ಹುಬ್ಬಳ್ಳಿಯಲ್ಲಿ ನಡೆದ ಏಳು ತಿಂಗಳ ಗರ್ಭಿಣಿ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೇವಲ ಒಂದು ಕುಟುಂಬದ ದುಃಖವಲ್ಲ; ಇದು ಇಡೀ ಸಮಾಜದ ಮಾನವೀಯತೆಗೆ ಬಿದ್ದಿರುವ ಕಪ್ಪು ಚುಕ್ಕೆ. ಬಸವಣ್ಣನವರು ಎಂಟು ಶತಮಾನಗಳ ಹಿಂದೆಯೇ ಅಂತರ್ಜಾತಿ ವಿವಾಹದ ಮೂಲಕ ಜಾತಿ ಗೋಡೆಯನ್ನು ತೆಗೆಯುವ ಕ್ರಾಂತಿಕಾರಿ ಚಿಂತನೆಗೆ ಅಡಿಪಾಯ ಹಾಕಿದ್ದರು. ಆದರೆ ಇಂದಿಗೂ “ಮರ್ಯಾದೆ” ಎಂಬ ವಕ್ರಾರ್ಥದ ಹೆಸರಿನಲ್ಲಿ ನಡೆಯುವ ಹತ್ಯೆಗಳು, ಜಾತಿ ದ್ವೇಷ, ಅಸ್ಪೃಶ್ಯತೆ ಮತ್ತು ದಲಿತರನ್ನು ಒಪ್ಪಿಕೊಳ್ಳಲಾಗದ ಮನೋಭಾವಗಳು ಜೀವಂತವಾಗಿರುವುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.
ಇಲ್ಲಿ ಪ್ರಶ್ನೆ ಅಪರಾಧಿಗಳಿಗಷ್ಟೇ ಸೀಮಿತವಲ್ಲ. ಜಾತಿಗ್ರಸ್ತ ಮನಸ್ಸು ರೂಪುಗೊಳ್ಳುವ ಮೂಲವೇನು? ಶಿಕ್ಷಣವು ಕೇವಲ ಉದ್ಯೋಗಕ್ಕಾಗಿ ಮಾತ್ರ ಎಂಬ ಸರಕಾರಗಳ ತಪ್ಪು ನಿಲುವು, ಪಠ್ಯಕ್ರಮಗಳಲ್ಲಿ ಮೌಢ್ಯ ಆಚರಣೆಗಳ ವಿರುದ್ಧ ವೈಚಾರಿಕ ಚರ್ಚೆ ಇಲ್ಲದಿರುವುದು, ಸಮಾನತೆ–ಮಾನವೀಯ ಮೌಲ್ಯಗಳನ್ನು ಮಕ್ಕಳ ಮನಸ್ಸಿಗೆ ತಲುಪಿಸದಿರುವುದು— ಇವು ಎಲ್ಲವೂ ಸೇರಿ ಸಮಾಜವನ್ನು ಒಳಗೊಳಗೆ ಹಾಳುಗೆಡುವುತಿದೆ. ಬಡತನ ಮತ್ತು ಶಿಕ್ಷಣದಿಂದ ವಂಚಿತರಾದವರು ಮತ್ತೆ ಮತ್ತೆ ಇದೇ ಮೌಢ್ಯ ಆಚರಣೆಗಳಿಗೆ ಬಲಿಯಾಗುತ್ತಿದ್ದಾರೆ.
ಅಂತರ ಜಾತಿ ವಿವಾಹ ಮಾಡಿಕೊಂಡ ದಲಿತ ಯುವಕ–ಮೇಲ್ಜಾತಿ ಯುವತಿಯ ಬದುಕಿಗೆ ಭದ್ರತೆ ಕೊಡಬೇಕಾದ ವ್ಯವಸ್ಥೆಯೇ ವಿಫಲವಾದಾಗ, ಅಪರಾಧಿಗಳಿಗೆ ಧೈರ್ಯ ಬರುತ್ತದೆ. ಇಲ್ಲಿ ಕೇವಲ ನಾಲ್ವರನ್ನು ಬಂಧಿಸುವುದರಿಂದ ನ್ಯಾಯ ಸಿಗದು; ಈ ಮರ್ಯಾದೆ ಹತ್ಯೆಗೆ ಕೈಜೋಡಿಸಿದ ಪ್ರತಿಯೊಬ್ಬರ ಮೇಲೂ ಕಠಿಣ ಕಾನೂನು ಕ್ರಮ ಜರುಗಬೇಕು. ಜೊತೆಗೆ ಬದುಕುಳಿದ ಪತಿ ವಿವೇಕಾನಂದ ದೊಡ್ಡಮನಿ ಹಾಗೂ ಅವರ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡುವುದು ಸರ್ಕಾರದ ತಕ್ಷಣದ ಜವಾಬ್ದಾರಿ.
