ಹೊಸಕೋಟೆ/ದೇವನಹಳ್ಳಿ: ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಪಟ್ಟಣದಲ್ಲಿ ಸಂಭವಿಸಬಹುದಾದ ಭೀಕರ ಘಟನೆಯೊಂದನ್ನು ತಪ್ಪಿಸಲಾಗಿದ್ದು, ಒಂದು ವರ್ಷದ ಗಂಡು ಮಗುವನ್ನು ಸಮಯಕ್ಕೆ ಸರಿಯಾಗಿ ರಕ್ಷಿಸಲಾಗಿದೆ. ನಿಧಿ ಆಸೆಯ ನೆಪದಲ್ಲಿ ವಾಮಾಚಾರಕ್ಕೆ ಮಗುವನ್ನು ಬಲಿಕೊಡುವ ಸಿದ್ಧತೆ ನಡೆಯುತ್ತಿತ್ತು ಎಂಬ ಶಂಕೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಸಾರ್ವಜನಿಕರಿಂದ ಬಂದ ಶಾಕ್ ಕರೆ ಆಧರಿಸಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಮಕ್ಕಳ ಸಹಾಯವಾಣಿ ಸಿಬ್ಬಂದಿ ಹಾಗೂ ಪೊಲೀಸರ ಸಹಕಾರದಿಂದ ಶನಿವಾರ ದಾಳಿ ನಡೆಸಿದರು. ಈ ವೇಳೆ ಮನೆಯ ತಳಮಹಡಿಯಲ್ಲಿ ದೊಡ್ಡ ಗುಂಡಿ ತೋಡಲಾಗಿದ್ದು, ಹುತ್ತದ ಮಣ್ಣು ಹಾಗೂ ವಿವಿಧ ಪೂಜಾ ಸಾಮಗ್ರಿಗಳನ್ನು ಅಣಿಗೊಳಿಸಿರುವುದು ಪತ್ತೆಯಾಯಿತು. ಈ ಎಲ್ಲ ದೃಶ್ಯಗಳು ನಿಧಿ ಪಡೆಯುವ ಉದ್ದೇಶದಿಂದ ಮಗುವನ್ನು ಬಲಿಗೆ ನೀಡುವ ಸಿದ್ಧತೆ ನಡೆದಿರಬಹುದೆಂಬ ಗಂಭೀರ ಅನುಮಾನಕ್ಕೆ ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಈ ಸಂಬಂಧ ಮನೆಯವರು ನೀಡಿರುವ ಹೇಳಿಕೆಗಳು ಪರಸ್ಪರ ವಿರುದ್ಧವಾಗಿದ್ದು, ತನಿಖೆಯಲ್ಲಿ ಗೊಂದಲ ಉಂಟಾಗಿದೆ. ಹುತ್ತ ತೆರವುಗೊಳಿಸುವ ಉದ್ದೇಶದಿಂದ ಗುಂಡಿ ತೋಡಲಾಗಿದೆ ಎಂದು ಕೆಲವರು ಹೇಳಿದರೆ, ಗಂಡನ ಆರೋಗ್ಯ ಸಮಸ್ಯೆ ಕಾರಣದಿಂದ ಪೂಜೆ ನಡೆಸಲು ಅಗೆದಿದ್ದೆವು ಎಂಬ ವಿವರಣೆಗಳನ್ನು ಕೂಡ ನೀಡಿದ್ದಾರೆ.
ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ, ರಕ್ಷಿಸಲಾದ ಮಗುವನ್ನು ದೇವನಹಳ್ಳಿಯ ಶಿಶು ಮಂದಿರದ ಆಶ್ರಯಕ್ಕೆ ಒಪ್ಪಿಸಲಾಗಿದ್ದು, ಸೋಮವಾರ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗುವುದು. ಸಮಿತಿಯ ಆದೇಶದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ಎಲ್ಲಾ ಆಯಾಮಗಳ ಕುರಿತು ತನಿಖೆ ಮುಂದುವರಿದಿದೆ.