ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್‌ಗೇಟ್ ತೆರವುಗೊಳಿಸುವಂತೆ ಒತ್ತಾಯಿಸಿ ಏಪ್ರಿಲ್ 28ರಂದು ಬಂಟ್ವಾಳದಲ್ಲಿ ಭಾರೀ ಪ್ರತಿಭಟನೆ ನಡೆಯಿತು. ಮಾಜಿ ಸಚಿವ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ “ಜನಾಂದೋಲನ ನಡಿಗೆ” ಎಂಬ ಹೆಸರಿನಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಬಿ.ಸಿ.ರೋಡ್‌ನ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಪ್ರಾರಂಭವಾದ ಮೆರವಣಿಗೆ, ಬ್ರಹ್ಮರಕೂಟ್ಲು ಟೋಲ್‌ಗೇಟ್‌ವರೆಗೆ ಸಾಗಿತು. ವಿವಿಧ ಸಂಘಟನೆಗಳು, ಸಾರ್ವಜನಿಕರು ಮತ್ತು ರಾಜಕೀಯ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಟೋಲ್‌ಗೇಟ್ ತೆರವುಗೆ ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಮಾನಾಥ ರೈ, ಈ ಟೋಲ್‌ಗೇಟ್ ವೈಜ್ಞಾನಿಕವಾಗಿಯೂ, ಕಾನೂನುಬದ್ಧವಾಗಿಯೂ ಸಮರ್ಥಿಸಿಕೊಳ್ಳಲಾಗದದ್ದು ಎಂದು ಆರೋಪಿಸಿದರು. ಜನರಿಗೆ ಅನ್ಯಾಯವಾಗುತ್ತಿರುವ ಈ ಟೋಲ್‌ಗೇಟ್ ಸಂಪೂರ್ಣ ತೆರವುಗೊಳ್ಳುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ಅವರು ಎಚ್ಚರಿಸಿದರು.
ಈ ವೇಳೆ ಹೋರಾಟ ಸಮಿತಿ ಮುಖಂಡ ಮುನೀರ್ ಕಾಟಿಪಳ್ಳ ಕೂಡ ಮಾತನಾಡಿ, ಜಿಲ್ಲೆಯಲ್ಲಿನ ಟೋಲ್‌ಗೇಟ್‌ಗಳ ನಡುವಿನ ಅಂತರ ನಿಯಮ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು. ಜನರ ಹಿತಾಸಕ್ತಿಗಾಗಿ ಈ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಮೆರವಣಿಗೆ ಟೋಲ್‌ಗೇಟ್‌ಗೆ ತಲುಪಿದಾಗ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಕೆಲವು ಪ್ರತಿಭಟನಾಕಾರರು ಟೋಲ್‌ಬೂತ್ ಒಳನುಗ್ಗಲು ಯತ್ನಿಸಿದ ಹಿನ್ನೆಲೆ ಪೊಲೀಸರು ಹಾಗೂ ನಾಯಕರು ಮಧ್ಯಸ್ಥಿಕೆವಹಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಬಳಿಕ ಪ್ರತಿಭಟನೆ ಶಾಂತಿಯುತವಾಗಿ ಅಂತ್ಯಗೊಂಡಿತು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ನಾಯಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಸೂಚನೆಗಳನ್ನು ನಾಯಕರು ನೀಡಿದ್ದಾರೆ.