Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಬೀದಿಬದಿ ವ್ಯಾಪಾರಿಗಳ ವಿರುದ್ಧ ನೈತಿಕ ಪೊಲೀಸ್‌ಗಿರಿ: ಕ್ರಮಕ್ಕೆ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ಒತ್ತಾಯ

ಬೀದಿಬದಿ ವ್ಯಾಪಾರಿಗಳ ವಿರುದ್ಧ ನೈತಿಕ ಪೊಲೀಸ್‌ಗಿರಿ: ಕ್ರಮಕ್ಕೆ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ಒತ್ತಾಯ

ಮಂಗಳೂರು: ನಗರದ ವಿವಿಧ ಭಾಗಗಳಲ್ಲಿ ಬೀದಿಬದಿ ವ್ಯಾಪಾರ ನಡೆಸುತ್ತಿರುವ ಬಡ ವ್ಯಾಪಾರಿಗಳನ್ನು ಸುಳ್ಳು ಆರೋಪಗಳ ಮೂಲಕ ಸಾರ್ವಜನಿಕವಾಗಿ ಅವಮಾನಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಅಪರಾಧಿಗಳಂತೆ ಬಿಂಬಿಸಿ ಜನರಲ್ಲಿ ಅಪನಂಬಿಕೆ ಹಾಗೂ ಪ್ರದೇಶಾಂಧತೆಯನ್ನು ಹುಟ್ಟುಹಾಕುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (CITU) ಆಗ್ರಹಿಸಿದೆ.

ನಗರದ ಟೌನ್‌ಹಾಲ್ ಸಮೀಪ ಭಾನುವಾರ ಹಳೆ ಬಟ್ಟೆ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳ ವಿರುದ್ಧ ಕೆಲವರು ಆಕ್ಷೇಪ ವ್ಯಕ್ತಪಡಿಸಿ, “ಇವರು ಮೈಸೂರಿನಿಂದ ಬಂದು ಅಕ್ರಮವಾಗಿ ವ್ಯಾಪಾರ ಮಾಡುತ್ತಿದ್ದಾರೆ” ಎಂದು ಸಾರ್ವಜನಿಕವಾಗಿ ನಿಂದನೆ ನಡೆಸಿದ್ದಾರೆ ಎಂದು ಸಂಘ ಆರೋಪಿಸಿದೆ. ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅನುಮತಿ ಇಲ್ಲ ಎಂದು ಹೇಳಿ ನೇರವಾಗಿ ಸಂಘರ್ಷಕ್ಕೆ ಇಳಿದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಲಾಗಿದೆ ಎಂದು ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಂಘದ ಮುಖಂಡರು, “ಹಳೆ ಬಟ್ಟೆ ವ್ಯಾಪಾರಿಗಳು ರಾಜ್ಯದ ವಿವಿಧ ನಗರಗಳಲ್ಲಿ ದಶಕಗಳಿಂದ ವ್ಯಾಪಾರ ಮಾಡುತ್ತಿದ್ದು, ಮಂಗಳೂರಲ್ಲಿಯೂ ಸುಮಾರು 30ರಿಂದ 40 ವರ್ಷಗಳಿಂದ ಜೀವನೋಪಾಯ ನಡೆಸುತ್ತಿದ್ದಾರೆ. ಇವರ ಬಳಿ ಐಡಿ ಕಾರ್ಡ್ ಇಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ‘ಬೀದಿಬದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆ ಮತ್ತು ನಿಯಂತ್ರಣ ಕಾಯಿದೆ-2014’ ಹಾಗೂ ಕರ್ನಾಟಕ ಬೀದಿ ವ್ಯಾಪಾರ ಅಧಿನಿಯಮ-2019 ಪ್ರಕಾರ, ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ಪ್ರಮಾಣ ಪತ್ರ ವಿತರಿಸುವ ಜವಾಬ್ದಾರಿ ಪಟ್ಟಣ ವ್ಯಾಪಾರ ಸಮಿತಿಯದ್ದಾಗಿದೆ. ನಗರಪಾಲಿಕೆ ಕಾನೂನು ಜಾರಿಗೊಳಿಸದ ತಪ್ಪನ್ನು ಬಡ ವ್ಯಾಪಾರಿಗಳ ಮೇಲೆ ಹೊರಿಸುವುದು ಸರಿಯಲ್ಲ” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘವು 2011ರಿಂದ ಜಿಲ್ಲೆಯ ಬೀದಿಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗೆ ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಅಡಿಯಲ್ಲಿ ನೋಂದಾಯಿತ ಸಂಘವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಘ ತಿಳಿಸಿದೆ.

