ಮೈಸೂರು: ಕುಂಬಾರ ಸಮುದಾಯವು ಅತ್ಯಂತ ಹಿಂದುಳಿದ ಹಾಗೂ ಕಡಿಮೆ ಜನಸಂಖ್ಯೆಯಿರುವ ಸಮುದಾಯವಾಗಿದ್ದು, ಕಾಯಕ ಯೋಗಿಗಳಾಗಿ ಮಣ್ಣಿನ ಕಲಾಕೃತಿಗಳನ್ನು ನಿರ್ಮಿಸುವ ವಿಶಿಷ್ಟ ಕಲೆಯ ಪರಿಣತಿ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಮೈಸೂರು ಜಿಲ್ಲಾ ಕುಂಬಾರ ಸಂಘದ ವತಿಯಿಂದ ಆಯೋಜಿಸಿದ್ದ ರಾಜ್ಯ ಕುಂಬಾರರ ಮಹಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜ್ಞಾನದ ಬೆಳಕು ನೀಡಿದ ಕವಿ ಸರ್ವಜ್ಞರು ಕುಂಬಾರ ಸಮುದಾಯಕ್ಕೆ ಸೇರಿರುವುದು ಹೆಮ್ಮೆಯ ವಿಷಯವೆಂದು ಅಭಿಪ್ರಾಯಪಟ್ಟರು.
12ನೇ ಶತಮಾನದಲ್ಲೇ ಬಸವಣ್ಣನವರು ಕಾಯಕ ಮತ್ತು ದಾಸೋಹ ಎಂಬ ಸಾಮಾಜಿಕ ಮೌಲ್ಯಗಳನ್ನು ಸಮಾಜಕ್ಕೆ ನೀಡಿದ್ದರು. ಚತುರ್ವರ್ಣ ವ್ಯವಸ್ಥೆ ಇತಿಹಾಸದಿಂದ ಬಂದ ವ್ಯವಸ್ಥೆಯಾಗಿದ್ದು, ಆರ್ಥಿಕವಾಗಿ ಹಿಂದುಳಿದ ಶೂದ್ರ ವರ್ಗದವರು ಜನಸಂಖ್ಯೆಯ ಸುಮಾರು ಶೇ.80ರಷ್ಟಿದ್ದಾರೆ. ಆದರೆ ಅಕ್ಷರ ಸಂಸ್ಕೃತಿಯಿಂದ ಬಹುಪಾಲು ವಂಚಿತರಾಗಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಶಿಕ್ಷಣದ ಮಹತ್ವವನ್ನು ಮನಗಂಡು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಿದರು. ಶಿಕ್ಷಣವಿಲ್ಲದೆ ಮನುಷ್ಯನಾಗಿ, ಸ್ವಾಭಿಮಾನದಿಂದ ಬದುಕಲು ಸಾಧ್ಯವಿಲ್ಲ. ಸಂವಿಧಾನ ನೀಡಿದ ಬಳಿಕ ಎಲ್ಲರಿಗೂ ಸಮಾನ ಅವಕಾಶಗಳು ದೊರಕಿದವು. ಸ್ವಾತಂತ್ರ್ಯಾನಂತರ ಅನೇಕರು ವಿದ್ಯಾವಂತರಾಗಲು ಸಾಧ್ಯವಾಯಿತು ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಬೇಡರ ಜಾತಿಗೆ ಸೇರಿದ ವಾಲ್ಮೀಕಿ ರಾಮಾಯಣವನ್ನು ಬರೆದರೆ, ಬೆಸ್ತರ ಜಾತಿಗೆ ಸೇರಿದ ವ್ಯಾಸ ಮಹರ್ಷಿಗಳು ಮಹಾಭಾರತವನ್ನು ರಚಿಸಿದರು. ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿದ್ದ ರತ್ನಪ್ಪ ಭರಮಪ್ಪ ಕುಂಬಾರರು ಸಮುದಾಯದ ಧೀಮಂತ ನಾಯಕರಾಗಿದ್ದರು ಎಂದು ಅವರು ಸ್ಮರಿಸಿದರು.
ಜಾತಿ ವ್ಯವಸ್ಥೆಯನ್ನು ಬಳಸಿ ಜನರ ದಾರಿ ತಪ್ಪಿಸಲಾಗಿದೆ ಎಂದು ಟೀಕಿಸಿದ ಮುಖ್ಯಮಂತ್ರಿ, “ನಾನು ವಕೀಲ ಶಿಕ್ಷಣ ಪಡೆದಿದ್ದರಿಂದಲೇ ಇಂದು ಮುಖ್ಯಮಂತ್ರಿಯಾಗಿ ನಿಮ್ಮ ಎದುರಿರಲು ಸಾಧ್ಯವಾಗಿದೆ” ಎಂದರು. ಮಹಾನ್ ಜ್ಞಾನಿಯಾಗಿದ್ದ ಶ್ರೀ ನಾರಾಯಣ ಗುರುಗಳು ‘ಒಂದೇ ಧರ್ಮ, ಒಂದೇ ಜಾತಿ’ ಎಂಬ ತತ್ವವನ್ನು ಪ್ರತಿಪಾದಿಸಿದರು. ಅಸ್ಪೃಶ್ಯತೆಯಿಂದ ದೇಗುಲ ಪ್ರವೇಶಕ್ಕೆ ನಿರ್ಬಂಧವಿದ್ದ ಕಾಲದಲ್ಲಿ ಜನರಿಗೆ ತಮ್ಮದೇ ದೇವಾಲಯಗಳನ್ನು ನಿರ್ಮಿಸಿಕೊಳ್ಳುವಂತೆ ಕರೆ ನೀಡಿದ್ದರು ಎಂದು ಹೇಳಿದರು.
ಕುಂಬಾರ ಸಮುದಾಯದ ಬೇಡಿಕೆಗಳಿಗೆ ಸ್ಪಂದನೆ
ಕುಂಬಾರ ಸಮುದಾಯದ ಬೇಡಿಕೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಮುದಾಯದವರಿಗೆ ಬಿಡಿಎ ನಿವೇಶನ ಪಡೆಯಲು ಅಗತ್ಯ ಅನುದಾನ ನೀಡುವ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು. ಜೊತೆಗೆ ಕುಂಬಾರ ಅಭಿವೃದ್ಧಿ ನಿಗಮಕ್ಕೆ ಸೂಕ್ತ ಅನುದಾನ ಒದಗಿಸಲಾಗುವುದು. ಕುಂಬಾರ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಗಣ್ಯರ ಉಪಸ್ಥಿತಿ
ಶ್ರೀ ಕ್ಷೇತ್ರ ಮಾಣೀಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಬಿಜಾಪುರ ತೆಲಸಂಗದ ಶ್ರೀ ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ ಹಾಗೂ ಚಿತ್ರದುರ್ಗ ಕುಂಬಾರ ಗುಂಡಯ್ಯ ಮಹಾ ಸಂಸ್ಥಾನದ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಚಿವರುಗಳಾದ ಹೆಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ, ಕೆ. ವೆಂಕಟೇಶ್, ಉತ್ತರ ಪ್ರದೇಶ ಸರ್ಕಾರದ ಸಚಿವ ಧರ್ಮವೀರ್ ಪ್ರಜಾಪತಿ, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಜಿಲ್ಲೆಯ ಶಾಸಕರು, ನಾಯಕರು, ಕುಂಬಾರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಕುಂಬಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ. ಶ್ರೀನಿವಾಸನ್ ವೇಲು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.