ಸಾವಿರಾರು ಇರುವೆಗಳು ತಿಂಗಳಾನುಗಟ್ಟಲೆ ಭೂಮಿ ಕೊರೆದು, ಕಲ್ಲು ಮಣ್ಣಿನ ಒಂದೊಂದು ಕಣವನ್ನು ಹೊರತೆಗೆದು ರಾಶಿ ಹಾಕಿ, ಬದುಕಲು ಒಂದು ಗೂಡನ್ನು ಕಟ್ಟಿಕೊಳ್ಳುತ್ತವೆ. ಅದು ಅವುಗಳ ಮನೆ ಅಲ್ಲ, ಅವುಗಳ ಅಸ್ತಿತ್ವ.ಅಲ್ಲಿಗೆ ಒಂದು ಆನೆ ಬಂದು ಕಾಲಿಟ್ಟು ಬಿಡುತ್ತದೆ.ಕ್ಷಣದಲ್ಲಿ ನೂರಾರು ಇರುವೆಗಳು ಸಾಯುತ್ತವೆ. ತಿಂಗಳುಗಳ ಶ್ರಮ ನೆಲಸಮವಾಗುತ್ತದೆ. ಆಗ ಉಳಿದ ಇರುವೆಗಳು ಏನು ಮಾಡುತ್ತವೆ? ಹೆದರಿ ಓಡಿ ಹೋಗುತ್ತವೆಯೇ? ಆನೆ ದೊಡ್ಡದು, ನಾವು ಸಣ್ಣವರು ಎಂದು ಸುಮ್ಮನಾಗುತ್ತವೆಯೇ?ಇಲ್ಲ. ಉಳಿದ ಇರುವೆಗಳು ತಕ್ಷಣವೇ ಆ ಆನೆಯ ಕಾಲನ್ನೇ ಮುತ್ತಿಕೊಂಡು ಕಚ್ಚುತ್ತವೆ. ಆನೆಗೆ ನೋವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಇರುವೆಗಳು ತಮ್ಮ ಸಾತ್ವಿಕ ಸಿಟ್ಟನ್ನು ತೋರಿಸುತ್ತವೆ.ಸಾತ್ವಿಕ ಸಿಟ್ಟು ಎಂಬುದು ಪ್ರತಿ ಜೀವಿಯಲ್ಲೂ ಇರುವ ಅಸ್ತಿತ್ವದ ಮೊದಲ ಪ್ರತಿಕ್ರಿಯೆ. ಅದು ಇರುವೆಗೂ ಇದೆ. ಆನೆ ಉದ್ದೇಶಪೂರ್ವಕವಾಗಿ ಕಾಲಿಟ್ಟಿತೋ, ಆಕಸ್ಮಿಕವಾಗಿ ಕಾಲಿಟ್ಟಿತೋ ಎಂಬುದು ಇರುವೆಗೆ ಮುಖ್ಯವಲ್ಲ. ತನ್ನ ಅಸ್ತಿತ್ವದ ಮೇಲೆ ದಾಳಿ ನಡೆದಿದೆ ಎಂಬುದು ಮಾತ್ರ ಸತ್ಯ. ಆ ಸತ್ಯಕ್ಕೆ ತಕ್ಷಣದ ಪ್ರತಿಕ್ರಿಯೆಯೇ ಸಾತ್ವಿಕ ಸಿಟ್ಟು.ಈಗ ಮನುಷ್ಯರತ್ತ ಬನ್ನಿ.ಒಂದು ವ್ಯಕ್ತಿಯ, ಒಂದು ಇಡೀ ಸಮುದಾಯದ ಅಸ್ತಿತ್ವವನ್ನೇ ಅಳಿಸಿ ಹಾಕುವ ಹುನ್ನಾರಗಳು ಪ್ರತಿದಿನ, ಪ್ರತ್ಯಕ್ಷವಾಗಿ ಪರೋಕ್ಷವಾಗಿ ನಡೆಯುತ್ತಿರುತ್ತವೆ. ಆದರೆ ಅದರ ವಿರುದ್ಧ ಇರುವೆಯಷ್ಟು ಸಾತ್ವಿಕ ಸಿಟ್ಟನ್ನೂ ತೋರಿಸದೆ, ಅದನ್ನು ಸಹಜ ಎಂದು ಸ್ವೀಕರಿಸಿ ಬದುಕುವುದಿದೆಯಲ್ಲಾ – ಅದನ್ನು ಏನೆಂದು ಕರೆಯಬೇಕು? ಅದು ಸಹನೆಯೇ? ಅದು ಶಾಂತಿಯೇ? ಇಲ್ಲ. ಅದು ಸತ್ತ ಮನಸ್ಥಿತಿ.ಅದಕ್ಕಿಂತ ದೊಡ್ಡ ದುರಂತ ಇನ್ನೊಂದಿದೆ – ಅಕಾಲದ ಸಿಟ್ಟು.ಎಲ್ಲಿ ಮಾತನಾಡಬೇಕೋ ಅಲ್ಲಿ ಮೌನವಾಗಿರುವುದು, ಎಲ್ಲಿ ಮೌನವಾಗಿರಬೇಕೋ ಅಲ್ಲಿ ಮಾತನಾಡುವುದು. ಅನ್ಯಾಯ ನಡೆದ ಕ್ಷಣದಲ್ಲಿ ಹೆದರಿ ಸುಮ್ಮನಿರುವುದು, ವರ್ಷಗಳು ಕಳೆದ ನಂತರ ಆ ಗಾಯದ ಕಲೆಯನ್ನು ಕೆರೆದು ಕೆರೆದು ರಕ್ತ ಬರಿಸಿಕೊಂಡು ಕೂಗುವುದು. ಇದನ್ನು ಸಾಮಾನ್ಯ ಅಜ್ಞಾನಿ ಮಾಡಿದರೆ ‘ಅವನಿಗೆ ತಿಳುವಳಿಕೆ ಇಲ್ಲ ಬಿಡಿ’ ಎನ್ನಬಹುದು. ಆದರೆ ನಾಲ್ಕು ಪುಸ್ತಕ ಓದಿದವನು, ನಾಯಕನೆಂದು ಕರೆಸಿಕೊಳ್ಳುವವನೇ ಹೀಗೆ ಮಾಡಿದರೆ? ಅವನಿಗೆ ಸಾಮಾನ್ಯ ಪ್ರಜ್ಞೆಯೇ ಇಲ್ಲ ಎಂದು ಸಾಮಾನ್ಯರಿಗೂ ಗೊತ್ತಾಗಿಬಿಡುತ್ತದೆ. ಶೋಷಿತರ ಬದುಕಿನಲ್ಲಿ ನಡೆದಿರುವುದು ಇದೇ. ನಡೆದು ನಡೆದು, ಹೊಂದಿಕೊಂಡು ಹೊಂದಿಕೊಂಡು, ಶೋಷಣೆಯೇ ಸಂಸ್ಕೃತಿಯಾಗಿಬಿಟ್ಟಿದೆ. ಶೋಷಣೆಗೆ ಹೊಂದಿಕೊಳ್ಳುವುದೇ ಬದುಕುವ ಕಲೆಯಾಗಿಬಿಟ್ಟಿದೆ. ಈ ಮಟ್ಟಕ್ಕೆ ಹೊಂದಿಕೊಂಡಿದ್ದಾರೆಯೆಂದರೆ, ಒಂದು ದಿನ ಯಾರೂ ಅವಮಾನಿಸದಿದ್ದರೆ ಅವರಿಗೆ ತಳಮಳ ಶುರುವಾಗುತ್ತದೆ. ‘ಇಂದು ಯಾಕೆ ಯಾರೂ ನನ್ನನ್ನು ಬೈಯಲಿಲ್ಲ?’ ಎಂಬ ಹುಡುಕಾಟ ಶುರುವಾಗುತ್ತದೆ. ಅವಮಾನವೇ ಗುರುತಿಸುವಿಕೆಯಾಗಿಬಿಟ್ಟಾಗ, ಅನುಕಂಪವೇ ಅಸ್ತಿತ್ವವಾಗಿಬಿಟ್ಟಾಗ, ಆ ಸಮುದಾಯ ಯಾವ ಕ್ಷೇತ್ರದಲ್ಲೂ ಮುಂದೆ ಹೋಗುವುದಿಲ್ಲ. ಅದು ಹಿಂದಕ್ಕೆ ಹೋಗುತ್ತದೆ.ಇದೇ ಕಾರಣಕ್ಕೆ ಶೋಷಿತರಿಗೆ ಟೈಮ್ ಸೆನ್ಸ್ ಮತ್ತು ಟೈಮ್ ಟ್ರಾವೆಲ್ ಎರಡೂ ಗೊತ್ತಿಲ್ಲ. ಅವರು ದೇಹದಲ್ಲಿ ವರ್ತಮಾನದಲ್ಲಿದ್ದರೂ, ಮನಸ್ಸಿನಲ್ಲಿ ಯಾವಾಗಲೂ ಭೂತಕಾಲದಲ್ಲೇ ಇರುತ್ತಾರೆ. 50 ವರ್ಷದ ಹಿಂದೆ ನಿಮ್ಮ ಅಜ್ಜನನ್ನು ದೇವಸ್ಥಾನದ ಒಳಗೆ ಬಿಡಲಿಲ್ಲ, ಕೆರೆಯ ನೀರು ಮುಟ್ಟಲು ಬಿಡಲಿಲ್ಲ, ಶಾಲೆಯ ಬಾಗಿಲು ಮುಚ್ಚಿತ್ತು. ಆತ ಪ್ರತಿಭಟಿಸಲು ಸಾಧ್ಯವೇ ಇರಲಿಲ್ಲ, ಏಕೆಂದರೆ ಕಾನೂನು ಅವನ ಪರವಾಗಿ ಇರಲಿಲ್ಲ.