ಬೆಳ್ತಂಗಡಿ: ತಾಲೂಕಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಕಿಡ್ನಾಪ್ ಯತ್ನ ಪ್ರಕರಣವೆಂದು ದಾಖಲಾಗಿದ್ದ ಘಟನೆಗೆ ಇದೀಗ ಹೊಸ ತಿರುವು ದೊರೆತಿದ್ದು, ಪ್ರಾಥಮಿಕ ತನಿಖೆಯಲ್ಲಿ ಪ್ರಕರಣವು ಸುಳ್ಳು ಆರೋಪವಾಗಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಅಪ್ರಾಪ್ತ ಬಾಲಕಿ ತನ್ನ ತಂದೆಯೊಂದಿಗೆ ಪೊಲೀಸ್ ಠಾಣೆಗೆ ಬಂದು, ಮೂವರು ಮುಸುಕುದಾರಿಗಳು ಮಾರುತಿ ಓಮ್ನಿ ವಾಹನದಲ್ಲಿ ತನ್ನನ್ನು ಕಿಡ್ನಾಪ್ ಮಾಡಲು ಪ್ರಯತ್ನಿಸಿದ್ದಾರೆ ಎಂದು ದೂರು ನೀಡಿದ್ದರು. ದೂರು ಆಧಾರವಾಗಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದರು.
ತನಿಖೆಯ ಭಾಗವಾಗಿ ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಬಾಲಕಿ ನೀಡಿದ ವಿವರಣೆಗೆ ಹೊಂದುವಂತಹ ಯಾವುದೇ ವಾಹನ ಆ ಭಾಗದಲ್ಲಿ ಸಂಚರಿಸಿಲ್ಲ ಎಂಬುದು ಬೆಳಕಿಗೆ ಬಂದಿದೆ. ಬಳಿಕ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಗಂಭೀರ ಗಾಯಗಳಿಲ್ಲದೆ ಕೇವಲ ಮೇಲ್ಮೈ ಗಾಯಗಳಷ್ಟೇ ಕಂಡುಬಂದಿದ್ದು, ವೈದ್ಯರು ಅವು ಸ್ವಯಂ ಉಂಟಾದ ಗಾಯಗಳಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದರ ನಂತರ ಬಾಲಕಿಯನ್ನು ಮರು ವಿಚಾರಣೆ ನಡೆಸಿದಾಗ, ಬೆಳ್ತಂಗಡಿ ಕಾಲೇಜು ಇಷ್ಟವಿಲ್ಲದೆ ಮಂಗಳೂರು ಕಾಲೇಜಿಗೆ ಹೋಗಬೇಕೆಂಬ ಉದ್ದೇಶದಿಂದ ಸುಳ್ಳು ಹೇಳಿಕೆ ನೀಡಿದ್ದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಯ ಸಂದರ್ಭದಲ್ಲಿ ಬಾಲಕಿಯನ್ನು ಮನೆಗೆ ಬಿಟ್ಟಿದ್ದೇನೆ ಎಂದು ಹೇಳಿದ ವ್ಯಕ್ತಿಯ ಹೇಳಿಕೆಯಲ್ಲಿ ಕೂಡ ಗೊಂದಲ ಕಂಡುಬಂದಿದ್ದು, ಆತನನ್ನು ಮರು ವಿಚಾರಣೆಗೊಳಪಡಿಸಿದಾಗ ಬಾಲಕಿಯ ಹೇಳಿಕೆಯನ್ನು ಆಧರಿಸಿ ತಪ್ಪು ಮಾಹಿತಿ ನೀಡಿದ್ದಾಗಿ ಸ್ಪಷ್ಟಪಡಿಸಿದ್ದಾನೆ ಎನ್ನಲಾಗಿದೆ. ಆತನ ಹೇಳಿಕೆಯ ಕುರಿತಾಗಿ ಪೊಲೀಸರು ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ.
ಅಪ್ರಾಪ್ತೆಯಾಗಿರುವ ಹಿನ್ನೆಲೆಯಲ್ಲಿ ಬಾಲಕಿಗೆ ಸಿಡಿಪಿಒ ಮೂಲಕ ಸಮಾಲೋಚನೆ (ಕೌನ್ಸಿಲಿಂಗ್) ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಅಪ್ರಾಪ್ತೆಗೆ ದ್ವಿಚಕ್ರ ವಾಹನ ನೀಡಿದವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಸ್ಥಳೀಯವಾಗಿ ಪ್ರಕರಣ ಕುರಿತು ಚರ್ಚೆಗಳು ಜೋರಾಗಿದ್ದರೂ, ಸಾರ್ವಜನಿಕರು ಆತಂಕಕ್ಕೊಳಗಾಗಬಾರದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.