ದಕ್ಷಿಣ ಕನ್ನಡ: ಒಳಮೀಸಲಾತಿ ಸಮೀಕ್ಷೆ ವಿಚಾರಕ್ಕೆ ಸಂಬಂಧಿಸಿ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಸಂಘ–ಸಂಸ್ಥೆಗಳ ಮಹಾಒಕ್ಕೂಟ ಆಗ್ರಹಿಸಿದೆ. ಈ ಕುರಿತು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆಗೆ ಮರುದೂರು ಅರ್ಜಿ ಸಲ್ಲಿಸಲಾಗಿದೆ.
ಏನು ಆರೋಪ?
ಒಕ್ಕೂಟದ ದೂರಿನಲ್ಲಿ, ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತ ಸಮೀಕ್ಷೆಯನ್ನು ನಡೆಸಲು ಏಕಸದಸ್ಯ ಆಯೋಗ ರಚಿಸಲಾಗಿದ್ದು, ಆಯೋಗದ ಅಧ್ಯಕ್ಷರಾಗಿರುವ ನಾಗಮೋಹನದಾಸ್ ಅವರು ನೀಡಿದ ಹೇಳಿಕೆಗಳು ದಲಿತ ಸಮುದಾಯದ ವಿರುದ್ಧ ದೌರ್ಜನ್ಯಕ್ಕೆ ಕಾರಣವಾಗುವಂತಿವೆ ಎಂದು ಆರೋಪಿಸಲಾಗಿದೆ.
ಮಾಧ್ಯಮ ಸಂದರ್ಶನವೊಂದರಲ್ಲಿ, ಕ್ರೈಸ್ತ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವರನ್ನು 101 ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಒಳಪಡಿಸಲಾಗುವುದಿಲ್ಲ ಎಂಬ ಹೇಳಿಕೆ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹೇಳಿಕೆ ಸಂವಿಧಾನ ವಿರೋಧಿಯಾಗಿದ್ದು, ಪರಿಶಿಷ್ಟ ಜಾತಿಯ ಜನರ ಹಕ್ಕುಗಳಿಗೆ ಧಕ್ಕೆ ತರುತ್ತದೆ ಎಂದು ಒಕ್ಕೂಟ ಹೇಳಿದೆ.
ಪೊಲೀಸ್ ಕ್ರಮಕ್ಕೆ ಒತ್ತಾಯ.
ಒಕ್ಕೂಟವು 05.05.2025ರಂದು ಮೊದಲ ದೂರು ಸಲ್ಲಿಸಿದ್ದರೂ, ಇದುವರೆಗೆ ಯಾವುದೇ ಕಾನೂನು ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದೆ. ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ (ದೌರ್ಜನ್ಯ ತಡೆ) ಕಾಯ್ದೆ 1989ರ ಸೆಕ್ಷನ್ 4 ಅಡಿಯಲ್ಲಿ ಕರ್ತವ್ಯ ನಿರ್ಲಕ್ಷ್ಯವೂ ಶಿಕ್ಷಾರ್ಹ ಅಪರಾಧವಾಗಿರುವುದರಿಂದ ತಕ್ಷಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಲಾಗಿದೆ.
ಸಮೀಕ್ಷೆ ಸ್ಥಗಿತಗೊಳಿಸಲು ಬೇಡಿಕೆ
ಇನ್ನೂ, ಒಳಮೀಸಲಾತಿ ಸಮೀಕ್ಷೆಯ ಹೆಸರಿನಲ್ಲಿ ಸಂವಿಧಾನ ವಿರೋಧಿ ಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ, ಅಕ್ರಮಗಳನ್ನು ಸರಿಪಡಿಸುವವರೆಗೆ ಸಮೀಕ್ಷೆ ಕಾರ್ಯವನ್ನು ಸ್ಥಗಿತಗೊಳಿಸಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.
ಈ ಕುರಿತು ತುರ್ತು ಕಾನೂನು ಮತ್ತು ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಗಳ ಮಹಾಒಕ್ಕೂಟ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.