ಬಾಗಲಕೋಟೆ: SIR ಪ್ರಕ್ರಿಯೆಯ ಸಂದರ್ಭದಲ್ಲಿ ಸಲ್ಲಿಸಲಾದ ನಮೂನೆ–7 ಅರ್ಜಿಗಳಿಗೆ ಸಂಬಂಧಿಸಿ ದಾಖಲಾಗಿರುವ FIRಗಳ ವಿರುದ್ಧ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಬಾಗಲಕೋಟೆಯಲ್ಲಿ ಪ್ರತಿಭಟನೆ ನಡೆಸಿದರು.
ರಾಯಲ್ ಸರ್ಕಲ್‌ನಿಂದ ಬ್ರೂಸ್‌ಪೇಟೆ ಪೊಲೀಸ್ ಠಾಣೆಯತ್ತ ಮೆರವಣಿಗೆ ನಡೆಸಲು ಬಿಜೆಪಿ ಕಾರ್ಯಕರ್ತರು ಮುಂದಾದರು. ಆದರೆ ಪೊಲೀಸರು ಪ್ರತಿಭಟನಾಕಾರರನ್ನು ಮಾರ್ಗಮಧ್ಯೆಯೇ ತಡೆದರು.
ಈ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ಕೆಲಕಾಲ ಉದ್ವಿಗ್ನಗೊಂಡಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಲವು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ನಮೂನೆ–7 ಅರ್ಜಿಗಳಿಗೆ ಸಂಬಂಧಿಸಿ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು ಆಗ್ರಹಿಸಿದರು. ಕಾನೂನು ಕ್ರಮವನ್ನು ರಾಜಕೀಯ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದರು.
SIR ಪ್ರಕ್ರಿಯೆಯ ನಡುವೆ ನಮೂನೆ–7 ಅರ್ಜಿಗಳ ಕುರಿತು ದಾಖಲಾಗುತ್ತಿರುವ FIRಗಳು ಇದೀಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿವೆ. ಒಂದು ಕಡೆ ಅರ್ಜಿಗಳ ದುರುಪಯೋಗದ ಆರೋಪದ ಮೇಲೆ ಕಾನೂನು ಕ್ರಮ ನಡೆಯುತ್ತಿದ್ದರೆ, ಮತ್ತೊಂದೆಡೆ FIRಗಳ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.
ಈ ಬೆಳವಣಿಗೆಯಿಂದ SIR ಮತ್ತು FIR ನಡುವಿನ ರಾಜಕೀಯ ಸಂಘರ್ಷ ಬಾಗಲಕೋಟೆಯಲ್ಲಿ ಮತ್ತಷ್ಟು ತೀವ್ರಗೊಂಡಿದೆ.