ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಒದಗಿಸಿರುವ ಮತದಾನದ ಹಕ್ಕು ಕೇವಲ ಒಂದು ಅಧಿಕಾರವಲ್ಲ, ಅದು ಪ್ರಜಾಪ್ರಭುತ್ವದ ಪರಮೋಚ್ಛ ಶಕ್ತಿ. ಮತಗಟ್ಟೆಯೊಳಗೆ ರಹಸ್ಯ ಮತದಾನಕ್ಕಾಗಿ (Secret Ballot) ಪರದೆ ಅಳವಡಿಸಿರುವುದು ಕೇವಲ ನಿಯಮವಲ್ಲ; ಯಾವುದೇ ಭಯ, ಬೆದರಿಕೆ, ಆಮಿಷ ಅಥವಾ ಚುನಾವಣೆಯ ನಂತರದ ತಾರತಮ್ಯಕ್ಕೆ ಮತದಾರ ತುತ್ತಾಗಬಾರದು ಎಂಬುದು ಸಂವಿಧಾನದ ಅಂತರಾಳದ ಆಶಯ. ಆದರೆ ಇಂದಿನ ಡಿಜಿಟಲ್ ಕಾಲಘಟ್ಟದಲ್ಲಿ ಮತಗಟ್ಟೆಯೊಳಗಿನ ಪರದೆ ಕೇವಲ ಔಪಚಾರಿಕತೆಯಾಗಿ ಉಳಿದುಬಿಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ ಮತ್ತು ಜಾತಿ-ಧರ್ಮದ ಕೂಟಗಳಲ್ಲಿ ನಮ್ಮ ರಾಜಕೀಯ ನಿಲುವುಗಳು ಹಾಗೂ ಒಲವುಗಳನ್ನು ನಾವೇ ಮುಕ್ತವಾಗಿ ಬೆತ್ತಲು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಪ್ರತಿಯೊಂದು ಲೈಕ್, ಕಾಮೆಂಟ್, ಶೇರ್ ಮತ್ತು ಪೋಸ್ಟ್‌ಗಳು ನಮ್ಮ ಸಿದ್ಧಾಂತ ಮತ್ತು ರಾಜಕೀಯ ಒಲವನ್ನು ಡೇಟಾ ಕಂಪನಿಗಳಿಗೂ, ರಾಜಕೀಯ ಪಕ್ಷಗಳಿಗೂ ಬೆರಳ ತುದಿಯಲ್ಲೇ ತಿಳಿಸುತ್ತಿವೆ.
ನಾವು ನಮ್ಮ ಮತದಾನದ ಗೌಪ್ಯತೆಯನ್ನು ನಾವೇ ಕಳೆದುಕೊಂಡಾಗ, ಅದು ರಾಜಕೀಯ ಪಕ್ಷಗಳ ಪಾಲಿಗೆ ಬಹುದೊಡ್ಡ ಅಸ್ತ್ರವಾಗಿ ಪರಿಣಮಿಸುತ್ತದೆ. ಯಾವ ಬೂತ್ ಅಥವಾ ಪ್ರದೇಶದಲ್ಲಿ ತಮಗೆ ಮತ ಬೀಳುವುದಿಲ್ಲ ಎಂಬ ಸ್ಪಷ್ಟ ಚಿತ್ರಣ ಪಕ್ಷಗಳಿಗೆ ಸಿಕ್ಕಿದ ತಕ್ಷಣ, ಅಲ್ಲಿ “ಮೈಕ್ರೋ ಟಾರ್ಗೆಟಿಂಗ್” ಆರಂಭವಾಗುತ್ತದೆ. ತಮಗೆ ವಿರೋಧಿಗಳೆಂದು ಗುರುತಿಸಲ್ಪಟ್ಟ ಸಮುದಾಯಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ವ್ಯವಸ್ಥಿತವಾಗಿ ಕೈಬಿಡುವ (Voter Suppression) ಅಥವಾ ತಾಂತ್ರಿಕ ನೆಪಗಳಲ್ಲಿ ಮತದಾನದಿಂದ ವಂಚಿಸುವ ಹುನ್ನಾರಗಳು ನಡೆಯುತ್ತವೆ. ಮತದಾನದ ದಿನ ಮತಗಟ್ಟೆಗೆ ಹೋದಾಗ “ಪಟ್ಟಿಯಲ್ಲಿ ಹೆಸರಿಲ್ಲ” ಎಂದು ಪ್ರಜೆ ಹಿಂದಿರುಗುವುದೇ ಇಂದಿನ ಅತ್ಯಾಧುನಿಕ ‘ವೋಟ್ ಚೋರಿ’. ಆಡಳಿತ ಯಂತ್ರ ಹಾಗೂ ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ರಾಜಕೀಯ ಪ್ರಭಾವ ಈ ಅನ್ಯಾಯಕ್ಕೆ ಮತ್ತಷ್ಟು ತುಪ್ಪ ಸುರಿಯುತ್ತದೆ.
ಅಂತಿಮವಾಗಿ ಈ ಅಪಾಯಕಾರಿ ಆಟದಲ್ಲಿ ಸೋಲುತ್ತಿರುವುದು ಸಂವಿಧಾನ ಮತ್ತು ಸಾಮಾನ್ಯ ಪ್ರಜೆ ಮಾತ್ರ. ನಾಗರಿಕನು ತನ್ನ ಸ್ವತಂತ್ರ ಅಸ್ತಿತ್ವ ಕಳೆದುಕೊಂಡು ಕೇವಲ ಒಂದು ‘ವೋಟ್ ಬ್ಯಾಂಕ್’ ಆಗಿ ಬದಲಾದಾಗ, ಅಧಿಕಾರಕ್ಕೆ ಬಂದವರು ವಿರೋಧಿ ಸಮುದಾಯಗಳ ರಸ್ತೆ, ನೀರು, ಶಿಕ್ಷಣ, ಆಸ್ಪತ್ರೆಗಳಂತಹ ಮೂಲಭೂತ ಹಕ್ಕುಗಳನ್ನೇ ಕಡೆಗಣಿಸುತ್ತಾರೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಕನಸು ಕಂಡ “ಒಬ್ಬ ವ್ಯಕ್ತಿ, ಒಂದು ಮತ, ಒಂದು ಮೌಲ್ಯ” ಎಂಬ ಸಮಾನತೆಯ ತತ್ವ ಇಲ್ಲಿ ಬುಡಮೇಲಾಗುತ್ತದೆ. ಆದ್ದರಿಂದ, ಪ್ರಜೆಗಳಾದ ನಾವು ಮೊದಲು ನಮ್ಮ ಮತದ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕಿದೆ; ಜಾಲತಾಣಗಳಲ್ಲಿ ವೋಟ್ ಬ್ಯಾಂಕ್‌ನಂತೆ ವರ್ತಿಸುವುದನ್ನು ನಿಲ್ಲಿಸಬೇಕು. ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರಿದೆಯೇ ಎಂದು ಮೊದಲೇ ಖಚಿತಪಡಿಸಿಕೊಳ್ಳುತ್ತಾ, ಜಾತಿ-ಧರ್ಮಗಳ ಆಚೆಗೆ ನಿಂತು ಶಿಕ್ಷಣ, ಉದ್ಯೋಗ, ಮೂಲಸೌಕರ್ಯಗಳ ಆಧಾರದ ಮೇಲೆ ಸರ್ಕಾರವನ್ನು ಪ್ರಶ್ನಿಸಬೇಕಿದೆ. ನಮ್ಮ ಎಚ್ಚರ ತಪ್ಪಿದರೆ, ನಮ್ಮ ಹಕ್ಕುಗಳನ್ನು ಕಸಿಯುವವರಿಗೆ ನಾವೇ ಸುಲಭದ ದಾರಿ ಮಾಡಿಕೊಟ್ಟಂತಾಗುತ್ತದೆ.