ಕಾನ್ಶಿರಾಮ್ ಪರಿನಿರ್ವಾಣ ದಿನ: ಬಿಎಸ್ಪಿ ಅಸ್ತಿತ್ವ ಏಕೆ ಮುಖ್ಯ? ದಲಿತರು ಇನ್ನೆಷ್ಟು ಕಾಲ ಬೇಡುವ ಸಮಾಜವಾಗಿ ಉಳಿಯಬೇಕು?
ಭಾರತದ ರಾಜಕೀಯ ಇತಿಹಾಸದಲ್ಲಿ ಕೆಲವು ನಾಯಕರು ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳಿಂದ ಗುರುತಿಸಿಕೊಂಡರೆ, ಇನ್ನು ಕೆಲವರು ರಾಜಕೀಯವನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸಿದ ಕಾರಣಕ್ಕೆ ನೆನಪಾಗುತ್ತಾರೆ. ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಕಾನ್ಶಿರಾಮ್ ಅಂತಹ ನಾಯಕರಲ್ಲಿ ಒಬ್ಬರು. ಅಕ್ಟೋಬರ್ 9ರಂದು ಅವರ 20ನೇ ಪರಿನಿರ್ವಾಣ ದಿನದ ಸಂದರ್ಭದಲ್ಲಿ, ಅವರು ಮುಂದಿಟ್ಟ ರಾಜಕೀಯ ಚಿಂತನೆಗಳು ಇಂದಿನ ದಲಿತ, ಹಿಂದುಳಿದ ವರ್ಗಗಳ ಬದುಕಿನಲ್ಲಿ ಎಷ್ಟರ ಮಟ್ಟಿಗೆ ಪ್ರಸ್ತುತವಾಗಿವೆ ಎಂಬ ಪ್ರಶ್ನೆಯನ್ನು ಕೇಳಬೇಕಾಗಿದೆ. ಕಾನ್ಶಿರಾಮ್ ಅವರ ಸ್ಮರಣೆಯ ದಿನ ನಮಗೆ ನೆನಪಿಸುವುದು ಇದೇ ಸಮುದಾಯದ ಗೌರವವು ಕೇವಲ ರಾಜಕೀಯ ಘೋಷಣೆಯಲ್ಲಿ ಇರುವುದಿಲ್ಲ; ಅದು ಹಕ್ಕುಗಳ ಅರಿವು, ಸಂಘಟಿತ ಪ್ರಯತ್ನ ಮತ್ತು ಜನರ ಬದುಕಿನಲ್ಲಿ ಕಾಣುವ ನ್ಯಾಯದಲ್ಲಿ ನೆಲೆಸಿದೆ.
ಕಾನ್ಶಿರಾಮ್ ಅವರ ಹೋರಾಟ ಕೇವಲ ಒಂದು ರಾಜಕೀಯ ಪಕ್ಷವನ್ನು ಕಟ್ಟುವುದಕ್ಕೆ ಸೀಮಿತವಾಗಿರಲಿಲ್ಲ. ಸಮಾಜದಲ್ಲಿ ಸಂಖ್ಯಾಬಲ ಹೊಂದಿದ್ದರೂ ರಾಜಕೀಯ ಅಧಿಕಾರ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸಮರ್ಪಕ ಸ್ಥಾನ ಪಡೆಯದ ಸಮುದಾಯಗಳನ್ನು ಸಂಘಟಿಸುವುದು ಅವರ ರಾಜಕೀಯ ಚಿಂತನೆಯ ಪ್ರಮುಖ ಭಾಗವಾಗಿತ್ತು. ಮತದಾನದ ಹಕ್ಕು ಕೇವಲ ಸರ್ಕಾರವನ್ನು ಆಯ್ಕೆ ಮಾಡಲು ಮಾತ್ರವಲ್ಲ; ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಶಕ್ತಿಯೂ ಆಗಬೇಕು ಎಂಬ ಸಂದೇಶವನ್ನು ಅವರು ಮುಂದಿಟ್ಟಿದ್ದರು.
ಭಾರತದಲ್ಲಿ ಹಲವು ರಾಷ್ಟ್ರೀಯ ಪಕ್ಷಗಳು ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಬೆಂಬಲವನ್ನು ಪಡೆದುಕೊಂಡಿವೆ. ಈ ಪಕ್ಷಗಳಲ್ಲಿ ಹಲವು ಸಮುದಾಯಗಳ ನಾಯಕರು ಪ್ರಮುಖ ಹುದ್ದೆಗಳನ್ನೂ ಅಲಂಕರಿಸಿದ್ದಾರೆ. ಆದರೆ ಒಬ್ಬ ನಾಯಕನಿಗೆ ಪಕ್ಷದಲ್ಲಿ ಸ್ಥಾನ ಸಿಕ್ಕಿರುವುದಕ್ಕೂ, ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗದಿಂದ ಬಂದ ಒಬ್ಬ ನಾಯಕ ರಚಿಸಲ್ಪಟ್ಟ ಪಕ್ಷದಿಂದ ಸಿಗುವ ನ್ಯಾಯ ಅಥವ ಆ ಪಕ್ಷ ಬೀರುವ ಪ್ರಭಾವಕ್ಕೂ ವ್ಯತ್ಯಾಸವಿದೆ.
ಇಲ್ಲಿಯೇ ಬಿಎಸ್ಪಿಯ ರಾಜಕೀಯ ಪ್ರಸ್ತುತತೆಯ ಕುರಿತು ಚರ್ಚೆ ಆರಂಭವಾಗುತ್ತದೆ. ಕಾನ್ಶಿರಾಮ್ ಕಟ್ಟಿದ ರಾಜಕೀಯ ವೇದಿಕೆಯ ಉದ್ದೇಶ ಬಹುಜನ ಸಮುದಾಯಗಳು ಇತರ ಪಕ್ಷಗಳ ಬೆಂಬಲಿಗರಾಗಿ ಮಾತ್ರ ಉಳಿಯದೆ, ಸ್ವತಂತ್ರ ರಾಜಕೀಯ ಶಕ್ತಿಯಾಗಿಯೂ ಬೆಳೆಯಬೇಕು ಎಂಬುದಾಗಿತ್ತು.
ಇಂದು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಅಥವಾ ಕಾಂಗ್ರೆಸ್ನಲ್ಲಿ ದಲಿತ, ಹಿಂದುಳಿದ ನಾಯಕರಿಗೆ ಸೂಕ್ತ ಪ್ರಾತಿನಿಧ್ಯ ಅಥವಾ ಗೌರವ ಸಿಗುತ್ತಿದ್ದರೆ, ಅದಕ್ಕೆ ಬಹುಜನ ಸಮಾಜ ಪಾರ್ಟಿ (BSP) ಯ ರಾಜಕೀಯ ಅಸ್ತಿತ್ವವೇ ಮುಖ್ಯ ಕಾರಣ. ಬಹುಜನರ ಮತಗಳು ಸಂಪೂರ್ಣವಾಗಿ ಬಿಎಸ್ಪಿ ಕಡೆಗೆ ಧ್ರುವೀಕರಣಗೊಂಡರೆ ತಮ್ಮ ಅಧಿಕಾರಕ್ಕೆ ಕಂಟಕ ಎನ್ನುವ ಭೀತಿ ಪ್ರಮುಖ ರಾಷ್ಟ್ರೀಯ ಪಕ್ಷಗಳಲ್ಲಿದೆ. ಬಿಎಸ್ಪಿ ತನ್ನ ಅಸ್ತಿತ್ವ ಕಳೆದುಕೊಂಡರೆ, ಇತರ ಪಕ್ಷಗಳಲ್ಲಿರುವ ದಲಿತ ಮತ್ತು ಹಿಂದುಳಿದ ನಾಯಕರ ರಾಜಕೀಯ ಮೌಲ್ಯವೂ ಕುಸಿಯುವ ಅಪಾಯವಿದೆ. ಸ್ಪಷ್ಟವಾಗಿ ಹೇಳುವುದಾದರೆ ಭಾರತದ ಇತಿಹಾಸದಲ್ಲಿ ರಾಷ್ಟ್ರೀಯ ಪಕ್ಷಗಳಲ್ಲಿ ಎರಡು ರಾಷ್ಟ್ರಿಯ ಪಕ್ಷಗಳು ಯಾರ ಅಧೀನದಲ್ಲಿದೆ ಎಂದು ಹೇಳಬೇಕಾಗಿಲ್ಲ ,,ಆದರೆ ಬಿಎಸ್ಪಿ ಮಾತ್ರ ತಳಮಟ್ಟದ ಸಮೂದಾಯದ ಹೋರಾಟದಿಂದ ರಚಿಸಲ್ಪಟ್ಟ ಏಕೈಕ ಪಕ್ಷ
ಒಬಿಸಿ (OBC) ಸಮುದಾಯಕ್ಕೆ ಮೀಸಲಾತಿ ದೊರೆಯಲು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಮರಣೋತ್ತರ ‘ಭಾರತ ರತ್ನ’ ಗೌರವ ಸಿಗಲು ಕಾಂಶೀರಾಮ್ ಅವರ ರಾಜಕೀಯ ಒತ್ತಡವೇ ಕಾರಣ. ಅಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕಿದ್ದ ವಿ.ಪಿ. ಸಿಂಗ್ ನೇತೃತ್ವದ ಸರ್ಕಾರದ ಮುಂದೆ ಕಾಂಶೀರಾಮ್ ಅವರು ತಮ್ಮ ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದರು. ಬಿಎಸ್ಪಿಯ ಈ ಗಟ್ಟಿಯಾದ ನಿಲುವಿಲ್ಲದಿದ್ದರೆ ಮಂಡಲ್ ಆಯೋಗದ ವರದಿ ಮತ್ತು ಅಂಬೇಡ್ಕರ್ ಅವರಿಗೆ ಸಲ್ಲಬೇಕಾದ ಗೌರವಗಳು ಇತಿಹಾಸದ ಪುಟಗಳಲ್ಲಿ ಮೌನವಾಗಿಯೇ ಉಳಿಯುತ್ತಿದ್ದವು. ಇದು ಈಗಿನ ದಲಿತ ಸಮುದಾಯದ ರಾಜಕೀಯ ತಂತ್ರವಾಗ ಬೇಕು.
ಇಂದು ಕರ್ನಾಟಕದಲ್ಲಿ ಎಸ್ಸಿಎಸ್ಪಿ/ಟಿಎಸ್ಪಿ (SCSP/TSP) ಅನುದಾನದ ದುರ್ಬಳಕೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಾಗಲಿ, ಅಥವಾ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಹಕ್ಕುಗಳಾದ ಡಿಸಿ ಮನ್ನ ಭೂಮಿ ಮಂಜೂರಾತಿ ಹಾಗೂ ನಂತಹ ದಲಿತ ಸಮುದಾಯದ ದೀರ್ಘಕಾಲದ ಬೇಡಿಕೆಗಳಾಗಲಿ—ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ಸೂಕ್ತ ರಾಜಕೀಯ ರಾಜತಾಂತ್ರಿಕತೆಯ ಕೊರತೆ ಎದ್ದು ಕಾಣುತ್ತಿದೆ. ಸ್ಥಳೀಯ ನಾಯಕರು ಮತ್ತು ಆಡಳಿತಗಾರರು ನೀಡುವ ಬಾಯಿಮಾತಿನ ಭರವಸೆಗಳೇ ದಲಿತರ ಬೇಡಿಕೆಗಳಿಗೆ ಉತ್ತರವಾಗುತ್ತಿವೆ. ಅಧಿಕಾರದ ಚುಕ್ಕಾಣಿ ಹಿಡಿಯುವ ಅಥವಾ ಅಧಿಕಾರವನ್ನು ಪ್ರಭಾವಿಸುವ ರಾಜಕೀಯ ಶಕ್ತಿಯಾಗಿ ಸಮುದಾಯ ಬೆಳೆಯದ ಹೊರತು ಈ ಬೇಡಿಕೆಗಳು ಈಡೇರುವುದು ಕಷ್ಟ.
ದಲಿತ ಮತ್ತು ಹಿಂದುಳಿದ ಸಮುದಾಯಗಳು ಇಂದಿಗೂ ಕೇವಲ “ಬೇಡುವ ಸಮಾಜವಾಗಿ” ಉಳಿದಿರುವುದು ಕಾಂಶೀರಾಮ್ ಅವರ ‘ಹಕ್ಕುಗಳನ್ನು ಪಡೆದುಕೊಳ್ಳುವ’ ತತ್ವದ ಅರಿವಿನ ಕೊರತೆಯನ್ನು ತೋರಿಸುತ್ತದೆ. ರಾಜಕೀಯ ಅಧಿಕಾರವೇ ಎಲ್ಲಾ ಸಾಮಾಜಿಕ ಬದಲಾವಣೆಗಳ ಮಾಸ್ಟರ್ ಕೀ ಎಂಬುದನ್ನು ಕಾಂಶೀರಾಮ್ ಸಾರಿದ್ದರು.
ಕಾಂಶೀರಾಮ್ ಅವರ ತತ್ವ / ನಿಲುವುಗಳೇನು ಆದರೆ ಪ್ರಸ್ತುತ ಇರುವ ಪರಿಸ್ಥಿತಿ ಏನು .. ಸಾಮಾಜಿಕ ಪ್ರಾತಿನಿಧ್ಯತೆ ಬಗ್ಗೆ ಹೇಳುವುದಾದರೆ ಬಹುಜನರೇ ಆಡಳಿತಗಾರರಾಗಬೇಕು …ಈ ಗ ಆಗ ಬೇಕಿತ್ತು ಆದರೆ ಈಗ ಇತರ ಪಕ್ಷಗಳಲ್ಲಿ ಬೆಂಬಲಿಗರಾಗಿ ಉಳಿದಿರು ದೊಡ್ಡ ಹಿನ್ನಡೆ, ಒಬಿಸಿ ಮೀಸಲಾತಿಗಾಗಿಹೋರಾಟ ಮಾಡಿ ಮಂಡಲ್ ವರದಿ ಜಾರಿಗೆ ರಾಜಕೀಯ ಒತ್ತಡ ಹೇರಿದ್ದರು ಅದು ಜಾರಿಯು ಮಾಡಿಯಾಯಿತು ಆದರೆ ಈಗ ಮೀಸಲಾತಿಯ ಪೂರ್ಣ ಲಾಭ ತಲುಪದಿರುವುದು ನಾವು ಗಮನಿಸುತ್ತಿದ್ದೇವೆ, ಹೋರಾಟ ನಡೆಸುವುದು ಇದು ಪ್ರಸ್ತುತ ಪರಿಸ್ಥಿತಿ. ಇನ್ನೂ ಡಿಸಿ ಮನ್ನ ಭೂಮಿಯಂಥಹ ಹೋರಾಟಗಳಲ್ಲೂ ಭರವಸೆಗಳೇ ಪುನರಾವರ್ತನೆಯಾಗುತ್ತಿದೆ
ಸ್ವತಂತ್ರ ರಾಜಕೀಯ ಪರ್ಯಾಯವೊಂದು ಅಸ್ತಿತ್ವದಲ್ಲಿರುವಾಗ, ಬಹುಜನ ಸಮುದಾಯಗಳ ಬೇಡಿಕೆಗಳನ್ನು ಕಡೆಗಣಿಸುವುದರ ರಾಜಕೀಯ ಪರಿಣಾಮಗಳ ಬಗ್ಗೆಯೂ ಇತರ ಪಕ್ಷಗಳು ಯೋಚಿಸುತ್ತವೆ ಅನ್ನೊದು ರಾಜಕೀಯ ವಿಶ್ಲೇಷಣೆ.ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳು ತಮ್ಮ ಆಂತರಿಕ ಭಿನ್ನಾಭಿಪ್ರಾಯಗಳನ್ನು ಮರೆತು, ತಮ್ಮದೇ ಆದ ರಾಜಕೀಯ ಅಸ್ತಿತ್ವವನ್ನು ಗಟ್ಟಿಮಾಡಿಕೊಂಡಾಗ ಮಾತ್ರ ಪ್ರಜಾಪ್ರಭುತ್ವದಲ್ಲಿ ನೈಜ ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯ ಸಿಗಲು ಸಾಧ್ಯ. ಕಾಂಶೀರಾಮ್ ಅವರ ರಾಜಕೀಯ ತಂತ್ರಗಾರಿಕೆ ಹಾಗೂ ವಿಚಾರಧಾರೆಗಳನ್ನು ಆಳವಾಗಿ ಗ್ರಹಿಸಿ, ತಮ್ಮ ಹಕ್ಕುಗಳಿಗಾಗಿ ಸ್ವತಂತ್ರ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳುವುದೇ ಇಂದು ಅವರಿಗೆ ಸಲ್ಲಿಸುವ ನಿಜವಾದ ಗೌರವ