ಉಸಿರಾಟವೇ ಬದುಕಲ್ಲ: ಅಸ್ತಿತ್ವದ ಅಸಲಿ ತತ್ವ
ಸಹನೆಯಿಂದ ಕುಳಿತು ಒಂದು ಪುಸ್ತಕವನ್ನು ಓದಿ ಮುಗಿಸುವ ತಾಳ್ಮೆ ಇಂದಿನ ಅಕ್ಷರಸ್ಥ ಪೀಳಿಗೆಗೆ ಇದೆಯೇ? ಅಥವಾ ತಮಗಿರುವ ಸಮಸ್ಯೆಗಳನ್ನು ಮನಸ್ಸಿಟ್ಟು ಕೇಳಿಸಿಕೊಳ್ಳುವ ಅವಧಾನ ಇಂದಿನ ಪೀಳಿಗೆಗೆ ಇದೆಯೇ? ಅಥವಾ ಯಾವ ಭಾವೋದ್ವೇಗಗಳಿಗೆ ಒಳಪಡದೆ ಸಮಚಿತ್ತದಿಂದ ತನ್ನ ವಿಪತ್ತುಗಳನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಎಂದು ಒಂದು ಗಂಟೆಗಳ ಕಾಲ ಏಕಾಗ್ರತೆ ವಹಿಸಿ ಚಿಂತಿಸುವ ಅಭ್ಯಾಸವಿದೆಯೇ? ಇಲ್ಲ ಅನಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ನಾಲ್ಕು ಸಾಲಿನ ವಿಚಾರವನ್ನೂ ಓದಲು ಈಗಿನ ಪೀಳಿಗೆ ಹಿಂಜರಿಯುತ್ತದೆ. 5G ನೆಟ್ವರ್ಕ್ ಸ್ಪೀಡ್ ಸಾಲುತ್ತಿಲ್ಲ, ನೆಟ್ ಪ್ಯಾಕೇಜ್ ಕೂಡ ಸಾಲದು. ಬೇಕಿದ್ದು ಬೇಡದ್ದು ಎಲ್ಲವೂ ಮೊಬೈಲ್ನಲ್ಲಿ ಇನ್ಸ್ಟಾಲ್ ಆಗಿದೆ. ಅವುಗಳನ್ನು ನೋಡುವುದರಲ್ಲೇ ದಿನ ಜಾರಿಹೋಗುತ್ತಿದೆ. ದೃಶ್ಯಾವಳಿಗೆ AI ಕ್ರಿಯೇಷನ್ಸ್ ಬೆರಗುಗೊಳಿಸುತ್ತಿದೆ. ಇಂಥ ಹೊತ್ತಿನಲ್ಲಿ ಶೋಷಿತರ ಶತಮಾನದ ತಲೆನೋವುಗಳು AI ಜೊತೆ ದೃಶ್ಯರೂಪಕಗಳಾಗಿ ಶೋಷಿತರನ್ನು ಕ್ಷಣಿಕವಾಗಿ ಸಂತೃಪ್ತಿಗೊಳಿಸುತ್ತಿವೆ. ಆದರೆ ಅಸಲಿ ಸಮಸ್ಯೆಗಳು ಹಾಗೆಯೇ ಉಳಿಯುತ್ತಿವೆ. ಬದುಕು ಭ್ರಮೆಯಾಗಿ, ಭ್ರಮೆಯೇ ಬದುಕಾಗುತ್ತಿದೆ. ಈ ಹೊಸ್ತಿಲಲ್ಲಿ ನಿಂತ ಪೀಳಿಗೆಗೆ ತಲೆಮಾರುಗಳ ತಲೆನೋವು ಮತ್ತಷ್ಟು ದಟ್ಟವಾಗುತ್ತಿದೆ. ಅವರು ತಮ್ಮ ತಲೆಮಾರುಗಳ ತಲೆನೋವುಗಳನ್ನು ನಿವಾರಿಸಿಕೊಳ್ಳಲು ಸಂಕಲ್ಪವನ್ನು ಹೇಗೆ ಮಾಡಿಯಾರು?!
