Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಯುವ ಸಂದೇಶ: ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ – ದೃಷ್ಟಿಕೋನದಲ್ಲಿ

ಯುವ ಸಂದೇಶ: ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ – ದೃಷ್ಟಿಕೋನದಲ್ಲಿ

ರಾಷ್ಟ್ರೀಯ ಯುವ ದಿನ,
ಸ್ವಾಮಿ ವಿವೇಕಾನಂದರ ಜನುಮ ದಿನ,
ಭಾರತೀಯರೆಲ್ಲರ ಆತ್ಮಾವಲೋಕನ ದಿನ,
ಸ್ವಾಭಿಮಾನ ಜಾಗೃತ ದಿನ
ವಿವೇಕಾನಂದರ ಆಶಯಗಳ ಕುರಿತು ಪ್ರಜ್ವಲ್‌ ಮೌರ್ಯ ರವರ ಲೇಖನ:

ನನ್ನ ನೆಲದ ಪ್ರೀತಿಯ ಸಹೋದರ-ಸಹೋದರಿಯರೆ ಯುವಕ-ಯುವತಿಯರೇ.
ನನ್ನ ನೆಲ ಭಾರತ ಇದು ಸರ್ವಸ್ವತಂತ್ರ , ಸಾರ್ವಭೌಮ ಒಕ್ಕೂಟ. 1947 ರ ದೇಶ ವಿಭಜನೆಯ ನಂತರ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಪ್ರದೇಶವೇ ನನ್ನ ಭಾರತ. ಅಂದು ನಾನು ಚಿಕಾಗೋದಲ್ಲಿ ನ ಸರ್ವಧರ್ಮ ಸಮ್ಮೇಳನದ ಭಾಷಣದಲ್ಲಿ ಹೇಳಿದ್ದೆ, ವಿಶ್ವದ ಆಧ್ಯಾತ್ಮದ (ಸ್ವ ಚಿಂತನೆ) ತವರೂರು ಭಾರತ. ಸರ್ವ ಧರ್ಮ ಸಮನ್ವಯ ಮತ್ತು ಸಹೋದರತೆಯ ಸೌಹಾರ್ದ ನಾಡು ನಮ್ಮ ದೇಶ. ಅನೇಕ ನಿರಾಶ್ರಿತರಿಗೆ ಆಶ್ರಯ ನೀಡಿದ ನೆಲ ನಮ್ಮದು. ಇಡೀ ವಿಶ್ವಕ್ಕೆ ಧಾರ್ಮಿಕ ಸಹಾನುಭೂತಿಯನ್ನು ಕಲಿಸಿದ ದೇಶ. ಎಲ್ಲಾ ಧರ್ಮಗಳೂ ಮಾನವತೆಯ ಸಾರ ಎಂದು ನಿರೂಪಿಸಿರುವ ದೇಶ ಭಾರತ. ಧಾರ್ಮಿಕ ಹಕ್ಕು ಹಾಗೂ ಸ್ವಾತಂತ್ರ್ಯದ ಹೆಮ್ಮೆಯ ಸಿಂಧೂ ನಾಗರೀಕತೆಯ ನಾಡು ಎಂದು ವಿವೇಕಾನಂದರು ಘಂಟಾಘೋಷವಾಗಿ ಹೇಳಿದ್ದರು

ಬಂಧುಗಳೇ ,
ಅಂದು ವಿದೇಶದಲ್ಲಿ ನನ್ನ ಧರ್ಮ ಮತ್ತು ದೇಶದ ಅಭಿಮಾನದಿಂದ ಅದರ ಘನತೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಇಲ್ಲಿನ ಕೊರತೆಗಳನ್ನು ಹೇಳದೆ ಕೇವಲ ನಾಗರೀಕತೆಯ ಶ್ರೇಷ್ಠತೆಯ ಬಗ್ಗೆ ಮಾತ್ರ ಮಾತನಾಡಿರಬಹುದು ಆದರೆ, ಇಂದು ಈ ಕ್ಷಣದಲ್ಲಿ ಅದೇ ಮಾತುಗಳನ್ನು ಪುನರುಚ್ಚರಿಸಲು ಅವರ ಮನಸ್ಸೇ ಒಪ್ಪುವುದಿಲ್ಲ. ಏಕೆಂದರೆ ಅವರ ಆದರ್ಶ ಧ್ವನಿಯೇ ಗೌಣವಾಗುವ ರೀತಿ ಇಂದಿನ ಪರಿಸ್ಥಿತಿ.

