Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಮಂಗಳೂರು: ಫೆ.12 ಅಖಿಲ ಭಾರತ ಮಹಾಮುಷ್ಕರ: ರಸ್ತೆತಡೆಗೆ ಕರೆ

ಮಂಗಳೂರು: ಫೆ.12 ಅಖಿಲ ಭಾರತ ಮಹಾಮುಷ್ಕರ: ರಸ್ತೆತಡೆಗೆ ಕರೆ

ಮಂಗಳೂರು: ಕಾರ್ಮಿಕ ವಿರೋಧಿ ಕಾರ್ಪೊರೇಟ್ ಪರ ನಾಲ್ಕು ಕಾರ್ಮಿಕ ಸಂಹಿತೆಗಳು, ರೈತ ವಿರೋಧಿ ಬೀಜ ಮಸೂದೆ, ವಿದ್ಯುತ್ (ತಿದ್ದುಪಡಿ) ಮಸೂದೆ ಹಾಗೂ ಉದ್ಯೋಗ ಖಾತ್ರಿ ಯೋಜನೆಗೆ ತಂದಿರುವ ತಿದ್ದುಪಡಿಗಳ ವಿರುದ್ಧ ಫೆಬ್ರವರಿ 12ರಂದು ರೈತ–ಕಾರ್ಮಿಕರ ನೇತೃತ್ವದಲ್ಲಿ ಅಖಿಲ ಭಾರತ ಮಹಾಮುಷ್ಕರ ನಡೆಯಲಿದೆ ಎಂದು ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್‌ಕುಮಾರ್ ಬಜಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ, ವೇತನ ಸಂಹಿತೆ, ಕೈಗಾರಿಕಾ ಸಂಬಂಧ ಸಂಹಿತೆ, ಉದ್ಯೋಗ ಭದ್ರತೆ–ಆರೋಗ್ಯ–ಕೆಲಸದ ಪರಿಸ್ಥಿತಿ ಸಂಹಿತೆ ಹಾಗೂ ಸಾಮಾಜಿಕ ಭದ್ರತಾ ಸಂಹಿತೆಗಳನ್ನು ಜಾರಿಗೆ ತರುವ ಮೂಲಕ ಕಾರ್ಮಿಕರ ಕನಿಷ್ಠ ವೇತನ, ಕೆಲಸದ ಸಮಯ, ಸಂಘಟನೆ ಹಾಗೂ ಮುಷ್ಕರದ ಹಕ್ಕುಗಳನ್ನು ಹಿಂಪಡೆಯಲು ಮುಂದಾಗಿದೆ ಎಂದು ಅವರು ಆರೋಪಿಸಿದರು. 2014ರಿಂದ ಈವರೆಗೆ ಭಾರತೀಯ ಕಾರ್ಮಿಕ ಸಮ್ಮೇಳನವನ್ನು ಕರೆಯದೇ, ವಿರೋಧ ಪಕ್ಷಗಳ ಗೈರಿನಲ್ಲೇ ಸಂಹಿತೆಗಳನ್ನು ಅಂಗೀಕರಿಸಲಾಗಿದೆ ಎಂದರು.

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ದಿನಕ್ಕೆ ರೂ.178 ಕನಿಷ್ಠ ಕೂಲಿ ಬದುಕಿಗೆ ಸಾಲದು; ಸರ್ಕಾರವೇ ನೇಮಿಸಿದ್ದ ಡಾ. ಅನೂಪ್ ಸತ್ಪತಿ ಸಮಿತಿ ಶಿಫಾರಸು ಮಾಡಿದ ರೂ.375 ಮತ್ತು 7ನೇ ವೇತನ ಆಯೋಗ ಸೂಚಿಸಿದ ರೂ.18,000 ಮಾಸಿಕ ವೇತನವನ್ನು ನಿರ್ಲಕ್ಷಿಸಲಾಗಿದೆ ಎಂದು ಟೀಕಿಸಿದರು. EPF (ರೂ.15,000) ಹಾಗೂ ESI (ರೂ.21,000) ವೇತನ ಮಿತಿಗಳಿಂದ ಬಹುಸಂಖ್ಯಾತ ಕಾರ್ಮಿಕರು ಸಾಮಾಜಿಕ ಭದ್ರತೆ ಹೊರಗುಳಿಯುವ ಅಪಾಯವಿದೆ ಎಂದರು. ಹೊಸ ಸಂಹಿತೆಗಳು ಸಂಘಟನೆ–ಮುಷ್ಕರ ಹಕ್ಕುಗಳಿಗೆ ತೀವ್ರ ನಿರ್ಬಂಧ ಹೇರುತ್ತಿದ್ದು, ಅಂತರಾಷ್ಟ್ರೀಯ ಕಾರ್ಮಿಕ ಒಪ್ಪಂದಗಳು ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿವೆ ಎಂದು ಹೇಳಿದರು.

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ‘ವಿಕಸಿತ್ ಭಾರತ್ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ, 2025’ ಎಂದು ಬದಲಾಯಿಸಿರುವುದು ಗ್ರಾಮೀಣ ಬಡಜನರ ಬದುಕಿಗೆ ಹೊಡೆತ ನೀಡಲಿದೆ; ಹಣಕಾಸಿನ ಹೊರೆ ರಾಜ್ಯಗಳ ಮೇಲೆ ಬಿದ್ದಿದೆ ಎಂದು ಆರೋಪಿಸಿದರು. ವಿಮಾ ಕ್ಷೇತ್ರದಲ್ಲಿ ಶೇ.100 ವಿದೇಶಿ ನೇರ ಹೂಡಿಕೆ, ಕರಡು ಬೀಜ ಮಸೂದೆ ಮತ್ತು ವಿದ್ಯುತ್ (ತಿದ್ದುಪಡಿ) ಮಸೂದೆಗಳು ಕೃಷಿ, ಗೃಹ ಬಳಕೆದಾರರು ಹಾಗೂ ಸಾರ್ವಜನಿಕ ವಿದ್ಯುತ್ ಕ್ಷೇತ್ರಕ್ಕೆ ಹಾನಿಕಾರಕವೆಂದರು.

ವಾಹನ ಜಾಥಾ: ಫೆ.5–7
ಮಹಾಮುಷ್ಕರದ ಸಂದೇಶವನ್ನು ಜನತೆಗೆ ತಲುಪಿಸಲು ಫೆಬ್ರವರಿ 5, 6, 7ರಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಾಹನ ಪ್ರಚಾರ ಜಾಥಾ ನಡೆಯಲಿದೆ. ಫೆ.5ರಂದು ಬೆಳಿಗ್ಗೆ 9.30ಕ್ಕೆ ಮಂಗಳೂರಿನ ಲೇಡಿಗೋಷನ್ ಬಳಿ ಉದ್ಘಾಟನೆ ನಡೆಯಲಿದ್ದು, ಕರ್ನಾಟಕ ಬ್ಯಾಂಕ್ ನೌಕರರ ಸಂಘಟನೆಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಫಣೀಂದ್ರ ಕೆ. ಉದ್ಘಾಟಿಸಲಿದ್ದಾರೆ. ಬ್ಯಾಂಕ್ ನೌಕರರ ರಾಜ್ಯ ನಾಯಕರು ವಿನ್ಸೆಂಟ್ ಡಿ.ಸೋಜ ಹಾಗೂ ಬಿ.ಎಂ. ಮಾಧವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಾಥಾ ಫೆ.7ರಂದು ಸಂಜೆ 6ಕ್ಕೆ ಯೆಯ್ಯಾಡಿ ಜಂಕ್ಷನ್‌ನಲ್ಲಿ ಸಮಾರೋಪಗೊಳ್ಳಲಿದೆ.

ಫೆ.12: ಜಿಲ್ಲೆಯಾದ್ಯಂತ ರಸ್ತೆತಡೆ
ಫೆ.12ರಂದು ಬೆಳಿಗ್ಗೆ 9 ಗಂಟೆಗೆ ದ.ಕ. ಜಿಲ್ಲೆಯ ತಾಲೂಕು–ವಲಯ ಕೇಂದ್ರಗಳು ಸೇರಿದಂತೆ 25ಕ್ಕೂ ಹೆಚ್ಚು ಕಡೆಗಳಲ್ಲಿ ಏಕಕಾಲದಲ್ಲಿ ರಸ್ತೆತಡೆ ಚಳುವಳಿ ನಡೆಯಲಿದೆ. ಕಾರ್ಮಿಕರು, ರೈತರು, ವಿದ್ಯಾರ್ಥಿ–ಯುವಜನರು, ಮಹಿಳೆಯರು, ದಲಿತ–ಆದಿವಾಸಿಗಳು ಸೇರಿದಂತೆ ನೂರಾರು ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

ಪತ್ರಿಕಾಗೋಷ್ಠಿಯಲ್ಲಿ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೆರಿಂಜ, ಮುಖಂಡರು ಬಿ. ಶೇಖರ್, ಸಿಐಟಿಯು ಮುಖಂಡ ಯೋಗಿಶ್ ಜಪ್ಪಿನಮೊಗರು, ಕರ್ನಾಟಕ ಪ್ರಾಂತ ರೈತ ಸಂಘದ ಕೆ. ಯಾದವ ಶೆಟ್ಟಿ, ರಾಜ್ಯ ರೈತ ಸಂಘದ ಓಸ್ವಾಲ್ ಪ್ರಕಾಶ್ ಫೆರ್ನಾಂಡೀಸ್, ಬ್ಯಾಂಕ್ ನೌಕರರ ಮುಖಂಡ ಬಿ.ಎಂ. ಮಾಧವ, ವಿಮಾ ನೌಕರರ ಸಂಘಟನೆಯ ಬಿ.ಎನ್. ದೇವಾಡಿಗ, ವಿಮಾ ಪ್ರತಿನಿಧಿಗಳ ಸಂಘದ ರಾಜನ್ ಡಿ.ಕೋಸ್ತ, ಕರ್ನಾಟಕ ರಾಜ್ಯ ಹೊಟೇಲ್ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಪಿ.ಹೆಚ್. ಮೋಹನ್ ಹಾಗೂ ಹೋಟೇಲ್ ಕಾರ್ಮಿಕರ ಮುಖಂಡ ಕಿರಣ್ ರಾಜ್ ಉಪಸ್ಥಿತರಿದ್ದರು.

😀
0
😍
0
😢
0
😡
0
👍
0
👎
0

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading