ಮಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ HPCLನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಮಹಿಳಾ ಕಾರ್ಮಿಕರನ್ನು ಯಾವುದೇ ಮುನ್ಸೂಚನೆ ನೀಡದೆ ಕೆಲಸದಿಂದ ದೂರಗೊಳಿಸಲಾಗಿದೆ ಎಂದು ಆರೋಪಿಸಿ CITU ಆಕ್ರೋಶ ವ್ಯಕ್ತಪಡಿಸಿದೆ. ಕಾರ್ಮಿಕರನ್ನು ಪುನಃ ಕೆಲಸಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲು ತೆರಳಿದ್ದ ವೇಳೆ HPCL ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಆರಂಭದಲ್ಲಿ ಮನವಿ ಸ್ವೀಕರಿಸಲು ನಿರಾಕರಿಸಿದರು ಎಂದು CITU ಮುಖಂಡರು ಆರೋಪಿಸಿದ್ದಾರೆ.

ಸುಮಾರು 25 ವರ್ಷಗಳಿಂದ ಸ್ವೀಪರ್ ಮತ್ತು ಗಾರ್ಡನಿಂಗ್ ಕೆಲಸಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ ಉತ್ತರ ಕರ್ನಾಟಕ ಮೂಲದ ನಾಲ್ವರು ಮಹಿಳಾ ಕಾರ್ಮಿಕರಿಗೆ ಸೆಪ್ಟೆಂಬರ್ 1, 2026ರಿಂದ ಕೆಲಸಕ್ಕೆ ಹಾಜರಾಗಲು ಅವಕಾಶ ನೀಡಲಾಗುತ್ತಿಲ್ಲ ಎಂದು CITU ತಿಳಿಸಿದೆ.
ಯಾವುದೇ ಕಾರಣವನ್ನು ತಿಳಿಸದೆ ಹಾಗೂ ಲಿಖಿತ ಮುನ್ಸೂಚನೆಯನ್ನೂ ನೀಡದೆ ಕೆಲಸಕ್ಕೆ ಬರದಂತೆ ತಡೆಹಿಡಿಯಲಾಗಿದೆ ಎಂಬುದು CITU ಆರೋಪವಾಗಿದೆ. ಕೆಲಸ ಮುಂದುವರಿಸಲು ಅವಕಾಶ ನೀಡುವಂತೆ ಕಾರ್ಮಿಕರು ಪ್ರತಿದಿನ ಕಂಪನಿಯ ಬಳಿ ಮನವಿ ಮಾಡುತ್ತಿದ್ದರೂ ಗುತ್ತಿಗೆದಾರರು ಮತ್ತು HPCL ಆಡಳಿತದಿಂದ ಸ್ಪಂದನೆ ಸಿಕ್ಕಿಲ್ಲ ಎಂದು ಸಂಘಟನೆ ಹೇಳಿದೆ.
ಈ ಕ್ರಮದಿಂದ ನಾಲ್ವರು ಮಹಿಳಾ ಕಾರ್ಮಿಕರನ್ನು ಅವಲಂಬಿಸಿದ್ದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಎಂದು CITU ಆರೋಪಿಸಿದೆ. ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದ ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ದೂರಗೊಳಿಸಿರುವುದು ಕಾರ್ಮಿಕರ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಸಂಘಟನೆ ಆಕ್ಷೇಪ ವ್ಯಕ್ತಪಡಿಸಿದೆ.
ಕೆಲಸದಿಂದ ದೂರಗೊಳಿಸಲಾಗಿರುವ ನಾಲ್ವರು ಗುತ್ತಿಗೆ ಕಾರ್ಮಿಕರನ್ನು ಹಿಂದಿನ ವೇತನ ಮತ್ತು ಸೇವಾ ಮುಂದುವರಿಕೆಯೊಂದಿಗೆ ಮರುನೇಮಕ ಮಾಡಬೇಕು ಹಾಗೂ HPCLನಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಮತ್ತು ಖಾಯಮೇತರ ಕಾರ್ಮಿಕರಿಗೆ ಕಾನೂನುಬದ್ಧ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸಲು ತೆರಳಿದಾಗ HPCL ಅಧಿಕಾರಿಗಳು ತಕ್ಷಣ ಮನವಿ ಸ್ವೀಕರಿಸದಿರುವುದಕ್ಕೆ CITU ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸುಮಾರು ಮೂರು ಗಂಟೆಗಳ ಬಳಿಕ ಆಗಮಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಮನವಿ ಸಲ್ಲಿಸಲಾಯಿತು ಎಂದು ಸಂಘಟನೆ ತಿಳಿಸಿದೆ.
ಮನವಿ ಸ್ವೀಕರಿಸಿದ ನಂತರ ಏಳು ದಿನಗಳೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ HPCL ಎದುರು ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು CITU ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ CPIM ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, CITU ಜಿಲ್ಲಾ ನಾಯಕರಾದ ಸುನಿಲ್ ಕುಮಾರ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಬಶೀರ್ ಕಾನ, DYFI ಮುಖಂಡರಾದ ರಿಜ್ವಾನ್ ಹರೇಕಳ, ಶ್ರೀನಾಥ್ ಕಾಟಿಪಳ್ಳ ಹಾಗೂ ಅಜ್ಮಲ್ ಸುರತ್ಕಲ್ ಉಪಸ್ಥಿತರಿದ್ದರು.