ಜಾತಿ ಮತ್ತು ಧರ್ಮದ ಆಧಾರದ ಮೇಲೆ ಇಷ್ಟೊಂದು ಆಳವಾಗಿ ಒಡೆದ ಸಮಾಜದಲ್ಲಿ, ನಾವು ಎಷ್ಟೇ ವಿದ್ಯೆ, ಸ್ಥಾನ, ಅಧಿಕಾರ ಗಳಿಸಿದರೂ, ಇದೇ ವ್ಯವಸ್ಥೆ ನಮ್ಮನ್ನು ಕೆಲಸ ಮಾಡಲು ಬಿಡದಿದ್ದರೆ ಅದರ ಅರ್ಥವೇನು? ಭಾರತ ಒಡೆದಿರುವುದು ನಿನ್ನೆ ಮೊನ್ನೆಯಲ್ಲ. ಇದು ಸಾವಿರ ತಲೆಮಾರುಗಳ ಒಡಕು. ಈ ಒಡಕನ್ನು ತಂದಿದ್ದು ಯಾರು? ಹಿಂದಿನ ತಲೆಮಾರುಗಳು. ಯಾಕೆ ತಂದರು? ಪ್ರಗತಿಗಾಗಿ. ಯಾರ ಪ್ರಗತಿಗಾಗಿ? ತಮ್ಮ ಮೂಗಿನ ನೇರದ ಪ್ರಗತಿಗಾಗಿ.ಹಿಂದಿನ ತಲೆಮಾರಿನ ತಲೆನೋವನ್ನು ಇಂದಿನ ತಲೆಮಾರು ತನ್ನ ಒಂದೇ ಜೀವಿತಾವಧಿಯಲ್ಲಿ ಹೋಗಲಾಡಿಸಲು ಸಾಧ್ಯವಿಲ್ಲ. ಏಕೆ ಸಾಧ್ಯವಿಲ್ಲ? ಏಕೆಂದರೆ ಇಂದಿನ ತಲೆಮಾರು “ಶೀಘ್ರಫಲಾನುಪೇಕ್ಷಿ”. ಬೇಗ ಫಲ ಬೇಕು ಎನ್ನುವ ಈ ಆತುರವೇ ಇಂದಿನ ಎಲ್ಲಾ ಪ್ರಗತಿಯ ದೊಡ್ಡ ತೊಡಕು.ತೊಡಕು ಬಗೆಹರಿಯುವುದು ಹೇಗೆ?ಗಮನಿಸಿ: ಶಿಕ್ಷಣ, ಸ್ಥಾನಮಾನ ಮತ್ತು ವ್ಯವಸ್ಥೆ – ಈ ಮೂರಕ್ಕಾಗಿ ಧರ್ಮಗಳ ನಡುವೆ, ಜಾತಿಗಳ ನಡುವೆ ಆಗಿನಿಂದಲೂ ಪೈಪೋಟಿ ಇದೆ. ವರ್ತಮಾನದ ಪ್ರಗತಿಪರ ಚಿಂತನೆ ನಾಳೆಗೆ ಹಳತಾಗಬಹುದು. ಮನುಷ್ಯ ನಾಳೆಯನ್ನು ಊಹಿಸಬಲ್ಲನೇ ಹೊರತು, ನಾಳೆಯ ನಿಖರತೆಯನ್ನು ಅಲ್ಲ. ಈ ಅನಿಶ್ಚಿತತೆಯಿಂದಲೇ ಜಗತ್ತಿನಲ್ಲಿ ಅನೇಕ ಧರ್ಮಗಳು ಹುಟ್ಟಿದವು, ಜಾತಿಗಳು ಉಲ್ಬಣಗೊಂಡವು. ಈ ಪೈಪೋಟಿಯಲ್ಲಿ ಮೇಲೆ-ಕೆಳಗೆ ನಡೆಯುತ್ತಲೇ ಇರುತ್ತದೆ. ಯಾವುದೂ ತನ್ನ ಸ್ಥಿರತೆಯನ್ನು ಶಾಶ್ವತವಾಗಿ ಉಳಿಸಿಕೊಳ್ಳುವುದಿಲ್ಲ.ಆದರೂ ಭಾರತದಂತಹ ನೆಲದಲ್ಲಿ ವರ್ಣಾಶ್ರಮದ ಆಧಾರದ ಮೇಲೆ ಒಡಕು ತಂದದ್ದು ಮತ್ತು ಅದರ ಲಾಭವನ್ನು ಇಂದಿಗೂ ಅನುಭವಿಸುತ್ತಿರುವುದು ಪಟ್ಟಭದ್ರರು ಮಾತ್ರ. ಈ ಪಟ್ಟಭದ್ರತನದ ವಿರುದ್ಧ ಹಿಂದೆ ಯಾರು ಹೋರಾಡಿದರೋ, ಇಂದು ಯಾರು ಹೋರಾಡುತ್ತಿದ್ದಾರೋ, ಮುಂದೆ ಯಾರು ಬರುವರೋ – ಅವರೆಲ್ಲರನ್ನೂ ಜೀರ್ಣಿಸಿಕೊಳ್ಳಲು ನೂರಾರು ಜಠರಗಳು ಹಸಿದು ಕೂತಿವೆ.
ಈ ಜೀರ್ಣಿಸಿಕೊಳ್ಳುವ ಶಕ್ತಿಯೇ ಪಟ್ಟಭದ್ರತನದ ನಿಜವಾದ ಬಲ.ಈ ಪಟ್ಟಭದ್ರತನಕ್ಕೆ ಆಧುನಿಕ ಜಗತ್ತಿನಲ್ಲಿ ಮೊದಲ ತೀವ್ರ ಪೆಟ್ಟು ಕೊಟ್ಟಿದ್ದು ಬ್ರಿಟಿಷರ ಕಾಲದ ಸಾರ್ವತ್ರಿಕ ಶಿಕ್ಷಣ ನೀತಿ. ಇಲ್ಲಿಂದಲೇ ಶೂದ್ರರು ಮತ್ತು ಅಸ್ಪೃಶ್ಯರು ಅಕ್ಷರ ಕಲಿತದ್ದು. ಆ ಅಕ್ಷರ ಕ್ರಾಂತಿಯ ಅತ್ಯಂತ ಕ್ರಾಂತಿಕಾರಿ ಫಲವೇ ಡಾ. ಅಂಬೇಡ್ಕರ್. ಅವರು ದೇಶಕ್ಕೆ ಸಂವಿಧಾನ, ಮೂಲಭೂತ ಹಕ್ಕುಗಳು, ಕರ್ತವ್ಯಗಳು – ಎಲ್ಲವೂ ಪ್ರಬುದ್ಧ ಭಾರತದ ನಿರ್ಮಾಣಕ್ಕೆ ಅಡಿಪಾಯವಾದವು. ಆದರೂ ಸಂವಿಧಾನ ಇರುವ ಜಾಗದಲ್ಲೇ ಅದರ ವಿರೋಧಿಗಳಿರುವುದರಿಂದ ಎಲ್ಲವೂ ನೆನೆಗುದಿಗೆ ಬಿದ್ದಿದೆ.ಅಂಬೇಡ್ಕರ್ ಅವರು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾತು ಇಂದಿಗೂ ಪ್ರಸ್ತುತ: “ನಾನು ಬರೆದ ಸಂವಿಧಾನವನ್ನು ಎಲ್ಲರೂ ಮುಕ್ತಕಂಠದಿಂದ ಪ್ರಶಂಸಿಸುತ್ತಿದ್ದಾರೆ, ನಾನೂ ಒಪ್ಪುತ್ತೇನೆ. ಈ ಸಂವಿಧಾನ ಯಥಾವತ್ತಾಗಿ ಜಾರಿಯಾದರೆ 20 ವರ್ಷಗಳಲ್ಲಿ ಈ ದೇಶ ಪ್ರಬುದ್ಧ ಭಾರತವಾಗುತ್ತದೆ. ಆದರೆ ಅದು ಜಾರಿಯಾಗುತ್ತದೆ ಎಂಬ ನಂಬಿಕೆ ನನಗಿಲ್ಲ. ಏಕೆಂದರೆ ಸಂವಿಧಾನ ಇರುವ ಜಾಗದಲ್ಲೇ ಅದರ ವಿರೋಧಿಗಳಿದ್ದಾರೆ… ರಾಜಕೀಯ ಸಮಾನತೆ ಸಾಧಿಸಿದ್ದೇವೆ – ಒಬ್ಬ ವ್ಯಕ್ತಿಗೆ ಒಂದು ಮತ, ಒಂದು ಮತಕ್ಕೆ ಒಂದೇ ಮೌಲ್ಯ. ಆದರೆ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಹಾಗೆಯೇ ಇದೆ. ಅದನ್ನು ಸಾಧಿಸಲು ಒಡೆದ ಜಾತಿಗಳೆಲ್ಲ ಒಂದಾಗಿ ಸ್ವತಂತ್ರ ರಾಜಕೀಯ ಶಕ್ತಿಯಾಗಿ ಸಂವಿಧಾನ ಇರುವ ಜಾಗಕ್ಕೆ ಹೋಗಬೇಕು. ಇದನ್ನು ಅರ್ಥಮಾಡಿಕೊಳ್ಳದಿದ್ದರೆ ಅಸಮಾನತೆಗೆ ಬಲಿಯಾದ ಜನರೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಧ್ವಂಸ ಮಾಡುತ್ತಾರೆ.”ಈ ಮಾತನ್ನು ನಾವು ಹಗುರವಾಗಿ ತೆಗೆದುಕೊಂಡಿದ್ದರಿಂದಲೇ ಶೋಷಿತ ಸಮುದಾಯದ ಒಬ್ಬ ವ್ಯಕ್ತಿ ಎಷ್ಟೇ ಮೇಲೆ ಹೋದರೂ ವ್ಯವಸ್ಥೆ ಅವನಿಗಿಂತ ದೊಡ್ಡದಾಗಿ ಪರಿಣಮಿಸುತ್ತದೆ.ಒಬ್ಬ ವ್ಯಕ್ತಿಯ ವೈಯಕ್ತಿಕ ಪ್ರಗತಿ ಸಾಮಾಜಿಕ ಬದಲಾವಣೆಯಾಗುತ್ತದೆಯೇ? ಖಂಡಿತ ಇಲ್ಲ. ಒಬ್ಬ ವ್ಯಕ್ತಿ ಗಿನ್ನಿಸ್ ದಾಖಲೆ ಮಾಡಿದರೆ, ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದರೆ, ಐಎಎಸ್ ಅಧಿಕಾರಿಯಾದರೆ ಅದು ಅವನ ವೈಯಕ್ತಿಕ ಸಾಧನೆ, ದೇಶಕ್ಕೆ ಒಂದು ಕೀರ್ತಿ ಅಷ್ಟೇ. ಅಂಬಾನಿ, ಅದಾನಿಗಳು ವಿಶ್ವ ಶ್ರೀಮಂತರಾದರೆ ಭಾರತದ ಬಡವರು ಶ್ರೀಮಂತರಾದಂತೆ ಅಲ್ಲ.
