ಮಂಗಳೂರು: ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ.) ಇದರ ವತಿಯಿಂದ ನಮ್ಮ ಸಮುದಾಯದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಅವಹೇಳನಕಾರಿ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿ ಇಂದು (08-01-2026) ಮಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಜನಪ್ರತಿನಿಧಿಯಾಗಿರುವ ಶಾಸಕರ ಮೇಲೆ ಸಾಮಾಜಿಕ ಜಾಲತಾಣಗಳ ಮೂಲಕ ನಡೆದ ದಾಳಿ ಖಂಡನೀಯವಾಗಿದ್ದು, ಇಂತಹ ಕೃತ್ಯಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆಯಾಗಿವೆ ಎಂದು ಹೇಳಿದರು. ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಈ ಹಿನ್ನೆಲೆಯಲ್ಲಿ ಸಂಘದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಅಧಿಕೃತ ದೂರು ಸಲ್ಲಿಸಲಾಯಿತು. ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಅವರ ಗೌರವ ಮತ್ತು ಭದ್ರತೆಯನ್ನು ಕಾಪಾಡುವಂತೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಅವಹೇಳನಕಾರಿ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಗಣೇಶ್ ಪ್ರಸಾದ್, ರಾಜ್ಯ ಜೊತೆಕಾರ್ಯದರ್ಶಿಗಳಾದ ಸುರೇಶ್ ಪಿ.ಬಿ, ರಾಜ್ಯ ಗೌರವ ಸಲಹೆಗಾರರಾದ ಅನಿಲ್ ಕಂಕನಾಡಿ, ಬಂಟ್ವಾಳ ತಾಲೂಕು ಅಧ್ಯಕ್ಷರಾದ ಸಂತೋಷ್ ಭಂಡಾರಿಬೆಟ್ಟು ಹಾಗೂ ಮೂಡಬಿದ್ರಿ ತಾಲೂಕು ಅಧ್ಯಕ್ಷರಾದ ಶಿವರಾಮ್ ಆನಡ್ಕ ಉಪಸ್ಥಿತರಿದ್ದರು.