ನಂತರ ಕಾನೂನು ಬಂತು. ಅಂಬೇಡ್ಕರ್ ಸಂವಿಧಾನ ಬರೆದರು. ಬಾಗಿಲು ತೆರೆಯಿತು. ಮೀಸಲಾತಿ ಬಂತು. ‘ಎಲ್ಲರಿಗೂ ನೀರು’ ಎಂಬ ಬೋರ್ಡ್ ಬಂತು.ಆದರೆ ನಾವು ಆ ತೆರೆದ ಬಾಗಿಲಿನಿಂದ ಒಳಗೆ ಹೋಗಲೇ ಇಲ್ಲ. ನಾವು 50 ವರ್ಷ ತಡ ಮಾಡಿದೆವು. ಈಗ ಸ್ವಲ್ಪ ಶಿಕ್ಷಣ, ಅಲ್ಪ ನೌಕರಿ, ಸಣ್ಣ ಅಧಿಕಾರ ಸಿಕ್ಕಿದ ನಂತರ ಎದ್ದು ನಿಂತು ಹೇಳುತ್ತಿದ್ದೇವೆ – “ನಮ್ಮನ್ನು ಬಿಡಲಿಲ್ಲ” ಎಂದು. ಇದು ನ್ಯಾಯಯುತ ಕೋಪ, ಆದರೆ ಕಾಲ ಮೀರಿದ ಕೋಪ. ನೆರೆ ಬಂದು ಮೂರು ತಿಂಗಳಾದ ಮೇಲೆ ಏರಿ ಕಟ್ಟಿದಂತೆ. ನಾವು ಹಿಂದಿನ ಯುದ್ಧವನ್ನು ಇಂದು ಗೆಲ್ಲಲು ಹೊರಟಿದ್ದೇವೆ.ನೀವು ಈ ಹಳೆಯ ಯುದ್ಧದಲ್ಲೇ ಮುಳುಗಿರುವಾಗಲೇ, ನಿಮ್ಮ ಮನೆ ಬಾಗಿಲಿಗೆ ಹೊಸ ಯುದ್ಧ ಬಂದು ನಿಂತಿದೆ. ಅದಕ್ಕೆ ಜಾತಿಯ ಬೇರೆ ಬೇರೆ ಸಾವಿರ ಹೆಸರುಗಳಿವೆ. ಅವು ಅಷ್ಟು ಸುಲಭಕ್ಕೆ ಕಣ್ಣಿಗೆ ಕಾಣುವುದೂ ಇಲ್ಲ.ನೀವು ಸರ್ಕಾರಿ ನೌಕರಿಯಲ್ಲಿ ಪ್ರಮೋಷನ್ ಮೀಸಲಾತಿಗಾಗಿ ಬೀದಿಯಲ್ಲಿ ಕೂಗುತ್ತಿರುವಾಗಲೇ, ಸರ್ಕಾರಿ ನೌಕರಿಯೇ ಇಲ್ಲವಾಗುತ್ತಿದೆ. ಜಗತ್ತು ಪ್ರೈವೇಟ್ ಆಗುತ್ತಿದೆ. ಮುಂದಿನ ಕೆಲಸವೆಲ್ಲಾ ಕೋಡಿಂಗ್, ಡೇಟಾ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೇಲೆ ನಿಂತಿದೆ. ಅಲ್ಲಿ ನಿಮ್ಮ ಜಾತಿ ಪ್ರಮಾಣಪತ್ರಕ್ಕೆ ಬೆಲೆ ಇಲ್ಲ. ಅಲ್ಲಿ ಒಂದೇ ಪ್ರಶ್ನೆ – ನಿನಗೆ ಏನು ಬರುತ್ತದೆ? ನಿಮ್ಮ ಮಕ್ಕಳಿಗೆ ಇಂಗ್ಲಿಷ್ ಬರುತ್ತದೆಯೇ? ಕೋಡ್ ಬರೆಯಲು ಬರುತ್ತದೆಯೇ? ಜಗತ್ತಿನೊಂದಿಗೆ ವ್ಯಾಪಾರ ಮಾಡುವ ಧೈರ್ಯ ಇದೆಯೇ?