Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಸಂಡೇ ಬಜಾರ್ ವ್ಯಾಪಾರಿಗಳಿಗೆ ಮುಕ್ತ ಅವಕಾಶ ನೀಡದಿದ್ದರೆ ಹೋರಾಟ ತೀವ್ರ: ಮುನೀರ್ ಕಾಟಿಪಳ್ಳ ಎಚ್ಚರಿಕೆಎಳೆಯ ಮನಸುಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿದಾಗ ಮಾತ್ರ ಸ್ವಚ್ಛ ಪರಿಸರ ನಿರ್ಮಾಣ ಸಾಧ್ಯ: ಸಿ. ಅರ್ಪಿತಾಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಂಚಲನ: ಉದ್ಧವ್ ಠಾಕ್ರೆ ಬಣಕ್ಕೆ ಮತ್ತೊಂದು ಆಘಾತ?ಸರ್ಕಾರಿ ನೌಕರರಿಗೆ ಸೌಲಭ್ಯಗಳು ಹೆಚ್ಚುತ್ತಿವೆ; ಆದರೆ ಸರ್ಕಾರಿ ಸಂಸ್ಥೆಗಳ ಭವಿಷ್ಯ ಏನು?ರೈತರಿಗೆ, ಜಾಗೃತಿಯೇ ಅಂತಿಮ ಗುರಾಣಿಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಒಪ್ಪಂದ ರದ್ದುಪಡಿಸಿ: ಸಿಪಿಐಎಂ ಆಗ್ರಹಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್: ಮಂಗಳೂರಿನಲ್ಲಿ FIR ದಾಖಲುಮೋದಿ ಸರ್ಕಾರದ ನೀತಿಗಳಿಂದ ಕಾರ್ಮಿಕ ವರ್ಗದ ಬದುಕು ವಿನಾಶದತ್ತ: ಸುಕುಮಾರ್ ತೊಕ್ಕೋಟು • 🔥
Advertisement

ಉಪ್ಪು ನೀರಿನಲ್ಲಿ ಕರಗುತ್ತದೆ ! ಬುದ್ಧಿವಂತಿಕೆ ಯಾವ ದ್ರಾವಣದಲ್ಲಿ ಕರಗುತ್ತಿದೆ ?

ಉಪ್ಪು ನೀರಿನಲ್ಲಿ ಕರಗುತ್ತದೆ ! ಬುದ್ಧಿವಂತಿಕೆ ಯಾವ ದ್ರಾವಣದಲ್ಲಿ ಕರಗುತ್ತಿದೆ ?

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಚಿತ್ರ ಸ್ಕಿಟ್ ನೋಡಿದರೆ ನಗಬೇಕೋ, ಅಳಬೇಕೋ ತಿಳಿಯದ ಸ್ಥಿತಿ ಉಂಟಾಗುತ್ತದೆ. ‘ಉಪ್ಪು’ ಮತ್ತು ‘ದೇವರಿದ್ದಾನೆ’ ಎಂಬ ಕಾನ್ಸೆಪ್ಟ್‌ನ್ನು ಜೋಡಿಸಿ, ದೇವರ ಅಸ್ತಿತ್ವವನ್ನು ಸಾಬೀತುಪಡಿಸುವ ಹೆಸರಿನಲ್ಲಿ ರೂಪಿಸಿದ ಈ ನಾಟಕವು ನಿಜಕ್ಕೂ ಬುದ್ಧಿವಂತಿಕೆಯನ್ನು ಅವಮಾನಿಸುವಂತಿದೆ.

ಸ್ಕಿಟ್‌ನ ಕಥೆಯ ಪ್ರಕಾರ, ಒಬ್ಬ ಹುಡುಗ ಎಲ್ಲಿಗೂ ಹೋಗಲು ಹೆದರದೆ, “ನನಗೆ ಏನೂ ಆಗಲ್ಲ, ದೇವರಿದ್ದಾನೆ” ಎಂದು ಹೇಳುತ್ತಾನೆ. ಅಲ್ಲಿ ದೇವರನ್ನು ನಂಬದಂತೆ ನಟಿಸುವ ವ್ಯಕ್ತಿ, ದೇವರಿಲ್ಲ ಎಂದು ವಾದಿಸುತ್ತಾನೆ. ಬಳಿಕ ಹುಡುಗ ಒಂದು ನೀರಿನ ಬಾಟಲ್ ತೆಗೆದು, “ಉಪ್ಪು ಕಾಣುತ್ತಿದೆಯಾ?” ಎಂದು ಕೇಳುತ್ತಾನೆ. “ಕಾಣುತ್ತಿದೆ” ಎನ್ನುವ ಉತ್ತರ ಬರುತ್ತದೆ. ನಂತರ ನೀರಿಗೆ ಉಪ್ಪು ಹಾಕಿ, “ಈಗ ಉಪ್ಪು ಕಾಣ್ತಿದೆಯಾ?” ಎಂದಾಗ “ಇಲ್ಲ” ಎನ್ನಲಾಗುತ್ತದೆ. ಆದರೆ ನೀರು ಕುಡಿಯಲು ಹೇಳಿದಾಗ ಉಪ್ಪಿನ ರುಚಿ ಬರುತ್ತದೆ. ಆಗ ಹುಡುಗ, “ಉಪ್ಪು ಇದೆ ಅಂದ ಮೇಲೆ ದೇವರೂ ಇದ್ದಾನೆ” ಎಂಬ ತೀರ್ಮಾನಕ್ಕೆ ಬರುತ್ತಾನೆ.

ಇದನ್ನೂ ಓದಿ: ಸಂಡೇ ಬಜಾರ್ ವ್ಯಾಪಾರಿಗಳಿಗೆ ಮುಕ್ತ ಅವಕಾಶ ನೀಡದಿದ್ದರೆ ಹೋರಾಟ ತೀವ್ರ: ಮುನೀರ್ ಕಾಟಿಪಳ್ಳ ಎಚ್ಚರಿಕೆ

ಇಲ್ಲಿ ಸಮಸ್ಯೆ ಏನೆಂದರೆ—ಈ ವಾದವೇ ತರ್ಕವಿರೋಧಿ. ಉಪ್ಪು ನೀರಿನಲ್ಲಿ ಕರಗುತ್ತದೆ ಎಂಬುದು ಎಂಟನೇ ತರಗತಿಯ ವಿಜ್ಞಾನ ಜ್ಞಾನ. ಅದೇ ನೀರನ್ನು ಕುದಿಸಿ, ಬಾಷ್ಪೀಕರಣದ ಮೂಲಕ ಉಪ್ಪನ್ನು ಮತ್ತೆ ಪಡೆಯಬಹುದು ಎಂಬುದೂ ಜಗತ್ತಿಗೆ ಜಾಹೀರಾದ ಸತ್ಯ. ಆದರೆ ಈ ಸ್ಕಿಟ್‌ನಲ್ಲಿ ದೇವರನ್ನು ನಂಬದ ವ್ಯಕ್ತಿ ನಿಜವಾಗಿಯೂ ದೇವರನ್ನು ನಂಬದ ಜ್ಞಾನಶೀಲ ವ್ಯಕ್ತಿಯಂತೆ ವರ್ತಿಸುವುದಿಲ್ಲ; ಅವನು ಕೇವಲ ಸ್ಕ್ರಿಪ್ಟ್‌ಗೆ ತಕ್ಕಂತೆ ಅಜ್ಞಾನಿಯಾಗಿ ನಟನೆ ಮಾಡುತ್ತಾನೆ.

ನಿಜವಾದ ವೈಜ್ಞಾನಿಕ ದೃಷ್ಟಿಕೋನ ಹೊಂದಿದ ವ್ಯಕ್ತಿ, “ಉಪ್ಪು ಕಾಣಿಸದಿದ್ದರೂ ಅದು ಅಸ್ತಿತ್ವದಲ್ಲಿದೆ, ಏಕೆಂದರೆ ಅದು ದ್ರಾವಣದಲ್ಲಿ ಕರಗಿದೆ” ಎಂದು ಹೇಳುತ್ತಿದ್ದ. ಎಲ್ಲಿ ಎಂದರೆ ಆ ನೀರನ್ನು ಕುದಿಸಿ ಪ್ರಯೋಗತ್ಮಕವಾಗಿ ತೋರಿಸುತ್ತಿದ್ದ.. ಆದರೆ ಇಲ್ಲಿ ಅಂಥ ತರ್ಕಕ್ಕೆ ಜಾಗವೇ ಇಲ್ಲ. ಕಾರಣ, ಈ ಸ್ಕಿಟ್‌ನ ಉದ್ದೇಶ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಅಲ್ಲ; ಪ್ರಶ್ನೆ ಕೇಳುವವರನ್ನೇ ಮೂರ್ಖರಂತೆ ತೋರಿಸುವುದು.

ಇಂಥ ಸ್ಕಿಟ್‌ಗಳನ್ನು ಬರೆದವರು ಉದ್ದೇಶಪೂರ್ವಕವಾಗಿ ಮೌಢ್ಯವನ್ನು ಹರಡುತ್ತಿದ್ದಾರೆಯೇ ಎಂಬ ಅನುಮಾನ ಸಹಜವಾಗಿ ಬರುತ್ತದೆ. ದೇವರ ನಂಬಿಕೆಯನ್ನು ಸಮರ್ಥಿಸುವುದಕ್ಕೆ ವಿಜ್ಞಾನವನ್ನೇ ತಪ್ಪಾಗಿ ಬಳಸುವುದು, ನಂಬಿಕೆಗೆ ಗೌರವ ತರುವುದಿಲ್ಲ; ಬದಲಾಗಿ ನಂಬಿಕೆಯನ್ನೇ ಹಾಸ್ಯಾಸ್ಪದವಾಗಿಸುತ್ತದೆ.

ನಂಬಿಕೆ ವ್ಯಕ್ತಿಯ ವೈಯಕ್ತಿಕ ಆಯ್ಕೆ. ಆದರೆ ಅದನ್ನು ಸಾಬೀತುಪಡಿಸುವ ಹೆಸರಿನಲ್ಲಿ ಅಜ್ಞಾನವನ್ನು, ತಪ್ಪು ತರ್ಕವನ್ನು, ಮೌಢ್ಯವನ್ನು ಹರಡುವುದು ಅಪಾಯಕಾರಿ. ದೇವರಿದ್ದಾನೋ ಇಲ್ಲವೋ ಎಂಬ ಪ್ರಶ್ನೆಗೆ ಉತ್ತರ ಸ್ಕಿಟ್‌ಗಳಲ್ಲಿ ಅಲ್ಲ; ಆ ಪ್ರಶ್ನೆಯನ್ನು ಕೇಳುವ ಸ್ವಾತಂತ್ರ್ಯದಲ್ಲೂ, ತರ್ಕಬದ್ಧ ಚರ್ಚೆಯಲ್ಲೂ ಇದೆ.

ಉಪ್ಪು ನೀರಿನಲ್ಲಿ ಕರಗುತ್ತದೆ. ಪ್ರಶ್ನೆ ಮಾತ್ರ ಉಳಿಯುತ್ತದೆ—ನಮ್ಮ ಸಮಾಜದ ಬುದ್ಧಿವಂತಿಕೆ ಯಾವ ದ್ರಾವಣದಲ್ಲಿ ಕರಗುತ್ತಿದೆ?

😀
0
😍
0
😢
0
😡
0
👍
0
👎
0

Web Add
Prajapara News Kannada