ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪ್ರಸರಣ ಮಾರ್ಗಗಳು ಕೇವಲ ವಿದ್ಯುತ್ ಪೂರೈಕೆಯ ಮೂಲಸೌಕರ್ಯವಾಗಿರದೇ, ಕೃಷಿ, ಗ್ರಾಮೀಣ ಉದ್ಯಮ ಹಾಗೂ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ಹೊಸ ಅವಕಾಶಗಳನ್ನು ಕಲ್ಪಿಸುವ ಪ್ರಮುಖ ಕೊಂಡಿಗಳಾಗಿ ರೂಪುಗೊಳ್ಳುತ್ತಿವೆ. ಬಲಿಷ್ಠ ಹಾಗೂ ವಿಶ್ವಾಸಾರ್ಹ ವಿದ್ಯುತ್ ಗ್ರಿಡ್ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಬಹುದು.
ಕೃಷಿ ಪ್ರಧಾನ ರಾಜ್ಯವಾಗಿರುವ ಕರ್ನಾಟಕದಲ್ಲಿ ನಿರಂತರ ವಿದ್ಯುತ್ ಪೂರೈಕೆಯು ನೀರಾವರಿ, ಕೃಷಿ ಯಾಂತ್ರೀಕರಣ, ಹೈನುಗಾರಿಕೆ ಹಾಗೂ ಕೊಯ್ಲಿನ ನಂತರದ ಚಟುವಟಿಕೆಗಳಿಗೆ ಅತ್ಯಗತ್ಯವಾಗಿದೆ. ನೀರಾವರಿ ಪಂಪ್ಗಳು ಸೇರಿದಂತೆ ವಿವಿಧ ಕೃಷಿ ಉಪಕರಣಗಳು ನಿರಂತರವಾಗಿ ಕಾರ್ಯನಿರ್ವಹಿಸಲು ನಿರಂತರ ವಿದ್ಯುತ್ನ ವಿಶ್ವಾಸಾರ್ಹತೆ ಮುಖ್ಯವಾಗಿದ್ದು, ಬೆಳೆಗಳ ನಿರ್ಣಾಯಕ ಹಂತಗಳಲ್ಲಿ ವಿದ್ಯುತ್ ವ್ಯತ್ಯಯದಿಂದ ಉಂಟಾಗುವ ತೊಂದರೆಗಳನ್ನು ಕಡಿಮೆ ಮಾಡಲು ಬಲಿಷ್ಠ ಗ್ರಿಡ್ ಸಹಕಾರಿಯಾಗಬಹುದು.
ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಲಭ್ಯತೆ ಹೆಚ್ಚಿದಂತೆ ಕೃಷಿ ಉತ್ಪನ್ನ ಆಧಾರಿತ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೂ ಅವಕಾಶಗಳು ಹೆಚ್ಚಲಿವೆ. ಶೀತಗೃಹ, ಸಂಗ್ರಹಣಾ ಕೇಂದ್ರ, ವಿಂಗಡಣೆ ಮತ್ತು ಶ್ರೇಣೀಕರಣ ಘಟಕಗಳು ಹಾಗೂ ಆಹಾರ ಸಂಸ್ಕರಣಾ ಘಟಕಗಳನ್ನು ಕೃಷಿ ಪ್ರದೇಶಗಳ ಸಮೀಪದಲ್ಲೇ ಸ್ಥಾಪಿಸಲು ಸಹಕಾರಿಯಾಗಲಿದೆ. ಇದರಿಂದ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯ ಜತೆಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೂ ಅವಕಾಶ ದೊರೆಯಬಹುದು.
ದೇಶದ ವಿದ್ಯುತ್ ಜಾಲ ನಿರಂತರವಾಗಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ವಿವಿಧ ಪ್ರದೇಶಗಳಿಗೆ ವಿದ್ಯುತ್ ಅನ್ನು ವಿಶ್ವಾಸಾರ್ಹವಾಗಿ ತಲುಪಿಸುವಲ್ಲಿ ಪ್ರಸರಣ ಮೂಲಸೌಕರ್ಯದ ಪಾತ್ರವೂ ಹೆಚ್ಚುತ್ತಿದೆ. ಬಲಿಷ್ಠ ಗ್ರಿಡ್ ವಿದ್ಯುತ್ ಪೂರೈಕೆಯ ಸ್ಥಿರತೆಯನ್ನು ಹೆಚ್ಚಿಸುವುದರ ಜತೆಗೆ, ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿ ಹೊಸ ಆರ್ಥಿಕ ಚಟುವಟಿಕೆಗಳಿಗೆ ಅಗತ್ಯವಾದ ಮೂಲಸೌಕರ್ಯವನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ.
ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲೂ ಕರ್ನಾಟಕ ಮಹತ್ವದ ಸ್ಥಾನ ಪಡೆದಿದೆ. ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಉತ್ಪಾದನೆಯಾಗುವ ವಿದ್ಯುತ್ ಅನ್ನು ರಾಜ್ಯದ ವಿವಿಧ ಭಾಗಗಳಿಗೆ ಹಾಗೂ ದೇಶದ ಇತರ ಪ್ರದೇಶಗಳಿಗೆ ಸಾಗಿಸಲು ವಿದ್ಯುತ್ ಪ್ರಸರಣ ಜಾಲ ಅಗತ್ಯವಾಗಿದೆ. ನವೀಕರಿಸಬಹುದಾದ ಇಂಧನದ ಹೆಚ್ಚುತ್ತಿರುವ ಪ್ರಮಾಣವನ್ನು ಗ್ರಿಡ್ಗೆ ಸಮರ್ಪಕವಾಗಿ ಸಂಯೋಜಿಸುವಲ್ಲಿಯೂ ಪ್ರಸರಣ ಸಾಮರ್ಥ್ಯ ಪ್ರಮುಖ ಪಾತ್ರ ವಹಿಸುತ್ತದೆ.
ಪ್ರಸರಣ ಜಾಲದ ವಿಸ್ತರಣೆಯ ಪ್ರಯೋಜನ ವಿದ್ಯುತ್ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ವಿಶ್ವಾಸಾರ್ಹ ವಿದ್ಯುತ್ ದೊರೆತರೆ ಕೃಷಿ ಮೌಲ್ಯ ಸರಪಳಿ ಬಲಗೊಳ್ಳುವುದರ ಜತೆಗೆ ಗ್ರಾಮೀಣ ಉದ್ಯಮಗಳಿಗೆ ಉತ್ತೇಜನ ದೊರೆಯಬಹುದು. ಆಹಾರ ಸಂಸ್ಕರಣೆ, ಶೀತ ಸರಪಳಿ, ಸಂಗ್ರಹಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಲು ಇದು ಪೂರಕ ವಾತಾವರಣ ನಿರ್ಮಿಸಬಹುದು.
ವಿದ್ಯುತ್ ಪ್ರಸರಣ ಮೂಲಸೌಕರ್ಯದ ಪರಿಣಾಮವನ್ನು ಕೇವಲ ನಿರ್ಮಿಸಲಾದ ಮಾರ್ಗಗಳ ಉದ್ದ ಅಥವಾ ಕಂಬಗಳ ಸಂಖ್ಯೆಯಿಂದ ಅಳೆಯಲಾಗದು. ರೈತನಿಗೆ ಅಗತ್ಯದ ಸಮಯದಲ್ಲಿ ಕಾರ್ಯನಿರ್ವಹಿಸುವ ನೀರಾವರಿ ಪಂಪ್, ಕೊಯ್ಲಿನ ನಂತರದ ನಷ್ಟವನ್ನು ಕಡಿಮೆ ಮಾಡುವ ಶೀತಗೃಹ, ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ದೇಶದ ಸದೃಡತೆ ಬಲಗೊಳಿಸುವ ಗ್ರಾಮೀಣ ಉದ್ಯಮ, ಉತ್ತಮ ಸೇವೆ ನೀಡುವ ಶಾಲೆ ಮತ್ತು ಆರೋಗ್ಯ ಕೇಂದ್ರಗಳು—ಇವೆಲ್ಲವೂ ವಿಶ್ವಾಸಾರ್ಹ ವಿದ್ಯುತ್ ಮೂಲಸೌಕರ್ಯದಿಂದ ಸೃಷ್ಟಿಯಾಗುವ ಅವಕಾಶಗಳ ಪ್ರತೀಕಗಳಾಗಿವೆ.
ಹೀಗಾಗಿ ಗ್ರಾಮೀಣ ಕರ್ನಾಟಕದಲ್ಲಿ ವಿದ್ಯುತ್ ಪ್ರಸರಣ ಮಾರ್ಗಗಳು ಕೇವಲ ಕಂಬ–ತಂತಿಗಳ ಜಾಲವಲ್ಲ. ಅವು ರೈತರು, ಗ್ರಾಮೀಣ ಉದ್ಯಮಗಳು ಮತ್ತು ಸಮುದಾಯಗಳನ್ನು ಹೊಸ ಆರ್ಥಿಕ ಅವಕಾಶಗಳೊಂದಿಗೆ ಸಂಪರ್ಕಿಸುವ ಪ್ರಮುಖ ಕೊಂಡಿಗಳಾಗಿವೆ. ಕೃಷಿ ಉತ್ಪಾದಕತೆ, ಗ್ರಾಮೀಣ ಉದ್ಯೋಗ, ಸ್ಥಳೀಯ ಉದ್ಯಮ ಹಾಗೂ ಸುಸ್ಥಿರ ಅಭಿವೃದ್ಧಿಗೆ ಉತ್ತೇಜನ ನೀಡುವ ಮೂಲಕ ಬಲಿಷ್ಠ ಪ್ರಸರಣ ಜಾಲವು ಕರ್ನಾಟಕದ ಗ್ರಾಮೀಣ ಸಮೃದ್ಧಿಗೆ ಹೊಸ ದಾರಿ ತೆರೆಯುವ ಸಾಮರ್ಥ್ಯ ಹೊಂದಿದೆ. ಇದರ ಅನುಷ್ಠಾನದ ಹೊಣೆ ಸರ್ಕಾರ, ವಿದ್ಯುತ್ ಪ್ರಸರಣ ನಿಗಮಗಳ ಜೊತೆಗೆ ರೈತರು ಭಾಗಿಗಳಾಗಬೇಕಿದೆ.