ಮಂಡ್ಯ ಮೂಲದ ಯುವ ಪ್ರತಿಭೆ ಗಿಲ್ಲಿ ಅವರು ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ನಂತರ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಮುಗಿದ ಬಳಿಕವೂ ಜನಮನ್ನಣೆ ಕಳೆದುಕೊಳ್ಳದ ಗಿಲ್ಲಿ ಇದೀಗ ಬೆಳ್ಳಿತೆರೆಗೆ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
ಗುಣ ಹಿರಿಯಿಬ್ಬೆ ನಿರ್ದೇಶನ ಹಾಗೂ ಅಭಿನಯದ ‘ಸರ್ಕಾರಿ ಶಾಲೆ H8’ ಚಿತ್ರದಲ್ಲಿ ಗಿಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಗಿಲ್ಲಿ ಗುಣ ಅವರಿಗೆ ಸಾಥ್ ನೀಡಿದ್ದು, ಇಬ್ಬರ ಅಭಿನಯವೂ ಚಿತ್ರಕ್ಕೆ ದೊಡ್ಡ ಬಲ ನೀಡಲಿದೆ ಎಂಬ ನಿರೀಕ್ಷೆ ಸಿನಿಪ್ರೇಕ್ಷಕರಲ್ಲಿ ಮನೆಮಾಡಿದೆ.
ಬಿಗ್ ಬಾಸ್ ವೇದಿಕೆಯಲ್ಲಿ ಗಳಿಸಿದ ಜನಪ್ರಿಯತೆ ಈ ಚಿತ್ರಕ್ಕೆ ಪ್ಲಸ್ ಆಗಬಹುದೇ ಎಂಬ ಚರ್ಚೆ ಈಗಾಗಲೇ ಎಲ್ಲೆಡೆ ಜೋರಾಗಿದೆ. ವಿಶೇಷವಾಗಿ ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಗಿಲ್ಲಿ ಅಭಿಮಾನಿಗಳು ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಅಂದಹಾಗೆ ‘ಸರ್ಕಾರಿ ಶಾಲೆ H8’ ಚಿತ್ರವು ಇದೇ ವಾರ, ಅಂದರೆ ಫೆಬ್ರವರಿ 6ರಂದು, ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲು ಸಿದ್ಧವಾಗಿದೆ. ಸಾಮಾಜಿಕ ಸಂದೇಶದ ಜೊತೆಗೆ ಮನರಂಜನೆಯ ಮಿಶ್ರಣ ಹೊಂದಿರುವ ಈ ಚಿತ್ರ ಪ್ರೇಕ್ಷಕರ ಮನ ಸೆಳೆಯುವ ನಿರೀಕ್ಷೆ ಮೂಡಿಸಿದೆ.
ಬಿಗ್ ಬಾಸ್ನಲ್ಲಿಯೇ ಗೆಲುವಿನ ನಗು ಬೀರಿದ ಗಿಲ್ಲಿ, ಈಗ ಸಿನಿಮಾದಲ್ಲೂ ಅದೇ ಗೆಲುವಿನ ಹಾದಿ ಹಿಡಿಯುತ್ತಾರಾ? ‘ಸರ್ಕಾರಿ ಶಾಲೆ H8’ ಚಿತ್ರ ಗಿಲ್ಲಿಗೆ ಮತ್ತೊಂದು ಮೈಲಿಗಲ್ಲಾಗುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.