ಹೊಸ ವರ್ಷದ ಶುಭಾಶಯಗಳ ಹೆಸರಿನಲ್ಲಿ ಸೈಬರ್ ವಂಚನೆ: ಸಾರ್ವಜನಿಕರಿಗೆ ಎಚ್ಚರಿಕೆ
ಹೊಸ ವರ್ಷದ ಸಂಭ್ರಮದ ನಡುವೆಯೇ ಸೈಬರ್ ವಂಚಕರು ಹೊಸ ಹೊಸ ತಂತ್ರಗಳ ಮೂಲಕ ಸಾರ್ವಜನಿಕರನ್ನು ವಂಚಿಸಲು ಮುಂದಾಗಿದ್ದಾರೆ. ಹೊಸ ವರ್ಷದ ಶುಭಾಶಯಗಳ ಹೆಸರಿನಲ್ಲಿ ಮೊಬೈಲ್ಗೆ ಬರುವ ಮೆಸೇಜ್ಗಳು ಇದೀಗ ದೊಡ್ಡ ಅಪಾಯವಾಗುತ್ತಿವೆ.
ವಂಚನೆ ಹೇಗೆ ?
ವಂಚಕರು ಮೊದಲು “Happy New Year” ಅಥವಾ “ಹೊಸ ವರ್ಷದ ಶುಭಾಶಯಗಳು” ಎಂಬ ಸಂದೇಶವನ್ನು ಕಳುಹಿಸಿ, ಅದರ ಕೆಳಗೆ ಎಪಿಕೆ (APK) ಲಿಂಕ್ ಅನ್ನು ಸೇರಿಸುತ್ತಿದ್ದಾರೆ. ಆಕರ್ಷಕವಾಗಿ ಕಾಣುವ ಈ ಲಿಂಕ್ ಮೇಲೆ ತಪ್ಪಿತಸ್ಥವಾಗಿ ಕ್ಲಿಕ್ ಮಾಡಿದರೆ, ಬಳಕೆದಾರರ ಮೊಬೈಲ್ಗೆ ಮಾಲ್ವೇರ್ ಪ್ರವೇಶಿಸುವ ಸಾಧ್ಯತೆ ಇದೆ. ಒಮ್ಮೆ ಆ ಲಿಂಕ್ ಓಪನ್ ಮಾಡಿದರೆ ಸಾಕು ಮೊಬೈಲ್ನಲ್ಲಿರುವ ಕಾಂಟಾಕ್ಟ್ ವಿವರಗಳು, ಗ್ಯಾಲರಿಯಲ್ಲಿನ ಫೋಟೋಗಳು, ವೈಯಕ್ತಿಕ ಮಾಹಿತಿ ಸೇರಿದಂತೆ ಮಹತ್ವದ ಡೇಟಾ ಸಂಪೂರ್ಣವಾಗಿ ವಂಚಕರ ಕೈಗೆ ಬೀಳುವ ಅಪಾಯವಿದೆ. ಇದರಿಂದಾಗಿ ಬಳಕೆದಾರರ ಬ್ಯಾಂಕ್ ಖಾತೆ ವಿವರಗಳಿಗೂ ವಂಚಕರು ಪ್ರವೇಶ ಪಡೆಯಬಹುದು. ನಂತರ ಆ ಮಾಹಿತಿಯನ್ನು ಬಳಸಿಕೊಂಡು ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಸೈಬರ್ ಕ್ರೈಮ್ ಖಾತೆಗಳಿಗೆ ವರ್ಗಾಯಿಸುವ ಘಟನೆಗಳು ವರದಿಯಾಗಿವೆ.
ಎಚ್ಚರಿಕೆ ವಹಿಸಿ
ಸೈಬರ್ ತಜ್ಞರ ಪ್ರಕಾರ, ಈ ರೀತಿಯ ಎಪಿಕೆ ಲಿಂಕ್ಗಳು ಅಧಿಕೃತ ಆಪ್ ಸ್ಟೋರ್ಗಳ ಮೂಲಕ ಬರುವುದಲ್ಲ. ಆದ್ದರಿಂದ ಅಪರಿಚಿತ ಸಂಖ್ಯೆಯಿಂದ ಬರುವ ಲಿಂಕ್ಗಳನ್ನು ಯಾವ ಕಾರಣಕ್ಕೂ ಕ್ಲಿಕ್ ಮಾಡಬಾರದು. ಹೊಸ ವರ್ಷದ ಶುಭಾಶಯಗಳೆಂದು ಬಂದ ಸಂದೇಶಗಳನ್ನೂ ಪರಿಶೀಲಿಸದೇ ಓಪನ್ ಮಾಡುವುದು ಅಪಾಯಕಾರಿಯಾಗಿದೆ ಎಂದು ಎಚ್ಚರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚು ಜಾಗರೂಕರಾಗಬೇಕು. ಯಾವುದೇ ಅನುಮಾನಾಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡುವ ಮುನ್ನ ಹಲವಾರು ಬಾರಿ ಯೋಚಿಸುವುದು ಅಗತ್ಯ. ಎಚ್ಚರಿಕೆ ವಹಿಸಿದರೆ ಮಾತ್ರ ಇಂತಹ ಸೈಬರ್ ವಂಚನೆಗಳಿಂದ ದೂರವಿರಲು ಸಾಧ್ಯವಾಗುತ್ತದೆ ಎಂದು ಪೊಲೀಸ್ ಹಾಗೂ ಸೈಬರ್ ವಿಭಾಗ ತಿಳಿಸಿದೆ.