Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ದುಬಾರೆಯಲ್ಲಿ ಆನೆ ಕಾದಾಟದ ದುರಂತ: ಮಹಿಳೆ ಸಾವು – ವನ್ಯಜೀವಿಗಳಿಂದ ಸುರಕ್ಷಿತ ಅಂತರ ಕಾಪಾಡಲು ಸಚಿವ ಈಶ್ವರ ಖಂಡ್ರೆ ಸೂಚನೆ

ದುಬಾರೆಯಲ್ಲಿ ಆನೆ ಕಾದಾಟದ ದುರಂತ: ಮಹಿಳೆ ಸಾವು – ವನ್ಯಜೀವಿಗಳಿಂದ ಸುರಕ್ಷಿತ ಅಂತರ ಕಾಪಾಡಲು ಸಚಿವ ಈಶ್ವರ ಖಂಡ್ರೆ ಸೂಚನೆ

ಕೊಡಗು ಜಿಲ್ಲೆಯ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ನಡೆದ ದುರಂತ ಘಟನೆಯಲ್ಲಿ ತಮಿಳುನಾಡಿನ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ದುಬಾರೆ ಶಿಬಿರದಲ್ಲಿ ಸಾಕಾನೆಗಳಿಗೆ ಸ್ನಾನ ಮಾಡಿಸುವ ವೇಳೆ ಕಂಜನ್ ಹಾಗೂ ಜಯಮಾರ್ತಾಂಡ ಎಂಬ ಎರಡು ಆನೆಗಳ ನಡುವೆ ಅಕಸ್ಮಿಕವಾಗಿ ಕಾದಾಟ ಆರಂಭಗೊಂಡಿತ್ತು. ಈ ವೇಳೆ ನದಿಯ ಸಮೀಪ ನಿಂತು ಆನೆಗಳನ್ನು ವೀಕ್ಷಿಸುತ್ತಿದ್ದ ತಮಿಳುನಾಡಿನ ಪ್ರವಾಸಿ ಮಹಿಳೆ ತುಳಸಿ (33) ಅವರು ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾವುತರು ಆನೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿದರೂ, ಕಂಜನ್ ಆನೆ ಮುನ್ನುಗ್ಗಿ ಜಯಮಾರ್ತಾಂಡ ಆನೆಗೆ ಗುದ್ದಿದ ಪರಿಣಾಮ ಜಯಮಾರ್ತಾಂಡ ಆಯತಪ್ಪಿ ಕೆಳಗೆ ಬಿದ್ದಿದೆ. ಇದೇ ವೇಳೆ ಸಮೀಪದಲ್ಲಿದ್ದ ಮಹಿಳೆ ಆನೆಯ ಕೆಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ

ಈ ಘಟನೆ ಕುರಿತು ತೀವ್ರ ದುಃಖ ವ್ಯಕ್ತಪಡಿಸಿರುವ ಸಚಿವ ಈಶ್ವರ ಖಂಡ್ರೆ, “ಇದು ಯಾರೂ ಊಹಿಸದಂತಹ ಅತ್ಯಂತ ಆಘಾತಕರ ಘಟನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ” ಎಂದು ಸಂತಾಪ ಸೂಚಿಸಿದ್ದಾರೆ.

ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ, ಇಂತಹ ದುರಂತಗಳು ಮರುಕಳಿಸದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.

ವನ್ಯಜೀವಿಗಳಿಂದ ಸುರಕ್ಷಿತ ಅಂತರ ಕಾಪಾಡಲು ಸೂಚನೆ
ಆನೆಗಳು ಸೇರಿದಂತೆ ವನ್ಯಜೀವಿಗಳನ್ನು ಎಷ್ಟೇ ಪಳಗಿಸಿದ್ದರೂ ಅವುಗಳ ಸ್ವಭಾವವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಕಷ್ಟಸಾಧ್ಯ. ಯಾವ ಕ್ಷಣದಲ್ಲಿ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತವೆ ಎಂಬುದನ್ನು ಊಹಿಸುವುದೂ ಅಸಾಧ್ಯವಾಗಿರುವುದರಿಂದ ಪ್ರವಾಸಿಗರು ಎಚ್ಚರಿಕೆಯಿಂದಿರಬೇಕು ಎಂದು ಸಚಿವರು ಹೇಳಿದ್ದಾರೆ.

ಆನೆಗಳ ಸೊಂಡಿಲು ಮುಟ್ಟುವುದು, ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವುದು, ಆನೆಗಳಿಗೆ ಬೆಲ್ಲ, ಬಾಳೆಹಣ್ಣು ಸೇರಿದಂತೆ ಆಹಾರ ತಿನ್ನಿಸುವುದು ಹಾಗೂ ಪ್ರವಾಸಿಗರಿಂದ ಆನೆ ಮೈ ತೊಳೆಯಿಸುವಂತಹ ಚಟುವಟಿಕೆಗಳನ್ನು ನಿರ್ಬಂಧಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

ಇದಲ್ಲದೆ, ವನ್ಯಜೀವಿಗಳಿಂದ ಪ್ರವಾಸಿಗರು ನಿರ್ದಿಷ್ಟ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಕಟ್ಟು ನಿಟ್ಟಿನ ನಿಯಮ ಜಾರಿಗೊಳಿಸುವ ಅಗತ್ಯವಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading