ನವದೆಹಲಿ: ಸಿಜೆಪಿ (Cockroach Janta Party) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವ ಬೆಳವಣಿಗೆಯ ಬೆನ್ನಲ್ಲೇ, ಅವರ ತಾಯಿ ಅನಿತಿ ದೀಪ್ಕೆ ತಮ್ಮ ಮಗನ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಮಗನನ್ನು ಬೀಳ್ಕೊಡುವ ಸಂದರ್ಭದಲ್ಲೇ ಆತನನ್ನು ಬಂಧಿಸಬಹುದು ಎಂಬ ಭಯವನ್ನು ವ್ಯಕ್ತಪಡಿಸಿದ್ದೆ ಎಂದು ಅವರು ಭಾವುಕರಾಗಿ ಹೇಳಿದ್ದಾರೆ.
“ಅತ್ಯಾಚಾರ ಎಸಗುವವರನ್ನು ತಕ್ಷಣ ಬಂಧಿಸಲು ಸಾಧ್ಯವಾಗುವುದಿಲ್ಲವೇ? ಆದರೆ ದೇಶಕ್ಕಾಗಿ ಹೋರಾಡುವ ಮಕ್ಕಳನ್ನು ಹೇಗೆ ಬಂಧಿಸುತ್ತೀರಿ? ಸರ್ಕಾರ ಮಾಡಿರುವುದು ಸರಿಯಲ್ಲ. ಅಭಿಜೀತ್ ಎಲ್ಲಿಗೆ ಹೋದರೂ ಆತನನ್ನು ಬಂಧಿಸಬಹುದು ಎಂಬ ಭಯ ನನಗಿತ್ತು. ಈ ಆತಂಕವನ್ನು ನಾನು ಆತನ ಬಳಿ ಹೇಳಿಕೊಂಡಿದ್ದೆ. ಆದರೆ, ‘ಅಮ್ಮ, ಹಾಗೇನೂ ಆಗುವುದಿಲ್ಲ’ ಎಂದು ಆತ ನನಗೆ ಸಮಾಧಾನ ಹೇಳಿದ್ದ. ಇಂದು ನಾನು ಭಯಪಟ್ಟಿದ್ದೇ ನಿಜವಾಗಿದೆ” ಎಂದಿದ್ದಾರೆ
ಅಭಿಜೀತ್ ದಿಪ್ಕೆ, ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರನ್ನು ದೆಹಲಿ ಇಳಿಯುವುದಕ್ಕೂ ಮುಂಚೆಯೆ ವಿಮಾನದೊಳಗೆ ನುಗ್ಗಿ ಬಂಧಿಸಲಾಗಿತ್ತು . ಮೂವರನ್ನು ವಶಕ್ಕೆ ಪಡೆದ ನಂತರ 12 ಗಂಟೆಗೂ ಹೆಚ್ಚು ಕಾಲ ಅವರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ ಹಾಗೂ ಅವರನ್ನು ಎಲ್ಲಿಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ ಎಂದು ಸಿಜೆಪಿ ಸಂಘಟನೆ ಆರೋಪಿಸಿದೆ.
ಈ ಬೆಳವಣಿಗೆ ಕುರಿತು ಸಂಘಟನೆ ಆತಂಕ ವ್ಯಕ್ತಪಡಿಸಿದ್ದು, ಪ್ರತಿಭಟನೆಯನ್ನು ನಿಯಂತ್ರಿಸಲು ಉತ್ತರ ಪ್ರದೇಶದಿಂದಲೂ ಪೊಲೀಸರನ್ನು ಕರೆಸಲಾಗಿದೆ ಎಂದು ಅವರು ಹೇಳಿದ್ದಾರೆ. “ಕೈಯಲ್ಲಿ ಲಾಠಿಗಳನ್ನು ಹಿಡಿದುಕೊಂಡು ವಿಡಿಯೊ ಮತ್ತು ರೀಲ್ಸ್ ಮಾಡುತ್ತಿದ್ದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕಿತ್ತು. ಅಂಥವರನ್ನು ಬಿಟ್ಟು ದೇಶಕ್ಕಾಗಿ ಹೋರಾಡುವ ಮಕ್ಕಳನ್ನು ಬಂಧಿಸುವುದು ಯಾವ ನ್ಯಾಯ? ಗಲಭೆ ಸೃಷ್ಟಿಸುವವರನ್ನು ಮೊದಲು ಬಂಧಿಸಬೇಕು. ದೇಶದ ಹಿತಕ್ಕಾಗಿ ಧ್ವನಿ ಎತ್ತುವವರನ್ನು ಬಂಧಿಸುವುದು ಸರಿಯಲ್ಲ” ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಬಗ್ಗೆಯೂ ಅಭಿಜೀತ್ ದಿಪ್ಕೆ ಅವರ ತಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಕಾಲವನ್ನು ನೆನಪಿಸಿಕೊಂಡ ಅವರು, ಅಂದಿನ ರಾಜಕೀಯ ವಾತಾವರಣಕ್ಕೂ ಇಂದಿನ ಪರಿಸ್ಥಿತಿಗೂ ವ್ಯತ್ಯಾಸವಿದೆ ಎಂಬ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
“ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿದೆಯೇ ಎಂಬ ಅನುಮಾನ ಮೂಡುತ್ತಿದೆ. ಪ್ರಜಾಪ್ರಭುತ್ವವನ್ನು ಉಳಿಸಲು ಧ್ವನಿ ಎತ್ತುವವರನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಒಂದು ಪಕ್ಷ ಮಾತ್ರ ಉಳಿಯಬೇಕು, ಉಳಿದ ಪಕ್ಷಗಳನ್ನು ಮುಗಿಸಬೇಕು ಎಂಬ ರೀತಿಯಲ್ಲಿ ಪರಿಸ್ಥಿತಿ ಸಾಗುತ್ತಿದೆ ಎಂಬ ಆತಂಕ ನನಗಿದೆ” ಎಂದು ಅವರು ಹೇಳಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಹಾಗೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂಬ ಬೇಡಿಕೆಗಳೊಂದಿಗೆ ಅಕ್ಟೋಬರ್ 11ರಂದು ಬೆಳಿಗ್ಗೆ 10 ಗಂಟೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮುಂದುವರಿಸುವುದಾಗಿ ಸಿಜೆಪಿ ಕರೆ ನೀಡಿದೆ
ಇದೇ ವೇಳೆ, ಪ್ರತಿಭಟನಾಕಾರರು ಮತ್ತು ವಿರೋಧ ಪಕ್ಷದ ನಾಯಕರನ್ನು ವಶಕ್ಕೆ ಪಡೆದಿರುವುದಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ವಿಚಾರಣೆ ನಿಗದಿಯಾಗಿರುವುದಾಗಿಯೂ ವರದಿಗಳು ತಿಳಿಸಿವೆ.
ಅಭಿಜೀತ್ ದಿಪ್ಕೆ ಅವರ ತಾಯಿಯ ಭಾವುಕ ಮಾತುಗಳು ಮಗನ ಸುರಕ್ಷತೆಯ ಬಗ್ಗೆ ಕುಟುಂಬಕ್ಕಿರುವ ಆತಂಕವನ್ನು ಮಾತ್ರವಲ್ಲದೆ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಪ್ರತಿಭಟನೆಯ ಹಕ್ಕಿನ ಕುರಿತು ಅವರು ಹೊಂದಿರುವ ಕಳವಳವನ್ನೂ ಪ್ರತಿಬಿಂಬಿಸಿವೆ.