ಮಂಗಳೂರು, ಜೂನ್ 21: ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ಹಾಳುಗೆಡಹುತ್ತಿರುವ ಪರಿಣಾಮ ಇಡೀ ಭೂಮಂಡಲದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಉಳ್ಳವರ ಸ್ವಾರ್ಥಲಾಲಸೆಯಿಂದ ಪರಿಸರವೇ ಬಲಿಯಾಗುತ್ತಿರುವ ಇಂತಹ ಸಂದರ್ಭದಲ್ಲಿ ಎಳೆಯ ಮನಸುಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿದಾಗ ಮಾತ್ರ ಭವಿಷ್ಯದಲ್ಲಿ ಸ್ವಚ್ಛ ಹಾಗೂ ಹಸಿರು ಪರಿಸರ ನಿರ್ಮಾಣ ಸಾಧ್ಯ ಎಂದು ಜೆಪ್ಪು ಸಂತ ಜೆರೋಸಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಪೂಜ್ಯನೀಯ ಸಿಸ್ಟರ್ ಸಿ. ಅರ್ಪಿತಾ ಅಭಿಪ್ರಾಯಪಟ್ಟರು.

ಅವರು ಚಿಣ್ಣರ ಚಾವಡಿ ಮಂಗಳೂರು ಇದರ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜೆಪ್ಪು ಸಂತ ಜೆರೋಸಾ ಪ್ರೌಢಶಾಲೆಯಲ್ಲಿ ಆಯೋಜಿಸಲಾದ “ಗಿಡ ಬೆಳೆಸೋಣ – ನಾಡು ಉಳಿಸೋಣ” ಎಂಬ ಧ್ಯೇಯವಾಕ್ಯದಡಿ ಮಕ್ಕಳಿಗೆ ಗಿಡ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದ ಚಿಣ್ಣರ ಚಾವಡಿ ಮಂಗಳೂರು ಇದರ ಸಂಚಾಲಕರಾದ ಸುನಿಲ್ ಕುಮಾರ್ ಬಜಾಲ್ ಅವರು, ಪ್ರತಿಯೊಬ್ಬರೂ ಒಂದೊಂದು ಗಿಡವನ್ನು ನೆಟ್ಟು ಅದರ ಪೋಷಣೆ ಮಾಡುವ ಮೂಲಕ ಸಾವಿರಾರು ಜೀವಿಗಳಿಗೆ ಆಶ್ರಯ ನೀಡುವ ಕಾರ್ಯದಲ್ಲಿ ಭಾಗಿಯಾಗಬೇಕು. ಹಸಿರು ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ತಮ್ಮ ಬದ್ಧತೆಯನ್ನು ತೋರಿಸಬೇಕಾಗಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪ್ರಮುಖರಾದ ಅಸುಂತ ಡಿಸೋಜ, ಮರ್ಲಿನ್ ರೇಗೋ, ಫ್ಲೇವಿ ಕ್ರಾಸ್ತಾ ಅತ್ತಾವರ, ಯುವಜನ ನಾಯಕರಾದ ಜಗದೀಶ್ ಬಜಾಲ್, ಚಿಣ್ಣರ ಚಾವಡಿ ಅಧ್ಯಕ್ಷೆ ಆಡ್ಲಿನ್ ಸಿಕ್ವೇರಾ, ಕಾರ್ಯದರ್ಶಿ ಸಂಗಮೇಶ್ ಹಾಗೂ ಇತರ ಪದಾಧಿಕಾರಿಗಳಾದ ವಿಶಾಗಾ, ಇಯೋನ್ನಾ, ಮೌಲ್ಯ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ವಿವಿಧ ಜಾತಿಯ ಗಿಡಗಳನ್ನು ವಿತರಿಸಿ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು.