ಬೀದರ್: ಹುಮನಾಬಾದ್ನಲ್ಲಿ ಬಿಜೆಪಿ ಶಾಸಕ ಸಿದ್ದು ಪಾಟೀಲ್ ಹಾಗೂ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ನಡುವಿನ ಗಲಾಟೆಯಿಂದ ರಾಜಕೀಯ ವಾತಾವರಣ ಉದ್ವಿಗ್ನಗೊಂಡಿದೆ. ಸಭೆಯ ವೇಳೆ ನಡೆಯುತ್ತಿದ್ದ ಚರ್ಚೆ ಪರಸ್ಪರ ಆರೋಪ–ಪ್ರತ್ಯಾರೋಪಗಳಿಗೆ ತಿರುಗಿ, ಮಾತಿನ ಚಕಮಕಿ ಕ್ಷಣಾರ್ಧದಲ್ಲೇ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಘಟನೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಹದಗೆಡಬಹುದೆಂಬ ಆತಂಕದಿಂದ ಆಡಳಿತವು ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿದೆ.
ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನಾದ್ಯಂತ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ತಹಸೀಲ್ದಾರರು ಹಾಗೂ ತಾಲ್ಲೂಕಾ ದಂಡಾಧಿಕಾರಿ ವಿ. ಅಂಜುಮ ತಬಸ್ಸುಮ್ ಕೆ.ಎ.ಎಸ್ ಅವರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಆದೇಶದಂತೆ ಐದು ಜನಕ್ಕಿಂತ ಹೆಚ್ಚು ಮಂದಿ ಗುಂಪುಗಳಾಗಿ ತಿರುಗಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇದಲ್ಲದೆ ಸಾರ್ವಜನಿಕರು ಯಾವುದೇ ರೀತಿಯ ಆಯುಧ, ಲಾಠಿ, ಚಾಕು, ಚೂರಿ, ಕತ್ತಿ, ತಲವಾರ ಸೇರಿದಂತೆ ಮಾನವ ಜೀವಕ್ಕೆ ಅಪಾಯ ಉಂಟುಮಾಡಬಹುದಾದ ಚೂಪಾದ ಅಥವಾ ಅರಿತ ವಸ್ತುಗಳನ್ನು ಹೊತ್ತುಕೊಂಡು ಸಂಚರಿಸುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟುಮಾಡುವ ಯಾವುದೇ ಪಕ್ಷ ಅಥವಾ ವ್ಯಕ್ತಿಯ ಪರ–ವಿರೋಧ ಘೋಷಣೆಗಳು, ಪ್ರಚೋದನಕಾರಿ ಭಾಷಣಗಳು ಹಾಗೂ ರಾಜಕೀಯ ಸಂಬಂಧಿತ ವಿಚಾರಗಳನ್ನು ಗುಂಪುಗಳಲ್ಲಿ ಚರ್ಚೆ ಮಾಡುವುದಕ್ಕೂ ಕಟ್ಟುನಿಟ್ಟಿನ ತಡೆ ಹೇರಲಾಗಿದೆ.
ನಿಷೇಧಾಜ್ಞೆಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಆಡಳಿತ ಸ್ಪಷ್ಟಪಡಿಸಿದೆ. ಈ ಆದೇಶದ ಪ್ರತಿಯನ್ನು ಮಾಹಿತಿ ಹಾಗೂ ಸೂಕ್ತ ಕ್ರಮಕ್ಕಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಅಬಕಾರಿ ಉಪ ಆಯುಕ್ತರು, ಬಸವಕಲ್ಯಾಣ ಉಪ ವಿಭಾಗಾಧಿಕಾರಿಗಳು, ಹುಮನಾಬಾದ್ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು, ಹುಮನಾಬಾದ್ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರು ಹಾಗೂ ಉಪ ನಿರೀಕ್ಷಕರಿಗೆ ಕಳುಹಿಸಲಾಗಿದೆ.
ಸಾರ್ವಜನಿಕರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಆಡಳಿತದೊಂದಿಗೆ ಸಹಕರಿಸಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವಂತೆ ತಾಲೂಕು ಆಡಳಿತ ಮನವಿ ಮಾಡಿಕೊಂಡಿದೆ.
ವರದಿ: ಅರವಿಂದ ಮಲ್ಲೀಗೆ