Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಮೂಡುಬಿದಿರೆಯಲ್ಲಿ ದಲಿತ ಕುಂದುಕೊರತೆ ಸಭೆಗೆ ಅಧಿಕಾರಿಗಳ ಗೈರು: ತಹಸೀಲ್ದಾರ್ ವಿರುದ್ಧ ಡಿಎಸ್ಎಸ್ ಆಕ್ರೋಶ

ಮೂಡುಬಿದಿರೆಯಲ್ಲಿ ದಲಿತ ಕುಂದುಕೊರತೆ ಸಭೆಗೆ ಅಧಿಕಾರಿಗಳ ಗೈರು: ತಹಸೀಲ್ದಾರ್ ವಿರುದ್ಧ ಡಿಎಸ್ಎಸ್ ಆಕ್ರೋಶ

ಮೂಡುಬಿದಿರೆ: ತಾಲೂಕು ಮಟ್ಟದ ದಲಿತ ಕುಂದುಕೊರತೆ ಸಭೆಗೆ ಪ್ರಮುಖ ಇಲಾಖೆಗಳ ಅಧಿಕಾರಿಗಳು ಗೈರುಹಾಜರಾಗಿದ್ದರೂ ಸಭೆಯನ್ನು ಮುಂದುವರಿಸಿದ ತಹಸೀಲ್ದಾರ್ ಕ್ರಮಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ) ಹಾಗೂ ದಲಿತ ಹಕ್ಕುಗಳ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈ ಸಂಬಂಧ ಕಂದಾಯ ಸಚಿವರಿಗೆ ದೂರು ಸಲ್ಲಿಸಲು ಸಂಘಟನೆಗಳು ನಿರ್ಧರಿಸಿವೆ.

ಆಗಸ್ಟ್ 18ರಂದು ನಡೆದ ದಲಿತ ಕುಂದುಕೊರತೆ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಹಲವು ಪ್ರಮುಖ ಅಧಿಕಾರಿಗಳು ಭಾಗವಹಿಸಿರಲಿಲ್ಲ ಎಂದು ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ. ಅಬಕಾರಿ, ಕೃಷಿ, ಅರಣ್ಯ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳನ್ನು ಹೊರತುಪಡಿಸಿ, ತಾಲೂಕಿನ 12 ಗ್ರಾಮ ಪಂಚಾಯಿತಿಗಳ ಪಿಡಿಒಗಳು ಹಾಗೂ ಗ್ರಾಮ ಆಡಳಿತಾಧಿಕಾರಿಗಳೂ ಸಭೆಗೆ ಗೈರಾಗಿದ್ದರು ಎನ್ನಲಾಗಿದೆ.

ದಲಿತರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲೇ ಆಲಿಸಿ ಪರಿಹರಿಸಬೇಕಾಗಿರುವ ಸಂದರ್ಭದಲ್ಲಿ ಅಧಿಕಾರಿಗಳು ಗೈರಾಗಿದ್ದರೂ ಸಭೆ ಮುಂದುವರಿಸಿರುವುದು ಸಮುದಾಯಕ್ಕೆ ಮಾಡಿದ ಅವಮಾನ ಎಂದು ಮುಖಂಡರು ಆಕ್ಷೇಪಿಸಿದ್ದಾರೆ.

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒ ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಸರಿಯಾಗಿ ಲಭ್ಯವಾಗದಿರುವುದರಿಂದ ಸಾರ್ವಜನಿಕರ ಹಲವು ಕೆಲಸಗಳು ವಿಳಂಬವಾಗುತ್ತಿವೆ. ವಿದ್ಯಾರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಲು ತೊಂದರೆಯಾಗುತ್ತಿದೆ. ಡಿಸಿ ಮನ್ನಾ ಭೂಮಿ ಅತಿಕ್ರಮಣ, ಹಕ್ಕುಪತ್ರ ವಿತರಣೆ, ರೇಷನ್ ಕಾರ್ಡ್ ರದ್ದತಿ, ಆಸ್ಪತ್ರೆ ಮತ್ತು ಹಾಸ್ಟೆಲ್‌ಗೆ ಸಂಬಂಧಿಸಿದ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ ಎಂದು ಮುಖಂಡರು ತಿಳಿಸಿದ್ದಾರೆ.

ಹಿಂದಿನ 2025ರ ನವೆಂಬರ್ 27ರಂದು ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಗೂ ಕೆಲವು ಅಧಿಕಾರಿಗಳು ಗೈರಾಗಿದ್ದರು. ಅವರಿಗೆ ನೋಟಿಸ್ ನೀಡಿದ್ದರೂ ಯಾವುದೇ ಪರಿಣಾಮಕಾರಿ ಶಿಸ್ತು ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಂಘಟನೆಗಳು ಆರೋಪಿಸಿವೆ.

ಪ್ರತಿ ಮೂರು ತಿಂಗಳಿಗೊಮ್ಮೆ ದಲಿತರ ಕುಂದುಕೊರತೆ ಸಭೆ ನಡೆಯಬೇಕಿದ್ದರೂ ದೀರ್ಘಕಾಲದಿಂದ ಸಭೆಗಳನ್ನು ನಡೆಸಲಾಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಸಭೆಯ ಮಾಹಿತಿಯನ್ನು ಹಿಂದೆ ಗ್ರಾಮ ಆಡಳಿತಾಧಿಕಾರಿಗಳ ಮೂಲಕ ಮನೆಮನೆಗೆ ತಲುಪಿಸಲಾಗುತ್ತಿತ್ತು. ಆದರೆ ಇದೀಗ ಪತ್ರಿಕೆ ಪ್ರಕಟಣೆ ಮತ್ತು ವಾಟ್ಸಾಪ್ ಸಂದೇಶಗಳಿಗೆ ಮಾತ್ರ ಸೀಮಿತಗೊಳಿಸಲಾಗುತ್ತಿದೆ. ಇದರಿಂದ ದಲಿತರು ಸಭೆಯಲ್ಲಿ ಭಾಗವಹಿಸದಂತೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.

ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವರಿಗೆ ಜಂಟಿ ಮನವಿ ಸಲ್ಲಿಸಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ. ತಾಲೂಕು ಆಡಳಿತದ ವಿರುದ್ಧ ಅಧಿಕೃತ ದೂರು ನೀಡುವುದಾಗಿ ಹೇಳಿರುವ ಅವರು, ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯದಿದ್ದರೆ ರಾಜ್ಯದ ವಿವಿಧ ದಲಿತ ಸಂಘಟನೆಗಳನ್ನು ಒಗ್ಗೂಡಿಸಿ ಬೆಂಗಳೂರಿನಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

ಸುದ್ದಿಗೋಷ್ಠಿಯಲ್ಲಿ ಡಿಎಸ್ಎಸ್ ತಾಲೂಕು ಸಂಘಟನಾ ಸಂಚಾಲಕ ಪ್ರವೀಣ್ ಮುರಗೋಳಿ, ತಾಲೂಕು ಸಂಚಾಲಕ ಉದಯ ಮಾರ್ನಾಡ್, ದಲಿತ ