ನವದೆಹಲಿ: ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಗಳನ್ನು ಹೊರತುಪಡಿಸಿ ಬೇರೆ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಯನ್ನು ಪರಿಶಿಷ್ಟ ಜಾತಿಯ (ಎಸ್‌ಸಿ) ಸದಸ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಬೇರೆ ಧರ್ಮಕ್ಕೆ ಮತಾಂತರಗೊಂಡವರು ಎಸ್‌ಸಿ ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಪಿ.ಕೆ. ಮಿಶ್ರಾ ಮತ್ತು ಮನಮೋಹನ್ ಅವರ ಪೀಠ ಈ ತೀರ್ಪು ನೀಡಿದ್ದು, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ದಲಿತ ವ್ಯಕ್ತಿಯೊಬ್ಬರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ರಕ್ಷಣೆ ಪಡೆಯಲು ಅರ್ಹರಾಗುವುದಿಲ್ಲ ಎಂದು ಹೇಳಿದೆ.
ನ್ಯಾಯಾಲಯದ ಅಭಿಪ್ರಾಯ ಪ್ರಕಾರ, ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಅನುಸರಿಸುವವರಿಗಷ್ಟೇ ಪರಿಶಿಷ್ಟ ಜಾತಿ ಸ್ಥಾನಮಾನ ಅನ್ವಯವಾಗುತ್ತದೆ. ಬೇರೆ ಯಾವುದೇ ಧರ್ಮವನ್ನು ಸ್ವೀಕರಿಸಿದರೆ ಆ ಸ್ಥಾನಮಾನ ಸ್ವಯಂ ರದ್ದು ಆಗುತ್ತದೆ.
ಈ ಪ್ರಕರಣವು ಆಂಧ್ರಪ್ರದೇಶ ಹೈಕೋರ್ಟ್‌ನ ಮೇ 2025ರ ತೀರ್ಪಿನ ವಿರುದ್ಧ ಚಿಂತಾಡ ಆನಂದ್ ಎಂಬ ಪಾದ್ರಿ ಸಲ್ಲಿಸಿದ ಮೇಲ್ಮನವಿಯಿಂದ ಸುಪ್ರೀಂ ಕೋರ್ಟ್ ಮುಂದೆ ಬಂದಿತ್ತು. ಆನಂದ್ ಅವರು ತಮ್ಮ ಮೇಲೆ ಜಾತಿ ಆಧಾರಿತ ನಿಂದನೆ ಮತ್ತು ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದೂರು ದಾಖಲಿಸಿದ್ದರು. ಪೊಲೀಸರು ಈ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿದ್ದರು.
ಆದರೆ, ಆರೋಪಿ ಅಕ್ಕಲ ರಾಮಿರೆಡ್ಡಿ ಹೈಕೋರ್ಟ್ ಮೊರೆ ಹೋಗಿದ್ದು, ಆನಂದ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವ ಕಾರಣ ಅವರಿಗೆ ಎಸ್‌ಸಿ ಸ್ಥಾನಮಾನ ಅನ್ವಯಿಸುವುದಿಲ್ಲ ಎಂದು ವಾದಿಸಿದರು. ಈ ವಾದವನ್ನು ಅಂಗೀಕರಿಸಿದ ಹೈಕೋರ್ಟ್ ಎಫ್‌ಐಆರ್ ಅನ್ನು ರದ್ದುಪಡಿಸಿತ್ತು.
ಈ ತೀರ್ಪನ್ನು ಪ್ರಶ್ನಿಸಿ ಆನಂದ್ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ತೀರ್ಪನ್ನು ಸಮರ್ಥಿಸಿ, ಮತಾಂತರಗೊಂಡವರು ಎಸ್‌ಸಿ ಸ್ಥಾನಮಾನ ಕಳೆದುಕೊಳ್ಳುತ್ತಾರೆ ಎಂದು ಅಂತಿಮವಾಗಿ ಸ್ಪಷ್ಟಪಡಿಸಿದೆ.
ಈ ತೀರ್ಪು ದೇಶದಾದ್ಯಂತ ಮಹತ್ವದ ಕಾನೂನು ಮತ್ತು ಸಾಮಾಜಿಕ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.