ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿ.ಸಿ. ಮನ್ನಾ ಭೂಮಿಯ ಮಂಜೂರಾತಿಗೆ ಸಂಬಂಧಿಸಿದಂತೆ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಇದೀಗ ಮತ್ತೊಂದು ಬೆಳವಣಿಗೆ ಕಂಡುಬಂದಿದೆ. ನ್ಯೂನತೆಗಳು ಮತ್ತು ಕಾನೂನು ತೊಡಕುಗಳನ್ನು ಪರಿಶೀಲಿಸಿ, ಅರ್ಹ ಭೂರಹಿತ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡಲು ಕ್ರಮ ಕೈಗೊಳ್ಳುವುದಾಗಿ ಕಂದಾಯ ಸಚಿವರು ಭರವಸೆ ನೀಡಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ತಿಳಿಸಿದೆ.
ಡಿ.ಸಿ. ಮನ್ನಾ ಭೂಮಿ ಮಂಜೂರಾತಿಗಾಗಿ ದಲಿತ ಸಂಘಟನೆಗಳು ಸುಮಾರು 30 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿವೆ. 2017ರಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಕೆ.ಜಿ. ಜಗದೀಶ್ ಅವರು ಸರ್ಕಾರದ ನಿರ್ದೇಶನಕ್ಕಾಗಿ ಕರಡು ಪ್ರಸ್ತಾವನೆಯನ್ನು ಕಳುಹಿಸಿದ್ದರು. ಆದರೆ, ಆ ಪ್ರಸ್ತಾವನೆಗೆ ಅಗತ್ಯ ತಿದ್ದುಪಡಿ ಅಥವಾ ಸರ್ಕಾರದ ಅನುಮೋದನೆ ದೊರೆಯದೆ, ಸರ್ಕಾರದ ಮಟ್ಟದಲ್ಲೇ ಬಾಕಿ ಉಳಿದಿದೆ ಎಂದು ಸಮನ್ವಯ ಸಮಿತಿ ಹೇಳಿದೆ.
ಈ ನಡುವೆ, ಸಂಘಟನೆಗಳು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದವು. ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲೂ ಡಿ.ಸಿ. ಮನ್ನಾ ಭೂಮಿ ವಿಚಾರವನ್ನು ಪ್ರಸ್ತಾಪಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು. ಆದರೆ ಸಂಪುಟ ಸಭೆಯಲ್ಲಿ ಈ ಕುರಿತು ಯಾವುದೇ ಪ್ರಸ್ತಾಪವಾಗದ ಹಿನ್ನೆಲೆಯಲ್ಲಿ ಸಮನ್ವಯ ಸಮಿತಿ ಅಸಮಾಧಾನ ವ್ಯಕ್ತಪಡಿಸಿತ್ತು.
ಇದಾದ ಬಳಿಕ ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರನ್ನು ಭೇಟಿ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಸಮನ್ವಯ ಸಮಿತಿಯ ನಿಯೋಗ ಗುರುವಾರ ಸಚಿವರನ್ನು ಭೇಟಿ ಮಾಡಿತು. ಸುಮಾರು ಒಂದು ಗಂಟೆ ನಡೆದ ಸಭೆಯಲ್ಲಿ ಡಿ.ಸಿ. ಮನ್ನಾ ಭೂಮಿ ಮಂಜೂರಾತಿಗೆ ಸಂಬಂಧಿಸಿದ ಸಮಸ್ಯೆಗಳು, ಬಾಕಿ ಇರುವ ಪ್ರಸ್ತಾವನೆ ಹಾಗೂ ಕಾನೂನು ತೊಡಕುಗಳ ಕುರಿತು ಚರ್ಚೆ ನಡೆಸಲಾಯಿತು.
ಸಭೆಯ ವೇಳೆ ಸಚಿವರು ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಮಾಹಿತಿ ಪಡೆದುಕೊಂಡರು ಎಂದು ಸಮಿತಿ ತಿಳಿಸಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ತಕ್ಷಣ ಪತ್ರ ಬರೆದು ಡಿ.ಸಿ. ಮನ್ನಾ ಭೂಮಿಗೆ ಸಂಬಂಧಿಸಿದ ಸಂಪೂರ್ಣ ವರದಿ ತರಿಸಿಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಅಲ್ಲದೆ, ಶೀಘ್ರದಲ್ಲೇ ಮಂಗಳೂರಿನಲ್ಲಿ ತಮ್ಮ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕಂದಾಯ ಅಧಿಕಾರಿಗಳ ಸಭೆ ನಡೆಸಲಾಗುವುದು. ಭೂಮಿ ಮಂಜೂರಾತಿಗೆ ಎದುರಾಗಿರುವ ಕಾನೂನು ತೊಡಕುಗಳನ್ನು ಪರಿಶೀಲಿಸಿ, ಅಗತ್ಯವಿದ್ದರೆ ಸಚಿವ ಸಂಪುಟದ ಮುಂದೆ ವಿಷಯ ಮಂಡಿಸಿ ಅನುಮತಿ ಪಡೆಯಲಾಗುವುದು. ನಂತರ ಅರ್ಹ ಭೂರಹಿತ ಫಲಾನುಭವಿಗಳಿಗೆ ತಮ್ಮ ನೇತೃತ್ವದಲ್ಲಿ ಮಂಗಳೂರಿನಲ್ಲಿ ಮಂಜೂರಾತಿ ಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ಸಮನ್ವಯ ಸಮಿತಿ ತಿಳಿಸಿದೆ.
ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಸಮನ್ವಯ ಸಮಿತಿಯ ಮುಖಂಡರಾದ ರಘು ಕೆ. ಎಕ್ಕಾರ್, ಅಶೋಕ್ ಕೊಂಚಾಡಿ, ಆನಂದ ಬೆಳ್ಳಾರೆ, ಸರೋಜಿನಿ ಬಂಟ್ವಾಳ, ಸದಾಶಿವ ಪಡುಬಿದ್ರಿ, ಕೃಷ್ಣಾನಂದ ಡಿ., ಪ್ರೇಮ್‌ನಾಥ್ ಬಳಲ್ಬಾಗ್, ಯಶೋಧ ಡಿ. ಹೊಸಬೆಟ್ಟು, ಜಗದೀಶ್ ಪಾಂಡೇಶ್ವರ, ಬಿ.ಕೆ. ವಸಂತ್ ಬೆಳ್ತಂಗಡಿ, ವೆಂಕಣ್ಣ ಕೊಯ್ಯೂರು, ಹರಿಯಪ್ಪ ಮುತ್ತೂರು, ಶ್ರೀಧರ್ ಎಸ್. ಕಳೆಂಜ, ರಮೇಶ್ ಆರ್. ಬೆಳ್ತಂಗಡಿ, ನಾರಾಯಣ ಪುಡುವೆಟ್ಟು, ಪ್ರಭಾಕರ್ ಶಾಂತಿಗೋಡು, ರೋಹಿತ್ ಧರ್ಮಸ್ಥಳ ಹಾಗೂ ಪ್ರದೀಪ್ ಕುಮಾರ್ ಪುಡುವೆಟ್ಟು ಸೇರಿದಂತೆ ಹಲವರು ಉಪಸ್ಥಿತರಿದ್ದರು.