ನೀವು ಇನ್ನೂ ಎರಡು ಎಕರೆ ಭೂಮಿಗಾಗಿ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಹಾಕುತ್ತಿರುವಾಗಲೇ, ಭೂಮಿಗಿಂತ ನೂರು ಪಟ್ಟು ದೊಡ್ಡ ಆಸ್ತಿ ಹುಟ್ಟಿದೆ – ಅದರ ಹೆಸರು ಡೇಟಾ. ಗೂಗಲ್, ಅಮೆಜಾನ್ ಭೂಮಿಯನ್ನು ನಂಬಿ ದೊಡ್ಡದಾಗಲಿಲ್ಲ, ನಿಮ್ಮ ನಮ್ಮ ಮಾಹಿತಿಯನ್ನು ನಂಬಿ ದೊಡ್ಡದಾದವು. ನೀವು ಆ ಆಟದಲ್ಲಿ ಎಲ್ಲಿದ್ದೀರಿ?ಮುಂದಿನ ಅವಮಾನ ಕೆರೆಯ ದಡದಲ್ಲಿ ನಡೆಯುವುದಿಲ್ಲ, ಅದು ಮೊಬೈಲ್ ಪರದೆಯ ಮೇಲೆ ನಡೆಯುತ್ತದೆ. ಬ್ಯಾಂಕಿನ AI ನಿಮ್ಮ ಜಾತಿ ನೋಡಿ ಅಲ್ಲ, ನಿಮ್ಮ ಪಿನ್ ಕೋಡ್, ನಿಮ್ಮ ಇಂಗ್ಲಿಷ್, ನಿಮ್ಮ ಕ್ರೆಡಿಟ್ ಸ್ಕೋರ್ ನೋಡಿ ನಿಮ್ಮ ಸಾಲದ ಅರ್ಜಿಯನ್ನು ತಿರಸ್ಕರಿಸುತ್ತದೆ. ಕಂಪನಿಯ ಸಾಫ್ಟ್ ವೇರ್ ಮನುಷ್ಯ ನಿಮ್ಮ ರೆಸ್ಯೂಮ್ ನೋಡುವ ಮೊದಲೇ ಅದನ್ನು ಕಸದ ಬುಟ್ಟಿಗೆ ಹಾಕುತ್ತದೆ. ಇದನ್ನು ನೀವು ಯಾವ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ಹಾಕುವಿರಿ? ಯಾವ ಕಾಯ್ದೆಯಡಿ ಹೋರಾಡುವಿರಿ?ಶೋಷಕರು ಇದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಶೋಷಿತರನ್ನು ಬುಗುರಿಯಂತೆ ಆಡಿಸಲು ಅವರ ಬುದ್ಧಿಯನ್ನು ಕೆಣಕಬೇಕಾಗಿಲ್ಲ, ಅವರ ಭಾವನೆಯನ್ನು ಕೆಣಕಿದರೆ ಸಾಕು ಎಂದು ಅವರಿಗೆ ಗೊತ್ತು. ಅದಕ್ಕಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಯಾರೋ ಒಬ್ಬ ವ್ಯರ್ಥ ಮನುಷ್ಯ ಅಂಬೇಡ್ಕರ್ ವಿರುದ್ಧ ಒಂದು ಪೋಸ್ಟ್ ಹಾಕಿದರೆ ಸಾಕು, ನಿಮ್ಮ ವಿಮೋಚಕರ ಫೋಟೋ ಎಲ್ಲೋ ಹಾಕಲಿಲ್ಲ ಎಂದರೆ ಸಾಕು, ನೀವು ಎಲ್ಲ ಕೆಲಸ ಬಿಟ್ಟು ದಿನಗಟ್ಟಲೆ ಕಮೆಂಟ್ ನಲ್ಲಿ ಹೊಡೆದಾಡುತ್ತಾ ಕೂತುಬಿಡುತ್ತೀರಿ.