Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಒಪ್ಪಂದ ರದ್ದುಪಡಿಸಿ: ಸಿಪಿಐಎಂ ಆಗ್ರಹ

ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಒಪ್ಪಂದ ರದ್ದುಪಡಿಸಿ: ಸಿಪಿಐಎಂ ಆಗ್ರಹ

ಯು.ಟಿ. ಖಾದರ್ ಖಾಸಗಿ ವೈದ್ಯಕೀಯ ಕಾಲೇಜುಗಳ ಸಚಿವರಂತೆ ವರ್ತಿಸುತ್ತಿದ್ದಾರೆ: ಮುನೀರ್ ಕಾಟಿಪಳ್ಳ ಟೀಕೆ

ಉಳ್ಳಾಲ: ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸುವ ಒಪ್ಪಂದವನ್ನು ತಕ್ಷಣ ರದ್ದುಗೊಳಿಸಬೇಕು ಹಾಗೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಸಿಪಿಐಎಂ ಉಳ್ಳಾಲ ವಲಯ ಸಮಿತಿ ನೇತೃತ್ವದಲ್ಲಿ ಉಳ್ಳಾಲ ಸಮುದಾಯ ಆಸ್ಪತ್ರೆ ಮುಂಭಾಗ ಮಾನವ ಸರಪಳಿ ಪ್ರತಿಭಟನೆ ನಡೆಯಿತು.

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ
ಉಳ್ಳಾಲ ಸಮುದಾಯ ಆಸ್ಪತ್ರೆ ಮುಂಭಾಗ ಸಿಪಿಐಎಂ ನೇತೃತ್ವದಲ್ಲಿ ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಮಾನವ ಸರಪಳಿ ಪ್ರತಿಭಟನೆ ನಡೆಸಲಾಯಿತು

ಪ್ರತಿಭಟನೆಯ ಬಳಿಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಆರೋಗ್ಯ ಕ್ಷೇತ್ರದ ವ್ಯಾಪಾರೀಕರಣವು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು. ಖಾಸಗಿ ಆಸ್ಪತ್ರೆಗಳ ಏಕಸ್ವಾಮ್ಯದಿಂದ ಜಿಲ್ಲೆಯ ಆರೋಗ್ಯ ಸೇವೆ ದುರ್ಬಲಗೊಂಡಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಜನಪ್ರತಿನಿಧಿಗಳು ಖಾಸಗಿ ಮೆಡಿಕಲ್ ಕಾಲೇಜುಗಳ ಹಿತಾಸಕ್ತಿಯನ್ನು ಕಾಪಾಡುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸುವ ಕ್ರಮವು ಸಾರ್ವಜನಿಕ ಆಸ್ಪತ್ರೆಗಳ ಪಾಲಿಗೆ “ಮರಣ ಶಾಸನ”ವಾಗಿದ್ದು, ಈ ವಿಷಯದಲ್ಲಿ ಬಿಜೆಪಿಯ ಮೌನ ಪ್ರಶ್ನಾರ್ಹವಾಗಿದೆ ಎಂದು ಅವರು ಹೇಳಿದರು. ಉಳ್ಳಾಲ ಸಮುದಾಯ ಆಸ್ಪತ್ರೆಯನ್ನು ಖಾಸಗಿ ಸಂಸ್ಥೆಗೆ ಹಸ್ತಾಂತರಿಸಿದ ಪರಿಣಾಮ ಆಸ್ಪತ್ರೆಯ ಸೇವೆಗಳು ಸೀಮಿತಗೊಂಡಿವೆ ಎಂದು ಆರೋಪಿಸಿದ ಅವರು, “ಯು.ಟಿ. ಖಾದರ್ ಅವರನ್ನು ಚುನಾಯಿಸಿದ್ದು ಉಳ್ಳಾಲದ ಸಾಮಾನ್ಯ ಜನತೆ. ಆದರೆ ಅವರು ಖಾಸಗಿ ಆಸ್ಪತ್ರೆಗಳ ಸಚಿವರಂತೆ ವರ್ತಿಸುತ್ತಿದ್ದಾರೆ” ಎಂದು ಟೀಕಿಸಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದ ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಜನರ ಆರೋಗ್ಯವನ್ನು ಕಾಪಾಡಬೇಕಾದ ರಾಜ್ಯ ಸರ್ಕಾರವೇ ಆರೋಗ್ಯ ಕ್ಷೇತ್ರವನ್ನು ಖಾಸಗಿಯವರ ಸುಪರ್ದಿಗೆ ನೀಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು. ಆರೋಗ್ಯ ಕ್ಷೇತ್ರದ ಖಾಸಗೀಕರಣದಿಂದ ಸಾಮಾನ್ಯ ಜನರ ಮೇಲಿನ ಹೊರೆ ಹೆಚ್ಚಲಿದ್ದು, ಈ ನಿಟ್ಟಿನಲ್ಲಿ ಯು.ಟಿ. ಖಾದರ್ ಅವರ ನಡೆ ಜನಹಿತಕ್ಕೆ ವಿರುದ್ಧವಾಗಿದೆ ಎಂದು ವ್ಯಂಗ್ಯವಾಡಿದರು.

ಸಭೆಯನ್ನು ಸಿಪಿಐಎಂ ಹಿರಿಯ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್ ಹಾಗೂ ಯು. ಜಯಂತ ನಾಯಕ್ ಉದ್ದೇಶಿಸಿ ಮಾತನಾಡಿದರು.
ಮಾನವ ಸರಪಳಿ ಪ್ರತಿಭಟನೆಯಲ್ಲಿ ಸಿಪಿಐಎಂ ಜಿಲ್ಲಾ ನಾಯಕರಾದ ಶೇಖರ್ ಕುಂದರ್, ರಫೀಕ್ ಹರೇಕಳ, ಪದ್ಮಾವತಿ ಶೆಟ್ಟಿ ಸೇರಿದಂತೆ ಹಲವು ಮುಖಂಡರು, ಡಿವೈಎಫ್‌ಐ ಜಿಲ್ಲಾ ನಾಯಕರಾದ ರಿಜ್ವಾನ್ ಹರೇಕಳ, ಅಮೀರ್ ಉಳ್ಳಾಲಬೈಲ್, ಅಶ್ಫಾಕ್ ಅಳೇಕಲ ಹಾಗೂ ನೂರಾರು ಸಂಖ್ಯೆಯ ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading