ಬೆಂಗಳೂರು:ನಿರ್ದೇಶಕ ಜಡೇಶ್ ಅವರ ಸಾರಥ್ಯದಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾದ ‘ಲ್ಯಾಂಡ್ ಲಾರ್ಡ್’ ಚಿತ್ರವು ಸಿನಿಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕಥೆ, ನಟನೆ ಹಾಗೂ ಸಂದೇಶ— ಮೆಚ್ಚುಗೆ ಪಡೆದಿರುವ ಈ ಚಿತ್ರದ ಪ್ರಚಾರದ ಭಾಗವಾಗಿ ಬುಧವಾರ ಚಿತ್ರತಂಡದ ವತಿಯಿಂದ ಭರ್ಜರಿ ಜಾಥಾ ಆಯೋಜಿಸಲಾಗಿತ್ತು.
ಈ ಜಾಥಾದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ 500ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ನಟ ದುನಿಯಾ ವಿಜಯ್ (ಸಲಗ ವಿಜಯ್) ಭಾಗವಹಿಸಿದ್ದರು. ಸುಮಾರು 2 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಜಾಥಾ ಸಾಗಿದ್ದು, ಚಿತ್ರಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಬೆಂಬಲ ವ್ಯಕ್ತವಾಯಿತು.
ಜಾಥಾ ಸಂದರ್ಭದಲ್ಲೇ ನಟ ದುನಿಯಾ ವಿಜಯ್ ಅವರು ಒಂದು ಹೆಣ್ಣು ಮಗುವಿಗೆ ‘ಭೀಮ ಪುತ್ರಿ’ ಎಂದು ಹೆಸರಿಟ್ಟು ನಾಮಕರಣ ಮಾಡುವ ಮೂಲಕ ಮಾನವೀಯತೆ ಮೆರೆದರು. ಅಲ್ಲದೆ ಆ ಮಗುವಿನ ಭವಿಷ್ಯಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ₹25,000 ಹಾಗೂ ದುನಿಯಾ ವಿಜಯ್ ಅವರಿಂದ ₹75,000 ಸೇರಿ ಒಟ್ಟು ₹1 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು.
ಇದಾದ ಬಳಿಕ ಮಾತನಾಡಿದ ದುನಿಯಾ ವಿಜಯ್,
“ಡಾ. ಬಿ.ಆರ್. ಅಂಬೇಡ್ಕರ್ ರವರು ಬರೆದಿರುವ ಸಂವಿಧಾನ ಯಾವುದೋ ಒಂದು ಜಾತಿಗೆ ಸೀಮಿತವಲ್ಲ. ಇದು ಪ್ರತಿಯೊಬ್ಬ ಭಾರತೀಯನಿಗೂ ಅಗತ್ಯವಾದದ್ದು. ಈ ಹೋರಾಟ ಯಾರ ಮೇಲಿನ ದ್ವೇಷವೂ ಅಲ್ಲ, ಕಿಚ್ಚೂ ಅಲ್ಲ—ಇದು ನನ್ನ ಸಂವಿಧಾನಕ್ಕಾಗಿ ನಡೆಯುವ ಹೋರಾಟ” ಎಂದು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಬೆಂಬಲಿಗರಿಗೆ ಧನ್ಯವಾದಗಳನ್ನು ಅರ್ಪಿಸಿದ ಅವರು, ಯುವಜನತೆಯ ಬೆಂಬಲವೇ ತಮ್ಮ ಶಕ್ತಿ ಎಂದು ಹೇಳಿದರು.