ನನ್ನ ಭಾರತೀಯರೆ,
131 ವರ್ಷಗಳ ನಂತರವೂ ಅಸ್ಪೃಶ್ಯತೆ ಎಲ್ಲರ ಅಂತರಂಗಗಳಲ್ಲಿ ಇನ್ನೂ ಜೀವಂತವಿದೆ.
ಕೇವಲ ಭೋಜನ ಹಾಗೂ ಸೌಲಭ್ಯಗಳ ಪಡೆಯುವಿಕೆಗಾಗಿ ಜೊತೆಯಲ್ಲಿ ಕುಳಿತುಕೊಳ್ಳುವುದು ಹಾಗೂ ಬೆರೆಯುವುದು ನಡೆಯುತ್ತಿದೆ ಆದರೆ ಅಂತರಂಗ ಇನ್ನು ಕತ್ತಲಲ್ಲೇ ಇದೆ.(ದೇವನೂರು ಮಹಾದೇವ ರವರ ಸಾಲುಗಳು) ದೇವರು ಎಂಬ ಪರಿಕಲ್ಪನೆಯನ್ನೇ ಸಂಕ್ಷಿಪ್ತಗೊಳಿಸಿ ತಮಗಿಷ್ಟ ಬಂದಂತೆ ವ್ಯಾಖ್ಯಾನಗೊಳಿಸಲಾಗಿದೆ. ದೇವರ ಹೆಸರಿನಲ್ಲಿ ಹಾಗೂ ಅಲ್ಲಿನ ಮಂದಿರಗಳಲ್ಲಿ ತಮ್ಮ ಪ್ರಭುತ್ವವನ್ನು ಉಳಿಸಿಕೊಳ್ಳಲು ದೇವರು ಎಂಬ ಶಕ್ತಿಯ ಅರ್ಥವನ್ನೇ ಕುಜ್ಜವನ್ನಾಗಿ ಮಾಡಲಾಗಿದೆ. ದೇವರು ದೇವಸ್ಥಾನದಲ್ಲಿ ಮಾತ್ರ ಇರುತ್ತಾನೆಂಬ ಸುಳ್ಳು ನಂಬಿಕೆಯನ್ನು ಬಳಸಿಕೊಂಡು ಜನರನ್ನ ಬಹುವಾಗಿ ಹಲವು ಮೌಢ್ಯ ಮಾರ್ಗಗಳಿಂದ ವಂಚಿಸಲಾಗುತ್ತಿದೆ ಭಯಭೀತಿಗೊಳಿಸಿ ತಮ್ಮ ಪ್ರಭುತ್ವವನ್ನ ಉಳಿಸಿಕೊಳ್ಳುವೆಡೆ ಹೆಜ್ಜೆ ಇಡುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ಬಗ್ಗೆ ಯುವಜನರು ಜಾಗೃತರಾಗಿ ಚಿಂತಿಸಬೇಕಿದೆ. ಹಲವು ಬಡವರು, ನಿರ್ಗತಿಕರು ಹಾಗೂ ತಳವರ್ಗದ ಜನರ ಮೇಲೆ ಜಾತಿಯ ಕಾರಣಕ್ಕೆ ಹಲ್ಲೆಗಳಾಗುತ್ತಿವೆ. ಹುಟ್ಟಿನಿಂದ ಸಾಯುವವರೆಗೂ ಎಲ್ಲಾ ಕೆಲಸಗಳಿಗೂ ಜಾತಿಯ ಪ್ರಮಾಣ ಪತ್ರ ಕೊಡುವುದು ಕಡ್ಡಾಯವಾಗಿದೆ. ಮನೆಯನ್ನ ಬಾಡಿಗೆಗೆ ಕೊಡಲು ಜಾತಿಯೊಂದು ಮಾನದಂಡವೇ ಆಗಿಬಿಟ್ಟಿದೆ. ಜಾತಿಯ ಜನಗಣತಿ ಕೇವಲ ಹತ್ತು ವರ್ಷಕ್ಕೆ ಮಾತ್ರ ಎಂದು ಹೇಳಿ ಆ ಹತ್ತು ವರ್ಷಗಳಲ್ಲಿ ದಮನಿತ ಹಾಗೂ ಅವಕಾಶ ವಂಚಿತ ಸಮುದಾಯಗಳ ಮುನ್ನೆಲೆ ಸಾಧ್ಯವಾಗಲೆಂಬ ದೃಷ್ಟಿಯಿಂದ ಮಾಡಿದ ಉದ್ದೇಶವೇ ಹುಸಿಯಾಗಿ ಇಂದಿಗೂ ಜಾತಿಗಣತಿ ಮುಂದುವರೆಯುತ್ತಿದೆ. ಜಾತಿಗಣತಿಯ ಬಗ್ಗೆ ವೈಜ್ಞಾನಿಕವಾಗಿ ಯೋಚಿಸದೆ ತಮ್ಮ ಅಧಿಕಾರದ ಸ್ಥಾನಗಳು, ಪ್ರಭುತ್ವ , ಹಾಗೂ ಪಾಲುಗಳನ್ನು ಉಳಿಸಿಕೊಳ್ಳುವ ಸಲುವಾಗಿ ನಿಷ್ಪಕ್ಷ ಪಾತವಾಗಿ ತೀರ್ಮಾನಗಳನ್ನು ಕೈಗೊಳ್ಳದೆ ಸ್ವಜನ ಪಕ್ಷಪಾತದ ದೃಷ್ಟಿಯಿಂದ ಜಾತಿ ಗಣತಿಯನ್ನು ತಿರುಚಲಾಗುತ್ತಿದೆ. ಇದು ಜಾತೀಯತೆಯನ್ನು ಮುಂದುವರಿಸುವ ಮುನ್ಸೂಚನೆ. ಜಾತಿಯ ಅಸಮಾನತೆಯಿಂದ ಮೀಸಲಾತಿಯೂ ಅಸ್ತಿತ್ವದಲ್ಲಿದೆ. ಮೀಸಲಾತಿಯು(ಪ್ರಾತಿನಿಧ್ಯ) ಅಮಾನವೀಯ ಹಾಗೂ ವಿಶೇಷ ಸೌಲಭ್ಯ ಎಂದು ಬಿಂಬಿಸಲಾಗುತ್ತಿದೆ. ಮೀಸಲಾತಿಯಂದರೆ ಬಡತನ ನಿವಾರಣೆಯ ಕಾರ್ಯಕ್ರಮವಲ್ಲ ಅದು ಅವಕಾಶ ವಂಚಿತರಿಗೆ ಅವಕಾಶ ದೊರಕಿಸಿಕೊಡಲು ಇರುವ ಒಂದು ಸಾಧನ.

ಇದನ್ನೂ ಓದಿ: JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ

ಭಾರತದ ಯುವಜನರೇ ಹಾಗೂ ವಿದ್ಯಾರ್ಥಿಗಳೇ
ಹೆಣ್ಣನ್ನು ಗೌರವಿಸಲ್ಪಡುವ ಸಿಂಧೂ ನಾಗರೀಕತೆಯನ್ನು ಕಟ್ಟಿದ ಹೆಮ್ಮೆಯ ನಾಡಿನಲ್ಲಿ 1.ವರದಕ್ಷಿಣೆ ರೂಪದಲ್ಲಿ ಹೆಣ್ಣಿನ ಮಾರಾಟ,
2.ಹೆಣ್ಣು ಭ್ರೂಣ ಹತ್ಯೆ , 3.ವೇಶ್ಯಾವಾಟಿಕೆ,4.ಸಾರ್ವಜನಿಕ ಸಾಮೂಹಿಕ ಅತ್ಯಾಚಾರ
ಪ್ರತಿನಿತ್ಯದ ಘಟನೆಗಳು ದೇಶದ ಹಲವೆಡೆ ನಡೆಯುತ್ತಿವೆ ಇದಕ್ಕೆ ಕಾರಣ ಯುವಜನರ ಹಾಗೂ ಭಾರತದ ಜನರ ಅಜಾಗರೂಕ ಚಿಂತನೆ ಹಾಗೂ ನಡೆಯಿಂದ. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಅಪೂರ್ವ ಮತ ಚಲಾವಣೆ ಯ ಅವಕಾಶವಿರುವ ಸ್ವತಃ ಮಣ್ಣಿನ ಗುಣದಲ್ಲೇ ಪ್ರಜಾಪ್ರಭುತ್ವ ವಿರುವ ಈ ನಾಡಿನಲ್ಲಿ ಹಣ, ಹೆಂಡ,ಸೀರೆ, ಪಂಚೆ, ಹಾಗೂ ಜಾತಿ ಧರ್ಮಗಳಿಗೆ ಮತವನ್ನು ಮಾರಿಕೊಳ್ಳುತ್ತಿರುವಾಗ ದೇಶದ ಬಗ್ಗೆ ವಿವೇಕಾನಂದರು ಇಂದು ಹೇಗೆ ಪ್ರತಿಕ್ರಿಯಿಸುತ್ತಿದ್ದರು ಎಂಬುದನ್ನು ನಾವು ಗಮನಿಸಬೇಕು.

