ಕ್ಯಾರಕಾಸ್: ವೆನೆಜುವೆಲಾದ ರಾಜಕೀಯ ವಲಯದಲ್ಲಿ ಭಾರೀ ಬೆಳವಣಿಗೆಯೊಂದು ಸಂಭವಿಸಿದ್ದು, ದೇಶದ ಉಪಾಧ್ಯಕ್ಷೆಯಾಗಿದ್ದ ಡೆಲ್ಸಿ ರೊಡ್ರಿಗಸ್ ಅವರು ಇದೀಗ ಮಧ್ಯಂತರ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಅಮೆರಿಕದ ಸೈನಿಕ ಕಾರ್ಯಾಚರಣೆಯ ಬಳಿಕ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೋ ಹಾಗೂ ಅವರ ಪತ್ನಿ ಸಿಲಿಯಾ ಫ್ಲೋರಸ್ ಬಂಧಿತರಾಗಿದ್ದಾರೆ ಎಂಬ ವರದಿಗಳ ನಡುವೆ ಈ ಬೆಳವಣಿಗೆ ನಡೆದಿದೆ. ಈ ಹಿನ್ನೆಲೆಯಲ್ಲಿ ದೇಶದ ಆಡಳಿತದಲ್ಲಿ ಉಂಟಾದ ಶೂನ್ಯತೆಯನ್ನು ಭರ್ತಿ ಮಾಡುವ ಉದ್ದೇಶದಿಂದ, ವೆನೆಝುವೆಲಾದ ಸುಪ್ರೀಂ ಕೋರ್ಟ್ ಡೆಲ್ಸಿ ರಾಡ್ರಿಗೆಸ್ ಅವರನ್ನು ಮಧ್ಯಂತರ ಅಧ್ಯಕ್ಷೆಯಾಗಿ ನೇಮಕ ಮಾಡುವಂತೆ ಆದೇಶಿಸಿದೆ ಎಂದು ತಿಳಿದುಬಂದಿದೆ.
ಡೆಲ್ಸಿ ರಾಡ್ರಿಗೆಸ್ ಯಾರು?
ಡೆಲ್ಸಿ ರೊಡ್ರಿಗಸ್ ಅವರು ವೆನೆಜುವೆಲಾದ ರಾಜಕೀಯದಲ್ಲಿ ಅನುಭವಿ ಮತ್ತು ಪ್ರಭಾವಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರು ರಾಜಧಾನಿ ಕ್ಯಾರಕಾಸ್ ಮೂಲದವರಾಗಿದ್ದು, ಕಾನೂನು ಪದವೀಧರೆ. ಹ್ಯೂಗೊ ಚಾವೇಜ್, ಕಾಲದಿಂದಲೇ ಚಾವಿಸ್ಟಾ ಚಳವಳಿಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಅವರು, ಸರ್ಕಾರದ ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಅವರು ಈ ಹಿಂದೆ, ವಿದೇಶಾಂಗ ಸಚಿವೆ, ಆರ್ಥಿಕ, ಹಣಕಾಸು ಹಾಗೂ ತೈಲ ಕ್ಷೇತ್ರಗಳ ಮೇಲ್ವಿಚಾರಣೆ ವಹಿಸಿಕೊಂಡ ಸಚಿವೆಯಾಗಿಯೂ, ನಂತರ ವೆನೆಝುವೆಲಾದ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು.
ಮಡುರೋ ಅವರ ಆಪ್ತ ನಾಯಕಿ
ಡೆಲ್ಸಿ ರೊಡ್ರಿಗಸ್ ಅವರನ್ನು ಅಧ್ಯಕ್ಷ ನಿಕೋಲಸ್ ಮಡುರೋ ಅವರ ಅತ್ಯಂತ ವಿಶ್ವಾಸಾರ್ಹ ಸಹಚರರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಚಾವಿಸ್ಟಾ ಚಳವಳಿಗೆ ಪ್ರಬಲ ಬೆಂಬಲ ನೀಡುವ ನಾಯಕಿಯಾಗಿರುವ ಅವರು, ಮಡುರೊ ಸರ್ಕಾರದ ಪ್ರಮುಖ ತಂತ್ರಗಾರಳಾಗಿದ್ದರು.
ಅಂತರಾಷ್ಟ್ರೀಯ ಪ್ರತಿಕ್ರಿಯೆ
ಭಾರತದ ಸಮಯಕ್ಕೆ 2026ರ ಜನವರಿ 4ರಂದು ಡೆಲ್ಸಿ ರಾಡ್ರಿಗೆಸ್ ಅವರು ಮಧ್ಯಂತರ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದು, ಈ ಬೆಳವಣಿಗೆ ಜಾಗತಿಕ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಅಮೆರಿಕ, ರಷ್ಯಾ, ಬ್ರೆಜಿಲ್ ಸೇರಿದಂತೆ ಹಲವು ರಾಷ್ಟ್ರಗಳು ವೆನೆಝುವೆಲಾದ ಇತ್ತೀಚಿನ ರಾಜಕೀಯ ಸ್ಥಿತಿಗತಿಗಳ ಕುರಿತು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿವೆ. ವೆನೆಜುವೆಲಾದಲ್ಲಿ ಮುಂದಿನ ದಿನಗಳಲ್ಲಿ ಚುನಾವಣೆ ನಡೆಯುತ್ತದೆಯೇ? ಅಥವಾ ತಾತ್ಕಾಲಿಕ ಆಡಳಿತವೇ ಮುಂದುವರಿಯುತ್ತದೆಯೇ ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಇಲ್ಲ. ಆದರೆ, ಡೆಲ್ಸಿ ರೊಡ್ರಿಗಸ್ ಅವರ ನೇತೃತ್ವದಲ್ಲಿ ದೇಶದ ರಾಜಕೀಯ ಭವಿಷ್ಯ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಅಂತರಾಷ್ಟ್ರೀಯ ಸಮುದಾಯದ ಗಮನ ಸೆಳೆದಿದೆ.