ಮಂಗಳೂರು: ನಮ್ಮ ಆಸಕ್ತಿಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ಜೀವನಕ್ಕೆ ಸಂತೃಪ್ತಿ ಮತ್ತು ಸಾರ್ಥಕತೆ ದೊರೆಯುತ್ತದೆ ಎಂಬುದಕ್ಕೆ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ತಾಳಮದ್ದಳೆ ಮಂಡಳಿಯ ಗುರು ಹಾಗೂ ನಿರ್ದೇಶಕ ವಾಸುದೇವ ರಾವ್ ಅವರು ಜೀವಂತ ಸಾಕ್ಷಿಯಾಗಿದ್ದಾರೆ. ನಿವೃತ್ತ ಜೀವನದಲ್ಲೂ ಅಪಾರ ಉತ್ಸಾಹ ಮತ್ತು ಸ್ಫೂರ್ತಿಯಿಂದ ಯಕ್ಷಗಾನವೇ ತಮ್ಮ “ಉಸಿರು” ಎಂಬಂತೆ ಅವರು ಕ್ರಿಯಾಶೀಲರಾಗಿದ್ದಾರೆ.
ಮಿತ್ರರಾದ ಕೆ. ಯಲ್. ಕುಂಡಂತಾಯರ ಅವರ ಪ್ರೇರಣೆಯಿಂದ ಮಹಿಳಾ ಯಕ್ಷಗಾನ ತಾಳಮದ್ದಳೆ ತಂಡವನ್ನು ಕಟ್ಟಿದ ವಾಸುದೇವ ರಾವ್ ಅವರು, 2014ರ ನವೆಂಬರ್‌ನಲ್ಲಿ ಎಲ್ಲೂರು ವಿಶ್ವೇಶ್ವರನ ಸನ್ನಿಧಾನದಲ್ಲಿ ಪ್ರಥಮ ಪ್ರದರ್ಶನವಾಗಿ “ರುಕ್ಷಿಣಿ ಕಲ್ಯಾಣ” ಪ್ರಸಂಗವನ್ನು ಯಶಸ್ವಿಯಾಗಿ ಪ್ರದರ್ಶಿಸಿದರು.
1996ರಲ್ಲಿ ಆರಂಭವಾದ ಈ ಮಹಿಳಾ ಯಕ್ಷಗಾನ ತಾಳಮದ್ದಳೆ ತಂಡ ಆರಂಭದಲ್ಲಿ ಆಕಾಶವಾಣಿ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿತ್ತು. 2015ರಿಂದ ಪೂರ್ಣ ಪ್ರಮಾಣದ ತಾಳಮದ್ದಳೆ ಪ್ರದರ್ಶನಗಳನ್ನು ಆರಂಭಿಸಿದ ಬಳಿಕ, ಕಳೆದ 10 ವರ್ಷಗಳಲ್ಲಿ ಸುಮಾರು 520 ಕಾರ್ಯಕ್ರಮಗಳನ್ನು ನೀಡುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.
ಈ ದಶಮಾನೋತ್ಸವದ ಸಮಾರೋಪವಾಗಿ ಡಿಸೆಂಬರ್ 22ರಿಂದ 31ರವರೆಗೆ ಇಡ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 10 ದಿನಗಳ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಅವಧಿಯಲ್ಲಿ ಪ್ರತಿದಿನ ವಿಭಿನ್ನ ತಂಡಗಳ ಪ್ರದರ್ಶನ, ಶಿಷ್ಯರ ಕಾರ್ಯಕ್ರಮಗಳು, ಮಹಿಳಾ ಯಕ್ಷಗಾನ ತಾಳಮದ್ದಳೆ (ಸಂಜೆ 4ರಿಂದ 6.15ರವರೆಗೆ), ಸಭಾ ಕಾರ್ಯಕ್ರಮ, ಪ್ರಮುಖ ಅತಿಥಿಗಳ ಉಪಸ್ಥಿತಿ, ಗೌರವಾರ್ಪಣೆ ಮತ್ತು ಸನ್ಮಾನಗಳು ನಡೆಯಲಿವೆ.
ಈ 9 ವರ್ಷಗಳಲ್ಲಿ 9 ಸಪ್ತಾಹಗಳ ಪ್ರದರ್ಶನ, ಗಣೇಶಪುರ ಮಹಾಗಣಪತಿ ದೇವಸ್ಥಾನದಲ್ಲಿ 2 ವರ್ಷಗಳ ಸಪ್ತಾಹ, 3 ವರ್ಷಗಳ ಕಾಲ 3 ದಿನಗಳ ನಿರಂತರ ಕಾರ್ಯಕ್ರಮಗಳು ಸೇರಿದಂತೆ ಇತರೆ ಮಹಿಳಾ ತಾಳಮದ್ದಳೆ ಸಂಸ್ಥೆಗಳು ಮಾಡದ ಅನನ್ಯ ಪ್ರಯೋಗಗಳನ್ನು ಈ ತಂಡ ಕೈಗೊಂಡಿದೆ. ಇದರಿಂದ ಮಹಿಳಾ ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದ ಹೆಮ್ಮೆ ತಂಡಕ್ಕಿದೆ.
ಆರಂಭಿಕ ಹಂತದಲ್ಲಿ ತಂಡದ ಪ್ರಧಾನ ಭಾಗವತರೂ, ಮಾರ್ಗದರ್ಶಕರೂ ಆಗಿದ್ದ ಶ್ರೀ ಬಲಿಪ ಪ್ರಸಾದ ಬಲಿಪ ಅವರ ಸೇವೆಯನ್ನು ಈ ಸಂದರ್ಭದಲ್ಲಿ ತಂಡ ಸ್ಮರಿಸಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಾತ್ರವಲ್ಲದೆ, ಬೆಂಗಳೂರು ಮತ್ತು ಚೆನ್ನೈಗಳಲ್ಲಿ ಕೊರೋನಾ ಪೂರ್ವ ಮೂರು ವರ್ಷಗಳ ಕಾಲ ನಿರಂತರವಾಗಿ ಕಾರ್ಯಕ್ರಮ ನೀಡಿ ಜನಪ್ರಿಯತೆ ಗಳಿಸಿದೆ.
ಇದೀಗ ತಂಡದ ಅಧ್ಯಕ್ಷೆಯಾಗಿ ಶ್ರೀಮತಿ ಸುಲೋಚನಾ ವಿ. ರಾವ್ ಅವರ ಸಮರ್ಥ ನಾಯಕತ್ವದಲ್ಲಿ ಮಂಡಳಿ ಇನ್ನಷ್ಟು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಪ್ರತಿಭಾವಂತ ಸದಸ್ಯೆಯರೊಂದಿಗೆ ಮಹಿಳಾ ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಶ್ರೀ ದುರ್ಗಾಂಬಾ ಮಂಡಳಿ ತನ್ನದೇ ಆದ ವಿಶಿಷ್ಟ ಗುರುತನ್ನು ಮೂಡಿಸಿದೆ.
ಇಡ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತಸರ ವೇ. ಮೂ. ಶ್ರೀ ರಮಾನಂದ ಭಟ್ ಹಾಗೂ ಶ್ರೀಮತಿ ಶಕುಂತಲಾ ಭಟ್ ಅವರ ಪ್ರೋತ್ಸಾಹದಿಂದ ಈ ದೇವಸ್ಥಾನ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯುತ್ತಿದ್ದು, ದಶಮಾನೋತ್ಸವ ಸಮಾರೋಪ ಕಾರ್ಯಕ್ರಮವು ಯಕ್ಷಗಾನ ಅಭಿಮಾನಿಗಳಿಗೆ ವಿಶೇಷ ಆಕರ್ಷಣೆಯಾಗಲಿದೆ.