ನಿಮಗೆ ಒಂದು ಕ್ಷಣವೂ ಅನಿಸುವುದಿಲ್ಲ – ಅಂಬೇಡ್ಕರ್ ಒಂದು ಫೋಟೋ ಅಲ್ಲ, ಒಂದು ವಿಧಾನ. ಬುದ್ಧ ಒಂದು ವಿಗ್ರಹ ಅಲ್ಲ, ಒಂದು ವಿವೇಚನೆ ಎಂದು. ಹೇಳಿಕೆ ಕೊಡುವವನು ಬೇಕಂತಲೇ ನಿಮ್ಮನ್ನು ಟೆಂಪ್ಟ್ ಮಾಡಲು ಕೊಡುತ್ತಾನೆ. ಅವನ ಉದ್ದೇಶವೇ ನಿಮ್ಮ ಸಮಯ ಹಾಳು ಮಾಡುವುದು. ನಿಮ್ಮ ಸಮಯ ಹಾಳಾದಾಗಲೇ ಅವನ ಬದುಕು ಸೊಗಸಾಗುವುದು.ಹೀಗೆ ಭಾವರಹಿತ ಬುದ್ಧಿಜೀವಿಗಳು, ಬುದ್ಧಿರಹಿತ ಭಾವಜೀವಿಗಳನ್ನು ಆಳುತ್ತಿದ್ದಾರೆ.ಇದು ವಿಷವರ್ತುಲ. ಭೂತಕಾಲದಲ್ಲಿ ಬದುಕಲು ಅಭ್ಯಾಸವಾಗಿರುವವರಿಗೆ ವರ್ತಮಾನ ಯಾವಾಗಲೂ ನಿಷ್ಠುರವಾಗಿರುತ್ತದೆ. ವರ್ತಮಾನ ನಿಷ್ಠುರವಾದಾಗ ಅವರು ಮತ್ತೆ ಭೂತಕಾಲಕ್ಕೆ ಓಡಿ ಹೋಗುತ್ತಾರೆ. ಮತ್ತೆ ಅದನ್ನೇ ಮೆಲುಕು ಹಾಕುತ್ತಾರೆ.ಇರುವೆಗೆ ಗೊತ್ತಿರುವ ಟೈಮಿಂಗ್, ನಮಗೇಕೆ ಗೊತ್ತಾಗುತ್ತಿಲ್ಲ?ಇರುವೆಗೆ ಗೊತ್ತು – ಯಾವಾಗ ಕಚ್ಚಬೇಕು ಎಂದು. ಅನ್ಯಾಯ ನಡೆದ ಕ್ಷಣದಲ್ಲೇ ಕಚ್ಚಬೇಕು, ತಿಂಗಳ ನಂತರ ಅಲ್ಲ.ಶೋಷಿತರು ಕಲಿಯಬೇಕಾಗಿರುವುದು ಟೈಮ್ ಟ್ರಾವೆಲ್ ಅಲ್ಲ, ಟೈಮ್ ಸೆನ್ಸ್. ಭೂತಕಾಲದ ನೋವನ್ನು ಮರೆಯಬೇಡಿ, ಆದರೆ ಅದನ್ನು ಕಾಲಿಗೆ ಕಟ್ಟಿಕೊಂಡು ನಡೆಯಬೇಡಿ.ಕಲ್ಲಿನ ದೇವಸ್ಥಾನದ ಬಾಗಿಲು ತೆರೆದರೆ ಸಾಲದು, ಗೂಗಲ್ ನ ಬೋರ್ಡ್ ರೂಂ ಬಾಗಿಲು ತೆರೆಯುವುದು ಹೇಗೆ ಎಂದು ಯೋಚಿಸುವ ಕಾಲ ಇದು. ಹಿಂದಿನ ಅನ್ಯಾಯಕ್ಕೆ ನ್ಯಾಯ ಕೇಳುವುದು ಹೋರಾಟವಾದರೆ, ಮುಂದೆ ಬರುವ ಅನ್ಯಾಯವನ್ನು ತಡೆಯುವುದು ರಾಜಕಾರಣ.ನಾವು ಇನ್ನೂ ಹೋರಾಟಗಾರರಾಗಿಯೇ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡುತ್ತಿದ್ದೇವೆ. ಪಕ್ಕಾ ರಾಜಕಾರಣಿಗಳಾಗಲಿಲ್ಲ, ಪಕ್ಕಾ ಉದ್ಯಮಿಗಳಾಗಲಿಲ್ಲ, ಇನ್ನು ಅವಕಾಶಗಳನ್ನು ಸೃಷ್ಟಿಸುವವರು ಹೇಗಾಗುತ್ತೇವೆ? ಅದಕ್ಕೆ ನಾವು ವರ್ತಮಾನದ ಟೈಮ್ ಟ್ರಾವೆಲ್ನಲ್ಲಿ ಟೈಮ್ ಸೆನ್ಸ್ ಇಟ್ಟುಕೊಂಡು ಬದುಕಬೇಕು ಅನ್ನೋದು.
– ಸೋಸಲೆ ಗಂಗಾಧರ್-9482169330