ಚಿತ್ರದುರ್ಗ: ನಟ ಶಿವರಾಜ್‌ಕುಮಾರ್ ಅವರು ಸಿನಿಮಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಅನಿರೀಕ್ಷಿತವಾಗಿ ಪಟಾಕಿ ಸ್ಫೋಟಗೊಂಡ ಪರಿಣಾಮ ಕೆಲ ಕ್ಷಣಗಳ ಕಾಲ ಬೆಚ್ಚಿಬಿದ್ದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಘಟನೆ ವೇಳೆ ಶಿವಣ್ಣ ಅವರ ಸಮೀಪದಲ್ಲೇ ಪಟಾಕಿ ಸಿಡಿದರೂ ಯಾವುದೇ ಗಾಯಗಳಾಗದೆ ಸುರಕ್ಷಿತವಾಗಿದ್ದಾರೆ.
‘ಬೇಲ್’ ಚಿತ್ರದ ಪ್ರಚಾರದ ಹಿನ್ನೆಲೆಯಲ್ಲಿ ಶಿವರಾಜ್‌ಕುಮಾರ್ ಚಿತ್ರದುರ್ಗಕ್ಕೆ ಆಗಮಿಸಿದ್ದರು. ಈ ವೇಳೆ ಖಾಸಗಿ ಶೋರೂಮ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಅವರು ಪ್ರವೇಶಿಸುತ್ತಿದ್ದ ಸಂದರ್ಭದಲ್ಲಿ ಅಭಿಮಾನಿಗಳಿಂದ ಪಟಾಕಿ ಸಿಡಿಸಿ ಸ್ವಾಗತಿಸುವ ವ್ಯವಸ್ಥೆ ಮಾಡಲಾಗಿತ್ತು.
ಶಿವರಾಜ್‌ಕುಮಾರ್ ಸಾಗುತ್ತಿದ್ದ ಪ್ರವೇಶ ಮಾರ್ಗದ ಎರಡೂ ಬದಿಗಳಲ್ಲಿ ಫ್ಲವರ್‌ಪಾಟ್ ಮಾದರಿಯ ಪಟಾಕಿಗಳನ್ನು ಇರಿಸಲಾಗಿತ್ತು. ಆದರೆ ಅವುಗಳಲ್ಲಿ ಎರಡು ಪಟಾಕಿಗಳು ನಿರೀಕ್ಷೆಗೂ ಮುನ್ನವೇ ಏಕಾಏಕಿ ಸಿಡಿದಿವೆ. ಸ್ಫೋಟದ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದ್ದು, ಶಿವಣ್ಣ ಕೆಲ ಕ್ಷಣ ಗಾಬರಿಗೊಂಡಿದ್ದಾರೆ.
ಘಟನೆ ನಡೆದ ತಕ್ಷಣ ಭದ್ರತಾ ಸಿಬ್ಬಂದಿ ಶಿವರಾಜ್‌ಕುಮಾರ್ ಅವರನ್ನು ಸುರಕ್ಷಿತವಾಗಿ ಒಳಗೆ ಕರೆದೊಯ್ದಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಅವರಿಗೆ ಯಾವುದೇ ಗಾಯವಾಗಿಲ್ಲ. ನಂತರ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದಾರೆ.
ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಅದರಲ್ಲೂ ಕಲಾವಿದರು ಮತ್ತು ಗಣ್ಯರು ಪ್ರವೇಶಿಸುವ ಸ್ಥಳಗಳಲ್ಲಿ ಪಟಾಕಿ ಬಳಕೆಯ ಸಂದರ್ಭದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂಬ ಚರ್ಚೆಗೂ ಈ ಘಟನೆ ಕಾರಣವಾಗಿದೆ.
‘ಬೇಲ್’ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶನ ನೀಡಿದ್ದಾರೆ. ಶಿವರಾಜ್‌ಕುಮಾರ್ ಜೊತೆಗೆ ಸಾಯಿ ಕುಮಾರ್, ಜಯರಾಮ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.