದೇಶವಾಸಿಗಳಿಗೆ, ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳಿಗೆ ಹಾಗೂ ಬೆಂಬಲಿಗರಿಗೆ ಸಲ್ಲಿಸಿದ ಮಾಯಾವತಿ, ಈ ವರ್ಷ ಎಲ್ಲರ ಜೀವನದಲ್ಲಿ ಅಭಿವೃದ್ಧಿ ಮತ್ತು ಸಮೃದ್ಧಿ ತರಲಿ ಎಂದು ಹಾರೈಸಿದರು. ತಮ್ಮ ನಾಯಕತ್ವದಡಿ ನಾಲ್ಕು ಬಾರಿ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದಾಗ ಬಡವರು, ಕಾರ್ಮಿಕರು, ರೈತರು, ಯುವಕರು, ಮಹಿಳೆಯರು, ವಿದ್ಯಾರ್ಥಿಗಳು, ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ಸ್ಥಿತಿಗತಿಯಲ್ಲಿ ಸ್ಪಷ್ಟ ಸುಧಾರಣೆ ಕಂಡುಬಂದಿತ್ತು ಎಂದು ಹೇಳಿದರು.
ಇಂದಿನ ಸರ್ಕಾರಗಳು ಬಿಎಸ್‌ಪಿ ಯೋಜನೆಗಳನ್ನು ಹೆಸರು ಮತ್ತು ಸ್ವರೂಪ ಬದಲಿಸಿ ಅನುಕರಿಸುತ್ತಿದ್ದರೂ, ಅವರ ಉದ್ದೇಶ ಮತ್ತು ಮನೋಭಾವ ಸರಿಯಾಗಿಲ್ಲದ ಕಾರಣ ಜನರಿಗೆ ನಿರೀಕ್ಷಿತ ಲಾಭ ಸಿಗುತ್ತಿಲ್ಲ ಎಂದು ಟೀಕಿಸಿದರು. ಮಹಾತ್ಮ ಜ್ಯೋತಿರಾವ್ ಫುಲೆ, ಛತ್ರಪತಿ ಶಾಹೂಜಿ ಮಹಾರಾಜ್, ನಾರಾಯಣಗುರು, ಡಾ. ಬಿ.ಆರ್. ಅಂಬೇಡ್ಕರ್, ಮಾನ್ಯವರ ಕಾನ್ಸಿರಾಮ್ ಸೇರಿದಂತೆ ದಲಿತ-ಪಿಂಡಿತ ವರ್ಗದ ಮಹಾನ್ ಚಿಂತಕರಿಗೆ ಗೌರವ ಸಲ್ಲಿಸಿ, ಅವರ ಹೆಸರಿನಲ್ಲಿ ನಿರ್ಮಿತ ಭವ್ಯ ಸ್ಮಾರಕಗಳು, ಉದ್ಯಾನಗಳು ಹಾಗೂ ಜಿಲ್ಲೆಗಳ ಕುರಿತು ಅವರು ಸ್ಮರಿಸಿದರು.
ನನ್ನ ಆರೋಗ್ಯ ಸರಿಯಾಗಿರುವವರೆಗೆ ಬಹುಜನರ ಹಿತಕ್ಕಾಗಿ ಹೋರಾಟ ಮುಂದುವರಿಯುತ್ತದೆ ಎಂದು ಘೋಷಿಸಿದ ಮಾಯಾವತಿ, ಯಾವುದೇ ಒತ್ತಡ ಅಥವಾ ಆಮಿಷಕ್ಕೆ ಬಗ್ಗುವುದಿಲ್ಲ ಎಂದರು. ಬಿಎಸ್‌ಪಿ ಸಂಸ್ಥಾಪಕ ಕಾನ್ಸಿರಾಮ್ ಅವರು ನೀಡಿದ ಜವಾಬ್ದಾರಿಯನ್ನು ಜೀವಮಾನಪೂರ್ತಿ ನಿಷ್ಠೆಯಿಂದ ನಿರ್ವಹಿಸುವುದಾಗಿ ಭರವಸೆ ನೀಡಿದರು.
ರಾಜಕೀಯವಾಗಿ, ಬಿಎಸ್‌ಪಿ ಮುಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಒಂಟಿಯಾಗಿ ಎದುರಿಸಲಿದೆ ಎಂದು ಸ್ಪಷ್ಟಪಡಿಸಿದರು. ಮೈತ್ರಿಯಿಂದ ಪಕ್ಷಕ್ಕೆ ನಷ್ಟವೇ ಹೆಚ್ಚು ಆಗಿದೆ ಎಂಬ ಅನುಭವದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಸೇರಿದಂತೆ ಎಲ್ಲ ಸಮುದಾಯಗಳಿಗೂ ಬಿಎಸ್‌ಪಿ ಆಡಳಿತದಲ್ಲಿ ನ್ಯಾಯ, ಗೌರವ ಮತ್ತು ಭದ್ರತೆ ದೊರಕಿತ್ತು ಎಂದು ಹೇಳಿದರು.
ಇವಿಎಂ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ (SIR) ಕುರಿತಾಗಿ ಎಚ್ಚರಿಕೆ ವಹಿಸಬೇಕೆಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ಉತ್ತರ ಪ್ರದೇಶದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದ್ದು, ಜನತೆ ಮತ್ತೆ ಬಿಎಸ್‌ಪಿಯನ್ನು ಅಧಿಕಾರಕ್ಕೆ ತರಲು ಮನಸ್ಸು ಮಾಡಿಕೊಂಡಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಮ್ಮ ಹೋರಾಟ ಮತ್ತು ಬಿಎಸ್‌ಪಿ ಚಳವಳಿಯ ವಿವರ ಒಳಗೊಂಡ ‘My Struggle-filled Life and the Journey of the BSP Movement ’ ಎಂಬ ಪುಸ್ತಕದ 21ನೇ ಹಿಂದಿ ಹಾಗೂ ಇಂಗ್ಲಿಷ್ ಆವೃತ್ತಿಯನ್ನು ಅವರು ಬಿಡುಗಡೆ ಮಾಡಿದರು.
“ಇದೇ ನನ್ನ ಜನ್ಮದಿನದ ಅತ್ಯುತ್ತಮ ಉಡುಗೊರೆ” ಎಂದು ಪಕ್ಷವನ್ನು ಬಲಪಡಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.