ಹಸಿವಿಗಿಂತ ಹಸು ಶ್ರೇಷ್ಠ, ರಾಮನ ಆದರ್ಶಕ್ಕಿಂತ ರಾಮ ಮಂದಿರ ಶ್ರೇಷ್ಠ,ಜೀವಕ್ಕಿಂತ ಮಸೀದಿ ಶ್ರೇಷ್ಠ, ಪ್ರಾಣಕ್ಕಿಂತ ಚರ್ಚು ಶ್ರೇಷ್ಠ,

ಇಸ್ಲಾಂ ಉಳಿಸಲು ಬಾಂಬುಗಳು,
ಹಿಂದೂ ಧರ್ಮದ ಮೂಲವಾದ ವೈದಿಕ ಧರ್ಮದ ಆಚರಣೆಗಳನ್ನು ಉಳಿಸಲು , ಧರ್ಮವೆಂಬ ಅಫೀಮನ್ನು ಆಧುನಿಕ ಬಂದೂಕುಗಳ ರೀತಿ ಯುವಜನತೆಗೆ ತೋರಿಸಿ ದಿಕ್ಕುತಪ್ಪಿಸಲಾಗುತ್ತಿದೆ. ಕ್ರಿಶ್ಚಿಯನ್ ಧರ್ಮ ಉಳಿಸಲು ಮತಾಂತರಗಳು ನಡೆಯುತ್ತಿವೆ. ಇದೇ ಏನು ನನ್ನ ನೆಲದ ಸ್ವಭಾವ.ಬರ್ತ್ ಸರ್ಟಿಫಿಕೇಟಗೂ, ಡೆತ್ ಸರ್ಟಿಫಿಕೇಟಗೂ ಲಂಚ ಪಡೆಯುವ ದೇಶವನ್ನು ವಿವರಿಸುವುದಾದರೂ ಹೇಗೆ ?

ಉಕ್ಕಿನ ಶರೀರದ ಯುವಕರೇ, ಯುವತಿಯರೇ
ಈ ದೇಶದ ಭವಿಷ್ಯ ನೀವೇ ಎಂದು ವಿವೇಕಾನಂದರು ಕನಸು ಕಂಡಿದ್ದರು ಆದರೆ , ಇಂದು ಯುವಕರು ಸಾಮಾಜಿಕ ಜವಾಬ್ದಾರಿಯನ್ನು ಮರೆತಿದ್ದಾರೆ ಹಾಗೂ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಓ ನನ್ನ ಭಾರತದ ಯುವಕರೇ , ಕೇಸರಿ ಕೆಂಪು ನೀಲಿ ಹಸಿರು ಬಾವುಟಗಳ ಮುಖವಾಡಗಳಲ್ಲಿ ಹುದುಗಿರುವಿರಿ. ನಿಮ್ಮ ಕೆಲಸದ ಹಾಗೂ ನೆಲದ ಇತಿಹಾಸದ ಅರಿವಿಲ್ಲದೆ ಕ್ರಿಯಾಶೀಲವಾಗಿ ಚಿಂತನೆ ಮಾಡದೆ ದಾಸ್ಯಕ್ಕೆ, ಮೌಡ್ಯಕ್ಕೆ, ಗುಲಾಮಗಿರಿಗೆ ಒಳಗಾಗಿ ನಿಮ್ಮ ಕೆಲಸಗಳಿಂದ ಹಾಗೂ ಜವಾಬ್ದಾರಿಗಳಿಂದ ಹಿಂದೆ ಸರಿದಿರುವಿರಿ.

