ಬೀದರ್: ಜಿಲ್ಲೆಯ 12ನೇ ಶತಮಾನದ ಶರಣರಲ್ಲಿ ಒಬ್ಬರಾದ ಶಿವಯೋಗಿ ಸಿದ್ದರಾಮೇಶ್ವರರು ಜಾತಿರಹಿತ, ಮಾನವೀಯ ಮೌಲ್ಯಗಳಿಂದ ಕೂಡಿದ ಸಮಾಜ ನಿರ್ಮಾಣಕ್ಕೆ ಶ್ರಮಿಸಿ ಸಮಾನತೆಯ ಸಂದೇಶವನ್ನು ಸಾರಿದ ಮಹಾನ್ ಚಿಂತಕರಾಗಿದ್ದಾರೆ ಎಂದು ಸಂತಪೂರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಿದ್ಧಾರೆಡ್ಡಿ ಬಿರಾದರ್ ಹೇಳಿದರು.
ಸಂತಪೂರದ ಶಿವಯೋಗಿ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಸಮಾನತೆ, ಮಾನವೀಯತೆ ಮತ್ತು ಶೋಷಣೆಯ ವಿರುದ್ಧದ ಚಿಂತನೆಗಳನ್ನು ವಚನಗಳ ಮೂಲಕ ಜನರಿಗೆ ತಲುಪಿಸಿದ ಶಿವಯೋಗಿ ಸಿದ್ದರಾಮೇಶ್ವರರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ನವೀಲಕುಮಾರ ಉತ್ಕಾರ ಮಾತನಾಡಿ, “‘ಕೆಲಸವೇ ದೇವರು’ ಎಂಬ ತತ್ತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡ ಕರ್ಮಯೋಗಿಯಾಗಿದ್ದ ಶಿವಯೋಗಿ ಸಿದ್ದರಾಮೇಶ್ವರರು ಕಲ್ಯಾಣ ಕ್ರಾಂತಿ ಹಾಗೂ ವಚನಗಳ ಮೂಲಕ ಸಮಾಜದಲ್ಲಿನ ಅನಿಷ್ಟ ಪದ್ಧತಿಗಳನ್ನು ಧೈರ್ಯವಾಗಿ ವಿರೋಧಿಸಿ ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಕಿರಣಕುಮಾರ ಬಿರಾದರ್, ಉಪನ್ಯಾಸಕರಾದ ಮಹಾಂತೇಶ ಪಾಂಚಾಳ, ಸುರೇಶ್ ಬಂಡೆ, ರಾಜಕುಮಾರ ಹಳ್ಳಿಕರ್, ಸಂತೋಷ್ ಧೂಳ್ಗೆಂಡೆ, ಸುಧೀರ್ ಅಲೂರೆ, ಪ್ರಿಯಾಂಕಾ ಗೊನ್ನಳಿಕರ್ ಹಾಗೂ ಮೀರಾತಾಯಿ ಕಾಂಬಳೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ ರೇಣುಕಾ ಅನಿಲಕುಮಾರ, ಗೀತಾ ನರಸಪ್ಪ ಮತ್ತು ವೈಷ್ಣವಿ ಸಿದ್ದಪ್ಪ ಅವರನ್ನು ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಸನ್ಮಾನಿಸಲಾಯಿತು.