ತೀರ್ಥಹಳ್ಳಿ: ಎಸ್ ಐ ಆರ್ ವಿರುದ್ದ ದೇಶದಲ್ಲಿ ಹೋರಾಟ ತೀವೃವಾಗುತ್ತಿದೆ .. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಬಿಜೆಪಿಯ ವಿರುದ್ದ ಫಾರ್ಮ್ 7 ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತವಾಗಿದೆ ಈ ನಡುವೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಸುರಳಿ ಬಾಳೆಬೈಲು ಗ್ರಾಮದ ಭಾಗ ಸಂಖ್ಯೆ 186ರ ಮತದಾರರ ಪಟ್ಟಿಯ ಕುರಿತು ಪರಿಶೀಲನೆ ನಡೆಸುವಂತೆ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿರುವುದು ಇದೀಗ ಮತ್ತೆ ಪಾರ್ಮ್ 7 ಚರ್ಚೆಗೆ ಕಾರಣವಾಗಿದೆ.
ಸತೀಶ್ ಎಂಬವರು ಸಲ್ಲಿಸಿದ್ದಾರೆ ಎನ್ನಲಾದ ಮನವಿಯಲ್ಲಿ, ಭಾಗ ಸಂಖ್ಯೆ 186ರಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿರುವ ಕೆಲವರು ಸಂಬಂಧಿತ ಪ್ರದೇಶದಲ್ಲಿ ವಾಸಿಸುತ್ತಿಲ್ಲ ಎಂಬ ಆರೋಪ ಮಾಡಲಾಗಿದೆ. ಹೀಗಾಗಿ, ಮತದಾರರ ವಿವರಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎನ್ನಲಾಗಿದೆ.
ಈ ಮನವಿಯ ಪ್ರತಿ ತಮ್ಮ ಬಳಿ ದೊರೆತಿದೆ ಎಂದು ಹೇಳಿರುವ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್, ಕರ್ನಾಟಕ, ಮನವಿಯಲ್ಲಿ ಉಲ್ಲೇಖವಾಗಿರುವ ಮತದಾರರ ಹೆಸರುಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿವೆ ಎಂದು ಆರೋಪಿಸಿದೆ. ಈ ಹಿನ್ನೆಲೆಯಲ್ಲಿ, ಮತದಾರರ ಪರಿಶೀಲನೆಯ ಹೆಸರಿನಲ್ಲಿ ನಿರ್ದಿಷ್ಟ ಸಮುದಾಯದ ಮತದಾರರನ್ನು ಗುರಿಯಾಗಿಸಲಾಗಿದೆಯೇ ಎಂಬ ಪ್ರಶ್ನೆಯನ್ನೂ ಸಂಘಟನೆ ಮುಂದಿಟ್ಟಿದೆ.
ಆದರೆ, ಸಂಬಂಧಿತ ಮತದಾರರು ನಿಜವಾಗಿಯೂ ಆ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಚುನಾವಣಾ ಅಧಿಕಾರಿಗಳ ಅಧಿಕೃತ ಪರಿಶೀಲನೆಯ ನಂತರವೇ ಸ್ಪಷ್ಟವಾಗಬೇಕಿದೆ. ಅದೇ ರೀತಿ, ಮನವಿಯಲ್ಲಿರುವ ಆರೋಪಗಳು ಸತ್ಯವೇ ಎಂಬುದನ್ನೂ ದಾಖಲೆಗಳು ಮತ್ತು ಸ್ಥಳ ಪರಿಶೀಲನೆಯ ಆಧಾರದ ಮೇಲೆ ಅಧಿಕಾರಿಗಳು ನಿರ್ಧರಿಸಬೇಕಿದೆ.
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ತೆಗೆದುಹಾಕುವ ಪ್ರಕ್ರಿಯೆ ಚುನಾವಣಾ ನಿಯಮಗಳ ಪ್ರಕಾರ ನಡೆಯಬೇಕಾಗುತ್ತದೆ. ಹೀಗಾಗಿ, ತೀರ್ಥಹಳ್ಳಿಯ ಭಾಗ ಸಂಖ್ಯೆ 186ಕ್ಕೆ ಸಂಬಂಧಿಸಿದ ಈ ಮನವಿಯ ಕುರಿತು ಚುನಾವಣಾ ಅಧಿಕಾರಿಗಳು ಕೈಗೊಳ್ಳುವ ಮುಂದಿನ ಕ್ರಮದ ಮೇಲೆ ಇದೀಗ ಗಮನ ನೆಟ್ಟಿದೆ.