ಮಂಗಳೂರು ಹೊರವಲಯದ ಮಂಜಲ್ಪಾದೆ ಪ್ರದೇಶದಲ್ಲಿ “ಭೂತ ದಾಳಿ” ಎಂದು ಹೇಳಲಾಗುತ್ತಿರುವ ಫೋಟೋ, ವೀಡಿಯೋ ಹಾಗೂ ಆಡಿಯೋಗಳು ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ರಾತ್ರಿ ವೇಳೆ ತೆಗೆದಂತಿರುವ ಅಸ್ಪಷ್ಟ ದೃಶ್ಯ, ಹಾಗೂ ವ್ಯಕ್ತಿಯ ಬೆನ್ನಿನ ಮೇಲೆ ಗಾಯಗಳಿರುವ ಫೋಟೋಗಳನ್ನು ಸೇರಿಸಿ, ‘ಭೂತ ದಾಳಿ ನಡೆದಿದೆ’ ಎಂಬ ರೀತಿಯಲ್ಲಿ ಹಂಚಲಾಗುತ್ತಿದೆ.
ಆದರೆ ಈ ವೈರಲ್ ಪೋಸ್ಟ್‌ಗಳ ಮೂಲವನ್ನು ಪರಿಶೀಲಿಸಿದಾಗ, ಇದೇ ಫೋಟೋ ಮತ್ತು ವಿಷಯವು 2025 ಫೆಬ್ರವರಿ 16ರಂದು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಅಪ್ಲೋಡ್ ಆಗಿದ್ದದ್ದು ಕಂಡುಬಂದಿದೆ. “ತಮಿಳುನಾಡಿನಲ್ಲಿ ನನ್ನ ಸ್ನೇಹಿತನ ಮೇಲೆ ಭೂತ ದಾಳಿ” ಎಂಬ ಹೇಳಿಕೆಯಲ್ಲಿ ಈ ಚಿತ್ರಗಳನ್ನು ಹಂಚಲಾಗಿದ್ದು, ಇದೀಗ ಅದನ್ನೇ ಮಂಗಳೂರು ಮಂಜಲ್ಪಾದೆ ಘಟನೆಯಂತೆ ಮತ್ತೆ ಹರಡಲಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ವೈರಲ್ ಆಗುತ್ತಿರುವ ಚಿತ್ರದಲ್ಲಿ ಕಾಣುವ “ಭೂತ” ದೃಶ್ಯವು ಅಸ್ಪಷ್ಟ, ಬ್ಲರ್ ಮತ್ತು ಸ್ಪಷ್ಟತೆ ಇಲ್ಲದಂತಿದ್ದು, ಇಂತಹ ದೃಶ್ಯಗಳು AI ಮೂಲಕ ಸೃಷ್ಟಿಸಿದ ಅಥವಾ ಸಂಪಾದಿತ ಚಿತ್ರಗಳಾಗಿರಬಹುದೆಂಬ ಸಾಧ್ಯತೆಯೂ ತಜ್ಞರು ಸೂಚಿಸುತ್ತಿದ್ದಾರೆ. ಮತ್ತೊಂದೆಡೆ, ಗಾಯಗೊಂಡ ವ್ಯಕ್ತಿಯ ಬೆನ್ನಿನ ಫೋಟೋ ಮಾತ್ರದಿಂದ ‘ಭೂತ ದಾಳಿ’ ಎಂದು ದೃಢಪಡಿಸಲು ಸಾಧ್ಯವಿಲ್ಲ; ಅಪಘಾತ, ಪ್ರಾಣಿ ಗೀಳು ಅಥವಾ ಇತರೆ ಕಾರಣಗಳಿಂದಲೂ ಇಂತಹ ಗಾಯಗಳು ಉಂಟಾಗಬಹುದು ಎಂದು ಹೇಳಲಾಗಿದೆ.
ಸ್ಥಳೀಯರಲ್ಲಿ ಆತಂಕ ಮೂಡಿಸಿರುವ ಈ ವೈರಲ್ ಫೋಟೋ-ವೀಡಿಯೋಗಳ ಹಿನ್ನೆಲೆ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ಪ್ರದೇಶದಲ್ಲಿ ಯಾವುದಾದರೂ ಅವ್ಯವಹಾರ ನಡೆಯುತ್ತಿದೆಯೇ ಅಥವಾ ತಪ್ಪು ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಹರಡಲಾಗುತ್ತಿದೆಯೇ ಎಂಬ ಅನುಮಾನಕ್ಕೂ ಇದು ಕಾರಣವಾಗಿದೆ.
ಸ್ಥಳೀಯರು ಮತ್ತು ಸಾರ್ವಜನಿಕರು ದೃಢಪಟ್ಟ ಮಾಹಿತಿಯಿಲ್ಲದೆ ಇಂತಹ ಪೋಸ್ಟ್‌ಗಳನ್ನು ಹಂಚಬಾರದು ಎಂದು ಮನವಿ ಮಾಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡ ವೈರಲ್ ವಿಷಯಗಳ ಬಗ್ಗೆ ಪರಿಶೀಲನೆ ನಡೆಸಿ, ನಿಜಾಸ್ತಿ ಸ್ಪಷ್ಟಪಡಿಸುವ ಅಗತ್ಯವಿದೆ ಎಂಬ ಒತ್ತಾಯ ಕೇಳಿಬರುತ್ತಿದೆ.