ವ್ಯವಸ್ಥೆ ಬದಲಾಗದೆ ವ್ಯಕ್ತಿ ಎಷ್ಟೇ ಮೇಲೆ ಹೋದರೂ ಅದರ ಪರಿಣಾಮ ಸೀಮಿತ.ಒಂದಾಗಲು ಧರ್ಮಗಳು ಬಿಡಬೇಕಲ್ಲ! ಧರ್ಮಗಳು ಮನುಷ್ಯರ ನಡುವೆ ಸ್ನೇಹ ಸೇತುವೆಗಳಾಗಬೇಕಿತ್ತು, ಆದರೆ ಇಂದು ಅವು ಉರುಳಾಗಿವೆ. “ನನ್ನ ಧರ್ಮ ಶ್ರೇಷ್ಠ” ಎಂಬ ಯುದ್ಧಗಳು ನಿಂತಿಲ್ಲ. ಭಾರತದಲ್ಲಿ ನಾವು ಶಸ್ತ್ರ ಹಿಡಿದು ಪರಕೀಯರ ಜೊತೆ ರಕ್ತಪಾತ ಮಾಡುತ್ತಿಲ್ಲ, ಬದಲಿಗೆ ಶಾಸ್ತ್ರ ಹಿಡಿದು ಒಳಗಿನವರನ್ನೇ ರಕ್ತರಹಿತ ಯುದ್ಧದಲ್ಲಿ ಕೊಲ್ಲಲಾಗುತ್ತಿದೆ. ಅಸ್ಪೃಶ್ಯತೆ ಈಗ ನೇರವಾಗಿಲ್ಲ, ಅದರ ರೂಪ ವೈವಿಧ್ಯಮಯವಾಗಿದೆ. ಶೋಷಿತರ ಉದ್ದೇಶಗಳನ್ನೇ ಕೊಂದುಬಿಟ್ಟರೆ ಅಲ್ಲಿಗೆ ಮುಗಿಯಿತಲ್ಲವೇ?ಇದಕ್ಕೆ ಪರಿಹಾರವೇನು? ಚಳವಳಿಯ ತತ್ವವನ್ನು ಅರ್ಥಮಾಡಿಕೊಳ್ಳುವುದು.12ನೇ ಶತಮಾನದಲ್ಲಿ ಬಸವಣ್ಣನವರ ಹೋರಾಟ ನೋಡಿ: ಎಲ್ಲ ತಳವರ್ಗದವರಿಗೆ ಇಷ್ಟಲಿಂಗ ದೀಕ್ಷೆ, ವಚನ ಕ್ರಾಂತಿ, ದಾಸೋಹ, ಅನುಭವ ಮಂಟಪದಲ್ಲಿ ವಿಚಾರ ವಿನಿಮಯ. ಇಷ್ಟೆಲ್ಲ ಮಾಡಿದರೂ ತಳವರ್ಗದ ಸಮಾಜ ತಕ್ಷಣ ಲಿಂಗಾಯತ ಎನಿಸಿಕೊಳ್ಳಲಿಲ್ಲ. ಲಿಂಗಾಯತರಾಗಲು ಕನಿಷ್ಠ 500 ವರ್ಷ ಹಿಡಿಯಿತು.ಗಮನಿಸಿ: ಚಳವಳಿ ಎನ್ನುವುದು ಪ್ರಾಜೆಕ್ಟ್ ವರ್ಕ್ ಅಲ್ಲ, ಅದು ಮಿಷನರಿ ವರ್ಕ್. ಅದು ಮುಗಿಯುವುದೇ ಇಲ್ಲ. ಕಾಲಕಾಲಕ್ಕೆ ಎಲ್ಲವನ್ನೂ ಜೀರ್ಣಿಸಿಕೊಂಡು ಅಪ್ಡೇಟ್ ಆಗುತ್ತ ಹೋಗುತ್ತದೆ.
