ಮಂಗಳೂರು: ಮಂಗಳವಾರ: ದಕ್ಷಿಣ ಕನ್ನಡ ಜಿಲ್ಲೆಯ ಬ್ರಹ್ಮರಕೊಟ್ಲು ಟೋಲ್ಗೇಟ್ ಅನ್ನು ತಕ್ಷಣ ಮುಚ್ಚಬೇಕು ಎಂಬ ಆಗ್ರಹದೊಂದಿಗೆ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಮಂಗಳವಾರ ಸಮೂಹಿಕ ಧರಣಿ ಪ್ರತಿಭಟನೆ ನಡೆಯಿತು.
ಈ ಪ್ರತಿಭಟನೆಗೆ ಮಾಜಿ ಸಚಿವರಾದ ರಮಾನಾಥ ರೈ ಗೌರವಾಧ್ಯಕ್ಷತೆ ವಹಿಸಿ ನೇತೃತ್ವ ನೀಡಿದರು. ಕಾರ್ಯಕ್ರಮದ ಸಾರಥ್ಯವನ್ನು ಮುನೀರ್ ಕಾಟಿಪಳ್ಳ ವಹಿಸಿದ್ದರು

ಸುರತ್ಕಲ್ ಟೋಲ್ ತೆರವು ಹೋರಾಟಗಾರರ ಬೆಂಬಲ
ಹಿಂದೆ ಸುರತ್ಕಲ್ ಟೋಲ್ ತೆರವು ಹೋರಾಟದಲ್ಲಿ ಭಾಗವಹಿಸಿ ಯಶಸ್ಸು ಕಂಡ ಹೋರಾಟಗಾರರು ಈ ಧರಣಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಹೋರಾಟಕ್ಕೆ ಹೊಸ ದಿಕ್ಕು ಮತ್ತು ಉತ್ಸಾಹ ನೀಡಿದೆ. ವಿವಿಧ ಸಮಾಜಮುಖಿ ಸಂಘಟನೆಗಳು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರಿಕರು ಪ್ರತಿಭಟನೆಯಲ್ಲಿ ಭಾಗವಹಿಸಿ ಟೋಲ್ ತೆರವಿಗೆ ಒತ್ತಾಯಿಸಿದರು.
ಪ್ರತಿಭಟನಾಕಾರರು ಟೋಲ್ ವಸೂಲಿಯಿಂದ ಸ್ಥಳೀಯರಿಗೆ ಆಗುತ್ತಿರುವ ಆರ್ಥಿಕ ಹೊರೆ ಮತ್ತು ಸಂಚಾರ ತೊಂದರೆಗಳನ್ನು ಸರ್ಕಾರದ ಗಮನಕ್ಕೆ ತಂದರು. ಅಧಿಕಾರಿಗಳು ಹಾಗೂ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.


ಹೋರಾಟಕ್ಕೆ ಹೊಸ ಚೈತನ್ಯ
ಸುರತ್ಕಲ್ ಟೋಲ್ ಹೋರಾಟದ ಅನುಭವ ಹೊಂದಿದ ಮುಖಂಡರ ಭಾಗವಹಿಕೆ ಈ ಚಳವಳಿಗೆ ಹೊಸ ಚೈತನ್ಯ ನೀಡಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಚಳವಳಿ ರೂಪುಗೊಳ್ಳುವ ಸಾಧ್ಯತೆಗಳಿವೆ.