Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಮೈ ಲಾರ್ಡ್ಸ್,ನಾವು ನಿಜಕ್ಕೂ ಜಾತಿರಹಿತ ಸಮಾಜವನ್ನು ಸಾಧಿಸಿದ್ದೇವೆಯೇ?

ಮೈ ಲಾರ್ಡ್ಸ್,ನಾವು ನಿಜಕ್ಕೂ ಜಾತಿರಹಿತ ಸಮಾಜವನ್ನು ಸಾಧಿಸಿದ್ದೇವೆಯೇ?

ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ದಲಿತ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಜಾತಿ ತಾರತಮ್ಯವನ್ನು ತಡೆಗಟ್ಟುವ ಉದ್ದೇಶದಿಂದ ಯುಜಿಸಿಯು ಇತ್ತೀಚೆಗೆ ಹೊರಡಿಸಿದ್ದ ಹೊಸ ನಿಯಾಮಾವಳಿಯ ವಿರುದ್ಧ ತಮ್ಮ ಮುಂದೆ ಬಂದಿರುವ ಪ್ರಕರಣವನ್ನು ವಿಚಾರಿಸುವ ಸಂದರ್ಭದಲ್ಲಿ, ಗೌರವಾನ್ವಿತ ಪೀಠವು ಒಂದು ಅತೀ ಮಹತ್ವದ ಪ್ರಶ್ನೆಯನ್ನು ಎತ್ತಿದೆ —
“ಜಾತಿರಹಿತ ಸಮಾಜವನ್ನು ಸಾಧಿಸುವ ದಿಕ್ಕಿನಲ್ಲಿ ನಾವು ಮುಂದೆ ಸಾಗುತ್ತಿದ್ದೇವೆಯೇ, ಇಲ್ಲವೇ ಹಿಂದೆ ಹೋಗುತ್ತಿದ್ದೇವೆಯೇ?”

ಈ ಪ್ರಶ್ನೆಯೊಂದಿಗೆ, ನ್ಯಾಯಾಲಯವು ನಾವು ಈಗಾಗಲೇ “ಜಾತಿರಹಿತ ಸಮಾಜ”ವನ್ನು ಸಾಧಿಸಿದ್ದೇವೆ ಅಥವಾ ಅದರ ಅಂಚಿನಲ್ಲಿದ್ದೇವೆ ಎಂಬ ಭಾವನೆಯನ್ನು ವ್ಯಕ್ತಪಡಿಸಿ, ಈ ಹೊಸ ನಿಯಮಗಳು ಮತ್ತೆ ಜಾತಿಯ ವಿಷವನ್ನು ಬಿತ್ತುವ ಪ್ರಯತ್ನವೆಂದು ಅಭಿಪ್ರಾಯಪಟ್ಟಿದೆ.

ಮೈ ಲಾರ್ಡ್ಸ್,
ನೀವು ಹೇಳಿದಂತೆ ನಾವು ಎಷ್ಟು ಅದ್ಭುತವಾಗಿ, ಸಂಪೂರ್ಣವಾಗಿ ಜಾತಿರಹಿತ ಸಮಾಜವನ್ನು ನಿರ್ಮಿಸಿದ್ದೇವೆ ಎಂಬುದನ್ನು ಸಾಬೀತುಪಡಿಸುವ ಒಂದು ಸಣ್ಣ ಘಟನೆ ಇಲ್ಲಿದೆ — ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿರುವ ಘಟನೆ. 91 ವರ್ಷದ ಮಹಾರ್‌ ದಲಿತ ಮಹಿಳೆಯೊಬ್ಬರು ಮೃತಪಟ್ಟ ನಂತರ, ಆಕೆಯ ಅಂತ್ಯಕ್ರಿಯೆಯನ್ನು ಸ್ಮಶಾನದಲ್ಲಿ ನಡೆಸಲು ಆಕೆಯ ಕುಟುಂಬಕ್ಕೆ ಅವಕಾಶ ದೊರೆಯಲಿಲ್ಲ. ಕಾರಣ — ಸ್ಮಶಾನಕ್ಕೆ ಹೋಗುವ ಪ್ರವೇಶ ಮಾರ್ಗವನ್ನು “ಅತಿಕ್ರಮಿಸಲಾಗಿದೆ” ಎಂಬ ನೆಪ.
ಅಂತಿಮವಾಗಿ ಆ ವೃದ್ಧೆಯ ಕುಟುಂಬವು ಆಕೆಯ ಅಂತ್ಯಸಂಸ್ಕಾರವನ್ನು ರಸ್ತೆಯ ಮಧ್ಯದಲ್ಲೇ, ಯಾವುದೇ ವಿಧಿವಿಧಾನವಿಲ್ಲದೆ, ನೆರವೇರಿಸಬೇಕಾಯಿತು. ಅಂತ್ಯಕ್ರಿಯೆಯನ್ನು ತಡೆಯಲು ಯತ್ನಗಳಾದವು. ಆದರೆ ರಸ್ತೆ ಚೌಕದಲ್ಲೇ ಚಿತೆಗೆ ಬೆಂಕಿ ಹಚ್ಚುವುದನ್ನು ಬಿಟ್ಟು ಆ ಕುಟುಂಬಕ್ಕೆ ಬೇರೆ ದಾರಿಯೇ ಇರಲಿಲ್ಲ.

ಪಾಪ, ಮೈ ಲಾರ್ಡ್ಸ್,
ಈ ದಲಿತ ಕುಟುಂಬಕ್ಕೆ ನಾವು ನಿರ್ಮಿಸಿರುವ “ಜಾತಿರಹಿತ ಸಮಾಜ”ದ ಬಗ್ಗೆ ತಿಳಿದೇ ಇರಲಿಲ್ಲ!
ಅವರು ಇನ್ನೂ ಜಾತಿಯಿದೆ ಎಂದು ಭ್ರಮೆಯಲ್ಲಿ ಬದುಕುತ್ತಿದ್ದಾರೆ!

ಏನು ಮಾಡುವುದು?
ಈ ದಲಿತರು ಬಹುಶಃ ಹುಚ್ಚರಾಗಿದ್ದಾರೆ. ನಾವು ಸೃಷ್ಟಿಸಿರುವ ಆದರ್ಶ, ಜಾತಿರಹಿತ, ದೇಶಭಕ್ತ ಸಮಾಜವನ್ನು ಅರ್ಥಮಾಡಿಕೊಳ್ಳಲು ಅವರಿಗೆ ಆಗುತ್ತಿಲ್ಲ. ಅವರು ಸುಮ್ಮನೆ ಸವರ್ಣರನ್ನು ದೂಷಿಸುತ್ತಾರೆ. ಹಿಂದಕ್ಕೆ ಹೋಗುವುದರಲ್ಲಿ ಅವರಿಗೆ ಅಪಾರ ಸಂತೋಷ. ಜಾತಿರಹಿತ ದೇಶಭಕ್ತರೊಂದಿಗೆ ಮುಂದೆ ಸಾಗಲು ಅವರಿಗೆ ಆಸಕ್ತಿ ಇಲ್ಲ. ಅವರಿಗೆ ಯಾವಾಗಲೂ “ಹಿಂದೆ ಉಳಿಯುವುದೇ” ಇಷ್ಟ.

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಹಾಗಾಗಿ, ನೀವು ಹೇಳಿದ ಮಾತು ನಿಜವಾಗಿಯೂ ಸತ್ಯ ಬಿಡಿ ಮೈ ಲಾರ್ಡ್ — ನಾವು ಜಾತಿರಹಿತ ಸಮಾಜವನ್ನು ಸಂಪೂರ್ಣವಾಗಿ ಸ್ಥಾಪಿಸಿದ್ದೇವೆ. ಅದು ದಲಿತರು ಮತ್ತು ಹಿಂದುಳಿದ ಜಾತಿಗಳಿಗೆ ಮಾತ್ರ ಕಾಣುತ್ತಿಲ್ಲ!

ಆದ್ದರಿಂದ, ಜಾತಿ ಆಧಾರಿತ ಶೋಷಣೆಯ ವಿರುದ್ಧ ಯಾವುದೇ ಕಾನೂನುಗಳನ್ನು ಸರ್ಕಾರಗಳು ತರಬಾರದು.
ಯಾಕೆಂದರೆ ಸಮಸ್ಯೆಯೇ ಇಲ್ಲವಂತೆ!

ಆದರೆ, ಮೈ ಲಾರ್ಡ್ಸ್, ಒಮ್ಮೆ ನಿಲ್ಲಿಸಿ ಯೋಚಿಸೋಣ.

ನಾವು ತಾರತಮ್ಯವನ್ನು ಹೆಸರಿಸುತ್ತೇವೆ ಎಂಬ ಕಾರಣಕ್ಕೆ “ಹಿಂದಕ್ಕೆ ಹೋಗುತ್ತಿದ್ದೇವೋ?”
ಅಥವಾ ಜಾತಿ ತಾರತಮ್ಯವನ್ನು ನಿರಾಕರಿಸುವುದರಿಂದಲೇ ನಾವು ಹಿಂದೆ ಹೋಗುತ್ತಿದ್ದೇವೋ?

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

ರೋಗವೊಂದನ್ನು ಗುಣಪಡಿಸಲು, ಮೊದಲು ರೋಗವಿದೆ ಎಂದು ಒಪ್ಪಿಕೊಳ್ಳಬೇಕಲ್ಲವೇ?

ರೋಗವನ್ನೇ ನಿರಾಕರಿಸಿದರೆ, ಅದು ಗುಣವಾಗುತ್ತದೆಯೇ?

ಅಥವಾ ರೋಗವಿದೆ ಎಂದು ಒಪ್ಪಿಕೊಂಡು, ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿದಾಗಲೇ ಗುಣವಾಗುತ್ತದೆಯೇ?

ಜಾತಿ ತಾರತಮ್ಯವನ್ನು ಹೆಸರಿಸುವುದೇ ಸಮಸ್ಯೆಯಲ್ಲ.
ಜಾತಿ ತಾರತಮ್ಯವನ್ನು ನಿರಾಕರಿಸುವುದೇ ಸಮಸ್ಯೆ.

ಇದನ್ನೂ ಓದಿ: JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ

ನಾವು ಜಾತಿರಹಿತ ಸಮಾಜವನ್ನು ಸಾಧಿಸಿದ್ದೇವೆ ಎಂಬ ಘೋಷಣೆಗಳಿಂದ ಅಲ್ಲ, ಜಾತಿಯ ಅನುಭವವನ್ನು ಅನುಭವಿಸುತ್ತಿರುವವರ ಮಾತುಗಳನ್ನು ಕೇಳಿದಾಗ ಮಾತ್ರ ಆ ಸಮಾಜದ ನಿಜವಾದ ಚಿತ್ರ ನಮಗೆ ಕಾಣುತ್ತದೆ.

ಮೈ ಲಾರ್ಡ್ಸ್,
ಜಾತಿರಹಿತ ಸಮಾಜದ ಬಗ್ಗೆ ಮಾತನಾಡುವ ಮುನ್ನ, ಜಾತಿಯ ನೋವು ಅನುಭವಿಸುತ್ತಿರುವವರನ್ನು “ಹಿಂದಕ್ಕೆ ಹೋಗುವವರು” ಎಂದು ತಳ್ಳಿ ಹಾಕುವುದನ್ನು ನಿಲ್ಲಿಸೋಣ. ಅಷ್ಟೇ ಅಲ್ಲವೇ — ನ್ಯಾಯದ ಮೊದಲ ಹೆಜ್ಜೆ?

ಹರಿರಾಮ್ ಎ. ವಕೀಲರು

😀
0
😍
0
😢
0
😡
0
👍
2
👎
0

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading