ತಿರುವನಂತಪುರಂ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಸುಮಾರು ಎರಡು ದಶಕಗಳ ಹಿಂದೆ ಕೇಳಿಬಂದಿದ್ದ ಆರೋಪಗಳಿಗೆ ಸಂಬಂಧಿಸಿದ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. 2006ರಲ್ಲಿ ಕೇರಳ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ಅವಧಿಗೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಮರುಆರಂಭಿಸಲು ಕೇರಳ ಸರ್ಕಾರದ ಗೃಹ ಇಲಾಖೆ ಜ್ಞಾನೇಶ್ ಕುಮಾರ್ ವಿರುದ್ಧ ವಿಜಿಲೆನ್ಸ್ ತನಿಖೆಸೂಚನೆ ನೀಡಿದೆ ಎಂದು ವರದಿಯಾಗಿದೆ.
ಕೇರಳ ಸ್ಟೇಟ್ ಟ್ರಾನ್ಸ್ಪೋರ್ಟ್ ಪ್ರಾಜೆಕ್ಟ್ಗೆ ಸಂಬಂಧಿಸಿದ ಕಾಮಗಾರಿಗಳಲ್ಲಿ ಹಣ ಪಾವತಿ ಮತ್ತು ಗುತ್ತಿಗೆ ಪ್ರಕ್ರಿಯೆ ಕುರಿತು ಅಕ್ರಮಗಳ ಆರೋಪಗಳು ಆಗ ಕೇಳಿಬಂದಿದ್ದವು. ಈ ಸಂದರ್ಭದಲ್ಲಿ ಯೋಜನೆಯೊಂದಿಗೆ ಕೆಲಸ ಮಾಡುತ್ತಿದ್ದ ಮಲೇಷ್ಯಾ ಮೂಲದ ಎಂಜಿನಿಯರ್ ಲೀ ಸೀ ಬೀನ್ ಅವರ ಆತ್ಮಹತ್ಯೆ ಪ್ರಕರಣವೂ ಪ್ರಮುಖವಾಗಿ ಉಲ್ಲೇಖವಾಗಿತ್ತು.
ಆತ್ಮಹತ್ಯೆ ಪತ್ರದಲ್ಲಿ ಜ್ಞಾನೇಶ್ ಕುಮಾರ್ ಅವರ ಹೆಸರನ್ನು ಉಲ್ಲೇಖಿಸಲಾಗಿತ್ತು ಮತ್ತು ಕಾಮಗಾರಿಯ ಬಿಲ್ ಪಾವತಿಗೆ ಸಂಬಂಧಿಸಿದಂತೆ ಲಂಚದ ಬೇಡಿಕೆ ಇಡಲಾಗಿತ್ತು ಎಂಬ ಆರೋಪ ಮಾಡಲಾಗಿತ್ತು ಎಂದು ವರದಿಗಳು ತಿಳಿಸಿವೆ. ಈ ಆರೋಪಗಳ ಹಿನ್ನೆಲೆಯಲ್ಲಿ ಅಂದಿನ ಸಂದರ್ಭದಲ್ಲಿ ಕೇರಳ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ ತನಿಖೆ ನಡೆಸಿತ್ತು.
ಆದರೆ ತನಿಖೆ ಪೂರ್ಣಗೊಳ್ಳದೆ ಪ್ರಕರಣ ಮುಂದುವರಿಯದೆ ಉಳಿದಿತ್ತು ಎನ್ನಲಾಗಿದೆ. ಇದೀಗ ಹಳೆಯ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳನ್ನು ಕೇರಳ ಗೃಹ ಇಲಾಖೆ ಪರಿಶೀಲನೆಗೆ ಪಡೆದಿದ್ದು, ಹೊಸದಾಗಿ ಬಂದ ದೂರಿನ ಆಧಾರದ ಮೇಲೆ ತನಿಖೆಯನ್ನು ಮತ್ತೆ ನಡೆಸಲು ಸೂಚಿಸಲಾಗಿದೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಜ್ಞಾನೇಶ್ ಕುಮಾರ್ ಅವರ ಹಿಂದಿನ ಆಡಳಿತಾತ್ಮಕ ಅವಧಿಗೆ ಸಂಬಂಧಿಸಿದ ಆರೋಪಗಳು ಮತ್ತೆ ಸಾರ್ವಜನಿಕ ಚರ್ಚೆಗೆ ವಿಜಿಲೆನ್ಸ್ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಆರೋಪಗಳಲ್ಲಿ ವಾಸ್ತವಾಂಶ ಎಷ್ಟಿದೆ ಎಂಬುದು ಸ್ಪಷ್ಟವಾಗಲಿದೆ.