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

ಅದು ಈ ನೆಲದ ಗುಣವಲ್ಲ. ರಕ್ತಕ್ಕೆ ರಕ್ತ, ಕೊಲೆಗೆ ಕೊಲೆ‌
ಈ ಮಣ್ಣಿನ ಸ್ವಭಾವವಲ್ಲ, ಹಿಂದುವೋ, ಮುಸ್ಲಿಂಮೋ, ಕ್ರಿಶ್ಚಿಯನ್ನೋ, ಸಿಖ್ಖೋ, ಬೌದ್ಧನೋ, ಜೈನನೋ, ಪಾರ್ಸಿಯೋ ಏನಾದರೂ ಆಗಿರು ಅದು ನಿನ್ನ ವೈಯಕ್ತಿಕ ಗುರುತು ಹಾಗೂ ನಿನ್ನ ಮನೆಯ ಹೊಸ್ತಿಲ ಒಳಗಿನ ಗುರುತು ಮಾತ್ರ. ಹೊರಗಡೆ ನಾವು ನೀವೆಲ್ಲರೂ ಈ ನೆಲದ ಭಾರತೀಯರು ನಮ್ಮ ದೇಶದ ಮುಂದಿನ ಜವಾಬ್ದಾರಿಯುತ ಪ್ರಜೆಗಳು ನಮ್ಮ, ನಿಮ್ಮ ನಿಷ್ಠೆ ಈ ನೆಲಕ್ಕೆ ಮಾತ್ರ.

ಏಳಿ, ಎದ್ದೇಳಿ, ಎಚ್ಚರಗೊಳ್ಳಿ,
ದಿಕ್ಕರಿಸಿ ಜಾತಿ ಸಂಕೋಲೆಯನ್ನು, ಮತ ಬ್ರಾಂತಿಯನ್ನ ಧಿಕ್ಕರಿಸಿ, ವಿಶಾಲ ಮನೋಭಾವವನ್ನು ಬೆಳೆಸಿಕೊಂಡು ಜಾಗೃತರಾಗಿ ಚಿಂತಿಸಿ
ಯೋಚನಾ ಶಕ್ತಿಯನ್ನು ವೃದ್ಧಿಸಿಕೊಳ್ಳಿ , ರೂಡಿಸಿಕೊಳ್ಳಿ. ಅಂದು ನಾನು ಚಿಕಾಗೋದಲ್ಲಿ ಬಾವಿ ಕಪ್ಪೆ ಮತ್ತು ಸಮುದ್ರದ ಕಪ್ಪೆಯ ಉದಾಹರಣೆ ನೀಡಿದ್ದೆ. ಇಂದು ಅದೇ ಉದಾಹರಣೆಯನ್ನು ಭಾರತೀಯ ಯುವಜನಾಂಗವನ್ನು ಕುರಿತು ಹೇಳಬೇಕಿದೆ. ವಿಶಾಲ ಚಿಂತನೆಯನ್ನು ಮೈಗೂಡಿಸಿಕೊಳ್ಳದೆ ಬಾವಿ ಕಪ್ಪೆಯಾಗಿರುವಿರಿ.ವಿವೇಕಾನಂದರ ದೃಷ್ಟಿಕೋನವನ್ನೇ ತಿರುಚಿ ಸಂಕ್ಷಿಪ್ತಗೊಳಿಸಿರುವಿರಿ. ವಿವೇಚನೆ ಕಳೆದುಕೊಂಡಿರುವಿರಿ.ಜಾತಿ ಧರ್ಮ ಪಂಥಗಳ ಆಧಾರದಲ್ಲಿ ಸಣ್ಣ ಸಣ್ಣ ಗುಂಪುಗಳನ್ನು ಕಟ್ಟಿಕೊಂಡು ಅಸಹನೆಯಿಂದ ದೇಶವನ್ನು ನಿಮ್ಮನ್ನೂ ವಂಚಿಸಿಕೊಳ್ಳುತ್ತಿರುವಿರಿ. ಜೊತೆಗೆ ನಿಮ್ಮ ಮುಂದಿನ ತಲೆಮಾರನ್ನು ಒಳ್ಳೆಯ ಜೀವನದಿಂದ ದೂರವಾಗಿಸಿ ಜೀವಿಸಲು ಅನಾನುಕೂಲವಾಗಿ ವರ್ತಿಸುತ್ತಿದ್ದೀರಿ.

ಆಧುನಿಕ ಭಾರತೀಯ ಯುವಕರ ದೇಹ ಉಕ್ಕಿನಂತಿರಲಿ.
ಮನಸ್ಸಿನಲ್ಲಿ ಪ್ರೀತಿ, ಕರುಣೆ, ಮೈತ್ರಿ ಅಂದರೆ ಸ್ನೇಹ ತುಂಬಿರಲಿ. ಮತಾಂಧರಾಗಬೇಡಿ. ಸಾರ್ವಜನಿಕ ಸೇವೆ ಹಾಗೂ ದೇಶಭಕ್ತಿಯ ಹೆಸರಿನಲ್ಲಿ ಮೌಡ್ಯ ಕ್ಕೆ ದಾಸರಾಗಿ ದೇಶದ ಹಾಗೂ ಮಾನವ ಸಮಾಜದ ವಿಭಜನೆಗೆ ಕಾರಣರಾಗದೆ ತಾಳ್ಮೆವಹಿಸಿ, ವೈಜ್ಞಾನಿಕ ವೈಚಾರಿಕ ಹಾಗೂ ಆಧ್ಯಾತ್ಮಿಕವಾಗಿ ಚಿಂತಿಸಿ. ಅಧ್ಯಾತ್ಮವೆಂದರೆ ದೇವರ ಪೂಜೆಯಲ್ಲ ಅದು ಸ್ವ ಆತ್ಮದ ವಿಮರ್ಶೆ ದೇವರು ಧರ್ಮ ನಂಬಿಕೆಗಳು ಜನರ ಒಳಿತಿಗಾಗಿ, ಸಮಾಜದ ಕ್ರಮಬದ್ಧತೆಗಾಗಿ, ಬದುಕಿನ ಸಾರ್ಥಕತೆಗಾಗಿ ಉಪಯೋಗವಾಗಬೇಕೆ ಹೊರತು ಮಾನವ ಜನಾಂಗದ ವಿನಾಶಕ್ಕಲ್ಲ.
ನಂಬಿಕೆಗಳನ್ನ ಪರಿಶೀಲಿಸಿ ನಂಬಿ ಹಾಗೂ ತಿಳುವಳಿಕೆಯನ್ನ ರೂಡಿಸಿಕೊಳ್ಳಿ. ನಂಬಿಕೆ ಗಿಂತ ತಿಳುವಳಿಕೆ ಇರುವುದು ಒಳಿತು. ಇದನ್ನು ಮರೆತು ವಿಶ್ವಗುರುವಾಗುವ ಭಾರತದ ಅವಕಾಶಗಳನ್ನು ನಾಶಮಾಡುತ್ತಿರುವಿರಿ.

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಇನ್ನಾದರೂ ಎಚ್ವೆತ್ತುಕೊಳ್ಳಿ.
ವಿವೇಕಾನಂದರ ಕನಸಿನ ಸಮಾನತೆಯ, ವೈಚಾರಿಕತೆಯ, ಸಹೋದರತೆಯ, ಸರ್ವ ಧರ್ಮ ಸಮನ್ವಯದ ಭಾರತವನ್ನು ಮರು ಸೃಷ್ಟಿಸಲು ನಿಮ್ಮ ಎಲ್ಲಾ ಪ್ರಯತ್ನ ಸಾಗಲಿ ಎಂದು ಆಶಿಸುತ್ತಾ.

ಜೈ ಭಾರತ್

ಇಂತಿ ನಿಮ್ಮವ
ಪ್ರೊ. ಪ್ರಜ್ವಲ್ ಮೌರ್ಯ
ಪ್ರಾಧ್ಯಾಪಕರು ,ಸಂಸ್ಥಾಪಕ ನಿರ್ದೇಶಕರು, ಮೈತ್ರಿ ಅಕಾಡೆಮಿ 9902800232

😀
0
😍
0
😢
0
😡
0
👍
1
👎
0

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading