ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ–2025ಕ್ಕೆ ಸರ್ವಾನುಮತದಿಂದ ಅನುಮೋದನೆ ದೊರೆತಿದೆ. ಜಾತಿ ಆಧಾರಿತ ಕಿರುಕುಳ, ಅಸಂವಿಧಾನಿಕ ಜಾತಿ ಪಂಚಾಯಿತಿಗಳು ಹಾಗೂ ಸಾಮಾಜಿಕ ಬಹಿಷ್ಕಾರದಂತಹ ಅಮಾನವೀಯ ಆಚರಣೆಗಳನ್ನು ತಡೆಹಿಡಿಯುವುದು ಈ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ.
ಸುದೀರ್ಘ ಚರ್ಚೆಯ ಬಳಿಕ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇಪ್ಪ ವಿಧೇಯಕವನ್ನು ಮಂಡಿಸಿದ್ದು, ಇದರಿಂದ ಶಾಲೆಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಸಾಮಾಜಿಕ ಬೇರ್ಪಡಿಕೆ ಕ್ರಮಗಳಿಗೆ ಕಾನೂನು ಮಟ್ಟದಲ್ಲಿ ತಡೆ ಸಿಗಲಿದೆ ಎಂದು ತಿಳಿಸಿದ್ದಾರೆ. ವಿಧೇಯಕದ ಪ್ರಮುಖ ಅಂಶವಾಗಿ, ಪೀಡಿತರು ಅಥವಾ ಅವರ ಕುಟುಂಬಸ್ಥರು ನೇರವಾಗಿ ಪೊಲೀಸರಿಗೆ ಅಥವಾ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ಗೆ ದೂರು ನೀಡುವ ಅವಕಾಶ ಕಲ್ಪಿಸಲಾಗಿದೆ.
ಇದಲ್ಲದೆ, ಗಂಭೀರ ಸಾಮಾಜಿಕ ಬಹಿಷ್ಕಾರ ಪ್ರಕರಣಗಳು ಬೆಳಕಿಗೆ ಬಂದ ಸಂದರ್ಭದಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬಹುದಾದ ವ್ಯವಸ್ಥೆಯನ್ನೂ ಸೇರಿಸಲಾಗಿದೆ. ಆಡಳಿತ ಮತ್ತು ವಿರೋಧ ಪಕ್ಷಗಳ ಒಗ್ಗಟ್ಟಿನ ಬೆಂಬಲದಿಂದ ವಿಧೇಯಕ ಅಂಗೀಕಾರವಾಗಿದ್ದು, ಮುಂದಿನ ದಿನಗಳಲ್ಲಿ ಜಾತಿ ಆಧಾರಿತ ಅನ್ಯಾಯಗಳನ್ನು ತಡೆಯುವಲ್ಲಿ ಈ ಕಾನೂನು ಮಹತ್ವದ ಪಾತ್ರ ವಹಿಸಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.