ಸಮಾಜದ ಬೆಳವಣಿಗೆ ಮತ್ತು ಸಾಮರಸ್ಯಕ್ಕೆ ಜಾತಿ ತಾರತಮ್ಯ, ಜಾತಿ ದ್ವೇಷ, ಅಸ್ಪೃಶ್ಯತೆ ನಿರ್ಮೂಲನೆ ಅನಿವಾರ್ಯ. ಅಂತರ ಜಾತಿ ವಿವಾಹವಾಗುವ ಯುವಕ–ಯುವತಿಯರಿಗೆ ಕೇವಲ ಕಾನೂನು ರಕ್ಷಣೆ ಮಾತ್ರವಲ್ಲ, ಸಾಮಾಜಿಕ ಹಾಗೂ ಆರ್ಥಿಕ ಬಲ ತುಂಬುವ ಪ್ರೋತ್ಸಾಹ ಧನವೂ ನೀಡಬೇಕು. ಶಿಕ್ಷಣವು ಉದ್ಯೋಗದ ಮೆಟ್ಟಿಲಷ್ಟೇ ಅಲ್ಲ; ಅದು ಮೌಢ್ಯಕ್ಕೆ ವಿರೋಧವಾಗಿ, ಸಮಾನತೆ ಮತ್ತು ಮಾನವೀಯತೆಯನ್ನು ಕಟ್ಟುವ ಶಕ್ತಿಯಾಗಬೇಕು.
ಈ ಘಟನೆಯು ಸರ್ಕಾರಕ್ಕೂ, ಜಾತಿಗ್ರಸ್ತ ಮನಸ್ಸುಳ್ಳವರಿಗೂ ಒಂದು ಕಠಿಣ ಸಂದೇಶ: ಮರ್ಯಾದೆ ಹೆಸರಿನ ಹತ್ಯೆಗಳಿಗೆ ಸಮಾಜದಲ್ಲಿ ಯಾವುದೇ ಸ್ಥಾನವಿಲ್ಲ. ನ್ಯಾಯ, ಸಮಾನತೆ ಮತ್ತು ಮಾನವೀಯತೆ ಇಲ್ಲದೆ ಅಭಿವೃದ್ಧಿ ಅಸಾಧ್ಯ. ಈಗಲಾದರೂ ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕಿದೆ— ಇಲ್ಲವಾದರೆ ಇಂತಹ ದುರಂತಗಳು ಮರುಕಳಿಸುತ್ತಲೇ ಇರುತ್ತವೆ. ಧಾರವಾಡ ಜಿಲ್ಲೆಯ ದಲಿತ ಯುವಕನು ಮೇಲಾತಿಯ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ-ರಿಂದ 7 ತಿಂಗಳ ಗರ್ಭಿಣಿಯನ್ನು ಕೊಲೆ ಮಾಡಿ ತಂದೆಯನ್ನು ಹಾಗೂ ನಾಲ್ವರು ಆರೋಪಿಗಳನ್ನು ಮಾತ್ರ ಬಂಧಿಸಿದ್ದು, ಇತರೆ ಎಲ್ಲಾ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಸರಕಾರವನ್ನು ಆಗ್ರಹಿಸುತ್ತಿದ್ದೇನೆ
ಚಂದ್ರಶೇಖರ ಕೆ.ಪಲ್ಲತ್ತಡ್ಕ, ಜಿಲ್ಲಾಧ್ಯಕ್ಷರು ,ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯ ದಕ್ಷಿಣಕನ್ನಡ