ಬಸವ ಧರ್ಮವು ಒಂದು ಪ್ರವರ್ಧಮಾನಕ್ಕೆ ಬರಲು 500 ವರ್ಷ ಬೇಕಾಯಿತು. ಹಾಗೆಯೇ ಈಗಿನ ಶೋಷಿತರು ತಮ್ಮ ವಿಕಸನ ಮತ್ತು ವಿಮೋಚನೆಗೆ 500 ವರ್ಷ ಮಿಷನರಿ ವರ್ಕ್ ಮಾಡಬೇಕು. ಎಲ್ಲಿಯೂ ಯಾವ ಕಾರಣಕ್ಕೂ ನಿಲ್ಲುವಂತಿಲ್ಲ. ನಿಂತರೆ 100 ವರ್ಷ ಹಿಂದಕ್ಕೆ ಹೋಗುತ್ತೆ. ಏಕೆಂದರೆ ಕತ್ತಲೆ ಎನ್ನುವುದು ಸ್ವಾಭಾವಿಕ. ಅದು ಸದಾ ಸುಮ್ಮನೆ ಇರುವಂತದ್ದು. ಅದನ್ನು ಅನುಭವಿಸಬೇಕಾದರೆ ಸೂರ್ಯನಿಗೆ ಕಂಬಳಿ ಹೊದಿಸಬೇಕಿಲ್ಲ, ನಾವು ರೆಪ್ಪೆ ಮುಚ್ಚಿದರೆ ಸಾಕು. ಆದರೆ ಎಚ್ಚರ ಎನ್ನುವುದು ಸೃಜನಶೀಲತೆಯ ಬೆಳಕು. ಅದನ್ನು ಪಟ್ಟಭದ್ರರು ನಿಮ್ಮಿಂದ ನಿರೀಕ್ಷಿಸುವುದಿಲ್ಲ. ಅವರು ನಿಮ್ಮ ಜಡತ್ವದ ಗೊರಕೆಯನ್ನು ಸಂಗೀತದಂತೆ ಆನಂದಿಸುತ್ತಾರೆ, ಆದರೆ ಶೋಷಿತರ ಎಚ್ಚರಿಕೆಯನ್ನು ಅವರು ಸಹಿಸುವುದಿಲ್ಲ. ಆದ್ದರಿಂದ ಅಂತಿಮ ತತ್ವ ಮತ್ತು ಸತ್ಯವನ್ನು ಅರಿತು ನಡೆಯಬೇಕಿದೆ.
- ಇಲ್ಲಿ ಬದುಕು ಎಂದರೆ ಕೇವಲ ಉಸಿರಾಡುವುದಲ್ಲ.
- ಬದುಕಬೇಕಾದರೆ ಮೊದಲು ಎಚ್ಚರವಾಗಿರಬೇಕು – ಏಕೆಂದರೆ ನಿದ್ರಿಸುವವನನ್ನು ಕಾಲವೇ ನುಂಗುತ್ತದೆ.
- ಎಚ್ಚರದ ಜೊತೆಗೆ ಚಲನಶೀಲವಾಗಿರಬೇಕು – ನಿಂತ ನೀರು ಕೊಳೆಯುತ್ತದೆ, ಹರಿಯುವ ನೀರೇ ಪವಿತ್ರ.
- ಚಲನೆಯ ಜೊತೆಗೆ ಕ್ರಿಯಾಶೀಲವಾಗಿರಬೇಕು – ದಿಕ್ಕಿಲ್ಲದ ಚಲನೆ ಅಲೆದಾಟ, ಕ್ರಿಯೆಯೇ ದಿಕ್ಕು.
- ಆ ಕ್ರಿಯೆಯಲ್ಲಿ ಪ್ರಾಯೋಗಿಕವಾಗಿರಬೇಕು.
- ಕನಸು ಕಾಣುವುದು ತತ್ವವಲ್ಲ, ಕನಸನ್ನು ನೆಲದ ಮೇಲೆ ನಡೆಸುವುದೇ ತತ್ವ.
Existence is not survival. To merely breathe is biological; to live is philosophical. Awakening is the first condition of existence, for time devours the sleeping consciousness. Awakening must become movement. Stagnation is decay — a still pool rots, only the river that flows remains pure. Movement must become action. Motion without purpose is wandering; action alone gives it direction. Action must become practice. Without practicality, action is just noise. A dream is not a principle. To make the dream walk upon the earth — that alone is philosophy.
- ಸೋಸಲೆ ಗಂಗಾಧರ್