ಬೀದರ್, ಭಾಲ್ಕಿ: ತಾಲೂಕಿನ ಉಚ್ಚಾ ಗ್ರಾಮದ ಪರಿಶಿಷ್ಟರ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಬಡಾವಣೆಯ ಮಹಿಳೆಯರು ಮೋರಂಬಿ ಗ್ರಾಮ ಪಂಚಾಯತ್ ಎದುರು ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು. ಬಳಿಕ ಭಾಲ್ಕಿ–ಬಸವಕಲ್ಯಾಣ ಮುಖ್ಯರಸ್ತೆಯ ಮೇಲೆ ಧರಣಿ ನಡೆಸಿ ಗ್ರಾಮ ಪಂಚಾಯತ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆಯರು ಮಾತನಾಡಿ, “ಗ್ರಾಮದ ಎಸ್ಸಿ ಓಣಿಯಲ್ಲಿ ಸುಮಾರು 70ಕ್ಕೂ ಹೆಚ್ಚು ಮನೆಗಳಿವೆ. ಕಳೆದ ಮೂರು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಎರಡು ಬೋರ್ವೆಲ್ ಹಾಗೂ ಬಾವಿಗಳಿದ್ದರೂ ಮೋಟಾರ್ ವ್ಯವಸ್ಥೆ ಇಲ್ಲದ ಕಾರಣ ನೀರು ಸರಿಯಾಗಿ ಲಭ್ಯವಾಗುತ್ತಿಲ್ಲ. ದಿನಂಪ್ರತಿ ನೀರಿಗಾಗಿ ಪರದಾಟ ನಡೆಸಬೇಕಾಗಿದೆ,” ಎಂದು ದೂರಿದರು.
ಬೇಸಿಗೆ ಆರಂಭದಲ್ಲೇ ಸಮಸ್ಯೆ ತೀವ್ರಗೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟ ಉಂಟಾಗುವ ಸಾಧ್ಯತೆ ಇದೆ. ಕೂಡಲೇ ಗ್ರಾಮ ಪಂಚಾಯತ್ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ಮೋಟಾರ್ ವ್ಯವಸ್ಥೆ ಕಲ್ಪಿಸಿ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ, ಗೌತಮ, ನಾಗೇಶ, ಪಾರಮ್ಮ, ನೀಲಮ್ಮ, ಅನೀತಾ, ವರ್ಷಾ, ಸುಶೀಲಾ, ಲೋಕೇಶ, ಸೂರ್ಯಕಾಂತ, ಮೋಹನ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲೀಗೆ, ಬೀದರ್