Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ರಾಜ್‌ಕುಮಾರ್ ಅಪಹರಣ ಪ್ರಕರಣಕ್ಕೆ ಅಂತಿಮ ತೆರೆ – 9 ಮಂದಿ ಖುಲಾಸೆ

ರಾಜ್‌ಕುಮಾರ್ ಅಪಹರಣ ಪ್ರಕರಣಕ್ಕೆ ಅಂತಿಮ ತೆರೆ – 9 ಮಂದಿ ಖುಲಾಸೆ

ಬೆಂಗಳೂರು: ಕನ್ನಡನಾಡನ್ನು ನಡುಗಿಸಿದ್ದ ಹಾಗೂ ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದ ವರನಟ ಡಾ. ರಾಜ್‌ಕುಮಾರ್ ಅಪಹರಣ ಪ್ರಕರಣಕ್ಕೆ ಸುಮಾರು 25 ವರ್ಷಗಳ ಬಳಿಕ ಕಾನೂನುಬದ್ಧ ಅಂತ್ಯ ಕಂಡಿದೆ. ಮದ್ರಾಸ್ ಹೈಕೋರ್ಟ್ 9 ಆರೋಪಿಗಳನ್ನು ಸಂಪೂರ್ಣವಾಗಿ ಆರೋಪ ಮುಕ್ತಗೊಳಿಸಿ ಮಹತ್ವದ ತೀರ್ಪು ನೀಡಿದೆ.

2000ರ ಜುಲೈ 30ರಂದು ತಮಿಳುನಾಡಿನ ಗಾಜನೂರು ಸಮೀಪದ ತೋಟದ ಮನೆಯಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ ಕಾಡುಗಳ್ಳ ವೀರಪ್ಪನ್ ಮತ್ತು ಅವನ ಸಹಚರರು ವರನಟ ಡಾ. ರಾಜ್‌ಕುಮಾರ್ ಅವರನ್ನು ಅಪಹರಿಸಿದ್ದರು. ಈ ಘಟನೆ ಕರ್ನಾಟಕದಾದ್ಯಂತ ಭಾರೀ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು.ಡಾ. ರಾಜ್‌ಕುಮಾರ್ ಜೊತೆ ಅಳಿಯ ಎಸ್‌.ಎ. ಗೋವಿಂದರಾಜ್, ಸಂಬಂಧಿ ನಾಗೇಶ್ ಹಾಗೂ ಸಹ ನಿರ್ದೇಶಕ ನಾಗಪ್ಪ ಮಾರಡಗಿ ಕೂಡ ಅಪಹರಣಕ್ಕೊಳಗಾಗಿದ್ದರು. ಆಗ 71 ವರ್ಷದವರಾಗಿದ್ದ ರಾಜ್‌ಕುಮಾರ್ ಸುಮಾರು 108 ದಿನಗಳ ಕಾಲ ಕಾಡಿನಲ್ಲಿ ಬಂಧಿಯಾಗಿದ್ದರು. ರಾಜ್ಯದಾದ್ಯಂತ ಅಭಿಮಾನಿಗಳು ಪ್ರಾರ್ಥನೆ ನಡೆಸಿ ಅವರ ಸುರಕ್ಷಿತ ಬಿಡುಗಡೆಗಾಗಿ ಕಾಯುತ್ತಿದ್ದರು. ಅಂತಿಮವಾಗಿ ಅವರು ಸುರಕ್ಷಿತವಾಗಿ ಬಿಡುಗಡೆಗೊಂಡಿದ್ದರು.

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಈ ಪ್ರಕರಣದಲ್ಲಿ ತನಿಖಾಧಿಕಾರಿಗಳು ವೀರಪ್ಪನ್ ಸೇರಿ ಒಟ್ಟು 14 ಮಂದಿಯನ್ನು ಆರೋಪಿಗಳಾಗಿ ಗುರುತಿಸಿದ್ದರು. ಆದರೆ ಚಾರ್ಜ್‌ಶೀಟ್ ಸಲ್ಲಿಸುವ ಮೊದಲು ವೀರಪ್ಪನ್ ಮತ್ತು ಕೆಲವು ಸಹಚರರು ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದರು. ನಂತರ ಪ್ರಕರಣದ ತನಿಖೆ ಹಾಗೂ ವಿಚಾರಣೆ ಹಲವು ವರ್ಷಗಳ ಕಾಲ ಮುಂದುವರಿದಿತ್ತು. 2018ರಲ್ಲಿ ಗೋಪಿಶೆಟ್ಟಿಪಾಳ್ಯ ಸೆಷನ್ಸ್ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದ 9 ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ 2019ರಲ್ಲಿ ಮದ್ರಾಸ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಪಿ. ವೇಲ್ಮುರುಗನ್ ಮತ್ತು ಎಂ. ಜ್ಯೋತಿರಾಮನ್ ಅವರ ದ್ವಿಸದಸ್ಯ ಪೀಠವು ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಸಮರ್ಥಿಸಿ ಮೇಲ್ಮನವಿಯನ್ನು ತಳ್ಳಿ ಹಾಕಿದೆ. ಆರೋಪಿಗಳ ವಿರುದ್ಧ ಸಮರ್ಪಕ ಸಾಕ್ಷ್ಯಾಧಾರಗಳ ಕೊರತೆಯಿದ್ದ ಕಾರಣ ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಈ ಪ್ರಕರಣದಲ್ಲಿ ಆರೋಪ ಮುಕ್ತರಾದವರು: ಗೋವಿಂದರಾಜ್, ಆಂಡ್ರಿಲ್ಪ, ಸುವಣ್ಣ, ಮಾರನ್, ಸೆಲ್ವನ್, ಅಮೃತಲಿಂಗಂ, ನಾಗರಾಜ್, ಪುಟ್ಟುಸ್ವಾಮಿ, ಕಲ್ಮಂಡಿ ರಾಮನ್

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

ರಾಜ್‌ಕುಮಾರ್ ಅಪಹರಣ ಪ್ರಕರಣವು ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ಸಂಚಲನ ಮೂಡಿಸಿದ ಘಟನೆಗಳಲ್ಲಿ ಒಂದಾಗಿದೆ. ಸುಮಾರು 25 ವರ್ಷಗಳ ಬಳಿಕ ಈ ಪ್ರಕರಣಕ್ಕೆ ಕಾನೂನುಬದ್ಧ ಅಂತ್ಯ ಸಿಕ್ಕಿದರೂ, ವರನಟ ಡಾ. ರಾಜ್‌ಕುಮಾರ್ ಅಪಹರಣದ ನೆನಪು ಕನ್ನಡಿಗರ ಮನಸ್ಸಿನಲ್ಲಿ ಸದಾ ಉಳಿಯುವ ಘಟನೆಯಾಗಿ ಉಳಿದಿದೆ.

😀
0
😍
0
😢
0
😡
0
👍
1
👎
0

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading