- ಲೇಖನ – ರಿಯಾಜ ಮೊಖಾಶಿ ( ಚಿಂಗಾರಿ )
ಕಳೆದ ಹಲವು ವರ್ಷಗಳಿಂದ ಕನ್ನಡ ಟೆಲಿವಿಷನ್ ಲೋಕದಲ್ಲಿ ಬಿಗ್ ಬಾಸ್ ಒಂದು ದೊಡ್ಡ ರಿಯಾಲಿಟಿ ಶೋ ಆಗಿಯೇ ಮುಂದುವರಿದಿದೆ. ಈಟಿವಿಯಿಂದ ಆರಂಭವಾಗಿ ಈಗ ಕಲರ್ಸ್ ಕನ್ನಡವರೆಗೂ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮ, ಪ್ರತಿ ಸೀಸನ್ ಹೊಸ ಮುಖಗಳನ್ನು ಪರಿಚಯಿಸುತ್ತಲೇ ಬಂದಿದೆ. ಆದರೆ ಪ್ರಶ್ನೆ ಏನೆಂದರೆ – ಬಿಗ್ ಬಾಸ್ ಗೆದ್ದವರಿಗಾಗಲಿ, ಸೋತವರಿಗಾಗಲಿ, ಈ ಶೋ ನಿಜಕ್ಕೂ ದೀರ್ಘಕಾಲದ ಯಶಸ್ಸು ನೀಡಿದೆಯೇ?
ಉದಾಹರಣೆಗೆ, ಬಿಗ್ ಬಾಸ್ ಗೆ ಮುನ್ನವೇ ದೊಡ್ಡ ಮಟ್ಟದಲ್ಲಿ ಹಿಟ್ ಹಾಡುಗಳನ್ನು ನೀಡಿದ್ದ ಚಂದನ್ ಶೆಟ್ಟಿ ಇಂದು ಮಾಧ್ಯಮಗಳಲ್ಲೂ ಹೆಚ್ಚು ಕಾಣಿಸಿಕೊಳ್ಳದ ಸ್ಥಿತಿಗೆ ಬಂದಿದ್ದಾರೆ. ಅಲ್ಲಿ ಇಲ್ಲಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಜೀವನ ಸಾಗಿಸುವಂತಾಗಿದೆ. ಇದೇ ರೀತಿ, ಸ್ಟೇಜ್ ಶೋಗಳು ಹಾಗೂ ಸಣ್ಣ ಕಾರ್ಯಕ್ರಮಗಳಿಂದ ಗುರುತಿಸಿಕೊಂಡಿದ್ದ ಹನುಮಂತ ಇಂದು ಕೃಷಿಯತ್ತ ಮುಖ ಮಾಡಿ ಕೋಳಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಒಂದು ಕಾಲದಲ್ಲಿ ಚರ್ಚೆಯಲ್ಲಿದ್ದ ಕೃಷಿ ಶಶಿ ಇದೀಗ ಬಹುತೇಕ ಕಾಣೆಯಾದಂತಿದ್ದಾರೆ.
ಹಳ್ಳಿಕಾರ್ ಜಗದೀಶ್ ಟ್ರೋಲ್‌ಗಳ ಕೇಂದ್ರಬಿಂದುವಾಗಿಬಿಟ್ಟರೆ, ದೀಪಿಕಾ ದಾಸ್ ಮತ್ತೊಮ್ಮೆ ‘ನಾಗಿಣಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲೇ ಇಲ್ಲ ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಉಳಿದಿವೆ. ಹೇಳುತ್ತಾ ಹೋದರೆ, ಬಿಗ್ ಬಾಸ್ ನಂತರ ಕ್ಯಾರಿಯರ್ ಗ್ರಾಫ್ ಕೆಳಗೆ ಇಳಿದವರ ಪಟ್ಟಿ ದೊಡ್ಡದೇ ಇದೆ.
ಆದರೆ ಇತ್ತೀಚಿನ ಸೀಸನ್‌ನ ಸ್ಪರ್ಧಿ ಗಿಲ್ಲಿ ಜೀ ಮಾತ್ರ ಈ ಸಾಲಿನಲ್ಲಿ ಸ್ವಲ್ಪ ವಿಭಿನ್ನವಾಗಿ ಕಾಣಿಸುತ್ತಿದ್ದಾರೆ. ಶಾರ್ಟ್ ಮೂವಿಗಳ ಮೂಲಕ ಪಡ್ಡೆ ಹುಡುಗರ ಗಮನ ಸೆಳೆದ ಗಿಲ್ಲಿ, ಅಡ್ಡಾದಲ್ಲಿ ಹೊಡೆಯುವ ಡೈಲಾಗ್ಸ್‌ಗಳಿಂದಲೇ ಜನಪ್ರಿಯತೆ ಗಳಿಸಿದ್ದರು. ‘ಡೆವಿಲ್’ ಸಿನಿಮಾ ಮೂಲಕ ತಮ್ಮ ಮೈಲೇಜ್ ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ ಎನ್ನುವುದು ಸತ್ಯ.
ಐಪಿಎಲ್, ಜಿಯೋ ಹಾಟ್‌ಸ್ಟಾರ್, ಫ್ರೀ 5G ವೀಕ್ಷಕರ ಸಂಖ್ಯೆ ಹೆಚ್ಚಿರುವ ಈ ಸಮಯದಲ್ಲಿ, ಗಿಲ್ಲಿಗೆ ಸಿಕ್ಕಿರುವ ಡಿಜಿಟಲ್ ಪ್ಲಾಟ್‌ಫಾರ್ಮ್ ಸಪೋರ್ಟ್ ಕೂಡಾ ಪ್ಲಸ್ ಆಗಿದೆ. ಜೊತೆಗೆ, ರೆಂಟಲ್ ಸಂಸ್ಥೆಗಳ ಮೂಲಕ ಅವರ ಇನ್‌ಸ್ಟಾಗ್ರಾಂ ಹ್ಯಾಂಡಲ್ ಕೂಡಾ ಉತ್ತಮವಾಗಿ ವರ್ಕ್ ಆಗುತ್ತಿದೆ.
ಆದರೆ ನಿಜವಾದ ಪ್ರಶ್ನೆ ಇಲ್ಲಿಯೇ ಮೂಡುತ್ತದೆ. ಬಿಗ್ ಬಾಸ್ ಗೆದ್ದು ಒಂದು ತಿಂಗಳು ಸುದ್ದಿಯಲ್ಲಿ ಇರುವುದು ಸಾಕೆ? ಮುಂದಿನ ಸಂಕ್ರಾಂತಿಗೆ ಗಿಲ್ಲಿಯ ಹೆಸರು ನೆನಪಿಗೆ ಬಂದರೆ ಅದೇ ಅವರ ವರ್ಚಸ್ಸಿನ ಪರೀಕ್ಷೆ. ಇಲ್ಲವಾದರೆ, ಬಿಗ್ ಬಾಸ್ ಕೂಡಾ ಇತರರಂತೆ ಒಂದು ಅಲ್ಪಕಾಲಿಕ ಸಂತಸ, ಕ್ಷಣಿಕ ಜನಪ್ರಿಯತೆಯ ವೇದಿಕೆಯಷ್ಟೆಯೇ ? ಸ್ಟಾರ್‌ಗಳು ಮೌನಕ್ಕೆ ಜಾರಿದ್ದೇ ಸತ್ಯ ?
ಒಟ್ಟಿನಲ್ಲಿ, ಬಿಗ್ ಬಾಸ್ ಸ್ಪರ್ಧಿಗಳಿಗೆ ವೇದಿಕೆ ನೀಡುತ್ತದೆ, ಆದರೆ ಅದನ್ನು ದೀರ್ಘಕಾಲದ ಕ್ಯಾರಿಯರ್ ಆಗಿ ರೂಪಿಸಿಕೊಳ್ಳುವ ಹೊಣೆಗಾರಿಕೆ ಸಂಪೂರ್ಣವಾಗಿ ಅವರ ಕೈಯಲ್ಲೇ ಇದೆ. ಜನಪ್ರಿಯತೆ ಕ್ಷಣಿಕವಾಗಬಹುದು, ಆದರೆ ಅದನ್ನು ಉಳಿಸಿಕೊಳ್ಳುವ ಬುದ್ಧಿ ಮತ್ತು ಅವಕಾಶಗಳ ಸದುಪಯೋಗವೇ ಅಂತಿಮ ಗೆಲುವು.