ಸಂಘದ ಸದಸ್ಯರಿಂದ ವಾರದ ದೇಣಿಗೆಯಾಗಿ ತಲಾ ₹20 ಸಂಗ್ರಹಿಸಲಾಗುತ್ತಿದ್ದು, ಆ ಹಣವನ್ನು ಶೈಕ್ಷಣಿಕ ನೆರವು, ವೈದ್ಯಕೀಯ ನೆರವು ಹಾಗೂ ಮರಣ ಪರಿಹಾರಕ್ಕೆ ಬಳಸಲಾಗುತ್ತಿದೆ ಎಂದು ತಿಳಿಸಲಾಗಿದೆ. ಆದರೆ ಕೆಲವರು ಈ ದೇಣಿಗೆ ಸಂಗ್ರಹಣೆಯನ್ನು “ಹಫ್ತಾ ವಸೂಲಿ” ಎಂದು ಬಿಂಬಿಸಿ ಮಹಿಳಾ ಸಿಬ್ಬಂದಿಯ ವಿಡಿಯೋ ಚಿತ್ರೀಕರಿಸಿ, ಅವರನ್ನು ತಡೆದು ಪ್ರಶ್ನಿಸಿ ಅವಮಾನಿಸುವ ರೀತಿಯಲ್ಲಿ ಯೂಟ್ಯೂಬ್ ಚಾನೆಲ್‌ಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ ಎಂದು ಸಂಘ ಆರೋಪಿಸಿದೆ.

ಅದೇ ರೀತಿ ನಗರದ ಸ್ಟೇಟ್ ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣದ ಬಳಿ ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವ ಗೂಡಂಗಡಿ, ಹಾಲಿನ ಬೂತ್ ಹಾಗೂ ಅಂಗವಿಕಲರ ಕೋಟಾದ ಅಂಗಡಿದಾರರು, ಪಾಲಿಕೆ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧವೂ ತಪ್ಪು ಅಭಿಪ್ರಾಯ ಮೂಡಿಸುವ ವರದಿಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಸಂಘ ದೂರಿದೆ.

“ಇಂತಹ ವರದಿಗಳು ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡುವುದಲ್ಲದೆ, ಕಾನೂನನ್ನು ಕೈಗೆತ್ತಿಕೊಳ್ಳಲು ಪ್ರಚೋದಿಸುವಂತಿವೆ. ಆದ್ದರಿಂದ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು” ಎಂದು ಸಂಘ ಒತ್ತಾಯಿಸಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

ಪತ್ರಿಕಾಗೋಷ್ಠಿಯಲ್ಲಿ ಬಿ.ಕೆ. ಇಮ್ತಿಯಾಜ್ (ಗೌರವಾಧ್ಯಕ್ಷರು), ಸುನಿಲ್ ಕುಮಾರ್ ಬಜಾಲ್ (ಕಾರ್ಯಾಧ್ಯಕ್ಷರು), ಮುಜಾಫರ್ ಅಹ್ಮದ್ (ಅಧ್ಯಕ್ಷರು), ಸಂತೋಷ್ ಆರ್.ಎಸ್ (ಪ್ರಧಾನ ಕಾರ್ಯದರ್ಶಿ), ಎಂ.ಎನ್. ಶಿವಪ್ಪ (ಉಪಾಧ್ಯಕ್ಷರು), ಹಂಝ ಮೊಹಮ್ಮದ್ (ಕೋಶಾಧಿಕಾರಿ), ವಿಜಯ್ ಜೈನ್ (ಉಪಾಧ್ಯಕ್ಷರು), ಅಬ್ದುಲ್ ಖಾದರ್ ಹಾಗೂ ಗುಡ್ಡಪ್ಪ ಉಪಸ್ಥಿತರಿದ್ದರು.

💬 1 ಪ್ರತಿಕ್ರಿಯೆಗಳು

  • Spiritual Guru says:

    Local laws apply only to Indian citizens. Not to Bangladeshi infiltrators brought in by CITU posing as traders from Mysuru.

    Severe introspection on Bangladeshi infiltrators and it’s facilitators Citu will be reviewed by the Federal government

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading