ಅಕ್ಟೋಬರ್ 10 ರಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಸಿಜೆಪಿ (CJP) ಘೋಷಿಸಿತ್ತು. ಆದರೆ ಪ್ರತಿಭಟನೆಯ ದಿನ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಸೇರಿದಂತೆ ಮೂವರು ಹೋರಾಟಗಾರರನ್ನು ವಿಮಾನದಲ್ಲೇ ಬಂಧಿಸಿದ ಘಟನೆ ದೇಶದ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಯಿತು.
ಇದೇ ಸಂದರ್ಭದಲ್ಲಿ, ನೇಹಾ ಬೋರಾ ಅವರು ಪ್ರತಿಭಟನಾ ಸ್ಥಳದಲ್ಲೇ ಹಾಜರಿದ್ದು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸರು ಅವರನ್ನು ಎಳೆದಾಡಿದ ಘಟನೆಗಳೂ ನಡೆದಿದ್ದವು. ಆದರೆ, ಸಿಜೆಪಿ ಪ್ರತಿಭಟನೆಯ ಸಂದರ್ಭದಲ್ಲಿ ಅಭಿಜೀತ್ ದೀಪ್ಕೆ ಸೇರಿದಂತೆ ಮೂವರನ್ನು ವಿಮಾನದಲ್ಲೇ ಬಂಧಿಸಿದ ಪೊಲೀಸರು, ನೇಹಾ ಬೋರಾ ಅವರನ್ನು ಏಕೆ ಬಂಧಿಸಲಿಲ್ಲ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ.
ಸಿಜೆಪಿ ಪ್ರತಿಭಟನೆಗೆ ಅವಕಾಶ ನೀಡದಿದ್ದರೂ, ನೇಹಾ ಬೋರಾ ಅವರು ಪ್ರತಿಭಟನಾ ಸ್ಥಳದಲ್ಲಿ ಹಾಜರಿದ್ದು ಹೋರಾಟ ಮುಂದುವರಿಸಿದ್ದರು.ಈ ಹಿಂದೆಯೂ ಅವರ ಪ್ರತಿಭಟನೆ ಕಟುವಾಗಿಯೇ ಇತ್ತು. ಆದರೆ ಅಕ್ಟೋಬರ್ 10 ರಂದು ಸಿಜೆಪಿ ನಾಯಕರ ವಿರುದ್ಧ ನಡೆದ ಕ್ರಮ ಮತ್ತು ನೇಹಾ ಬೋರಾ ಅವರ ವಿಚಾರದಲ್ಲಿ ಕಂಡುಬಂದ ವ್ಯತ್ಯಾಸ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಪ್ರಶ್ನೆಗೆ ಅಕ್ಟೋಬರ್ 12ರಂದು ನಡೆದ ಮತ್ತೊಂದು ಬೆಳವಣಿಗೆ ಹೊಸ ಆಯಾಮ ನೀಡಿದೆ. ನೇಹಾ ಬೋರಾ ಅವರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ, ಸಿಜೆಪಿಯ ಹೋರಾಟವನ್ನು ರಾಜಕೀಯವಾಗಿ ಪ್ರತ್ಯೇಕಿಸುವ ಪ್ರಯತ್ನ ನಡೆದಿತ್ತೇ ಎಂಬ ಚರ್ಚೆ ಆರಂಭವಾಗಿದೆ.
ದೇಶದಲ್ಲಿ ಬಿಜೆಪಿಗೆ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್, ವಿರೋಧಿ ಹೋರಾಟಗಳ ರಾಜಕೀಯದಲ್ಲಿ ತನ್ನದೇ ಆದ ಪ್ರಭಾವವನ್ನು ಹೊಂದಿದೆ. ಇಂತಹ ಸಂದರ್ಭದಲ್ಲಿ ಸಿಜೆಪಿಯಂತಹ ಸಂಘಟನೆಗಳು ಸ್ವತಂತ್ರವಾಗಿ ಜನರ ಗಮನ ಸೆಳೆದು, ಆಡಳಿತಾರೂಢ ಬಿಜೆಪಿಯ ವಿರುದ್ಧ ಬಲವಾದ ಹೋರಾಟ ರೂಪಿಸಿದರೆ, ಅದು ಕಾಂಗ್ರೆಸ್ನ ರಾಜಕೀಯ ಪ್ರಭಾವದ ಮೇಲೂ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆ ಎದ್ದಿದೆ.
ಹಾಗಾದರೆ, ಸಿಜೆಪಿಯ ಹೋರಾಟವನ್ನು ಹತ್ತಿಕ್ಕುವಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಯಾವುದಾದರೂ ರಾಜಕೀಯ ಸಮನ್ವಯವಿತ್ತೇ? ಅಭಿಜೀತ್ ದೀಪ್ಕೆ ಅವರನ್ನು ಬಂಧಿಸಿದ ಕ್ರಮದ ಹಿಂದೆ ರಾಜಕೀಯ ಉದ್ದೇಶವಿತ್ತೇ? ಅಥವಾ ನೇಹಾ ಬೋರಾ ಅವರ ವಿಚಾರದಲ್ಲಿ ಬೇರೆ ಕಾರಣಗಳಿದ್ದವೇ?
ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗಬೇಕಿದೆ. ಸದ್ಯದ ಬೆಳವಣಿಗೆಗಳು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಸಿಜೆಪಿಯನ್ನು ರಾಜಕೀಯವಾಗಿ ಗುರಿಯಾಗಿಸಿಕೊಂಡಿವೆಯೇ ಎಂಬ ಅನುಮಾನಗಳಿಗೆ ಕಾರಣವಾಗಿವೆ. ಮಹಾಭಾರತದ ಕುರುಕ್ಷೇತ್ರದಲ್ಲಿ ಕರ್ಣನ ಶಕ್ತಿಯನ್ನು ಕುಂದಿಸಿದಂತೆ, ಸಿಜೆಪಿಯ ಹೋರಾಟದ ಶಕ್ತಿಯನ್ನೇ ಕುಗ್ಗಿಸುವ ಪ್ರಯತ್ನ ಕೌರವ ಪಾಂಡವರಿಂದ ನಡೆದಿದೆಯೇ ಎಂಬ ರಾಜಕೀಯ ಪ್ರಶ್ನೆ ಈಗ ಚರ್ಚೆಯ ಕೇಂದ್ರದಲ್ಲಿದೆ. ಸಿಜೆಪಿ ಸ್ವತಂತ್ರ ಹೋರಾಟದ ಮೂಲಕ ಮುನ್ನಲೆಗೆ ಬಂದಿರುವುದರಿಂದ ಈ ಬಲಿಷ್ಟ ಪಕ್ಷಗಳ ನಡುವೆ ಮುಂದಿನ ರಾಜಕೀಯ ನಡೆ ಕುತೂಹಲ ಮೂಡಿಸಿದೆ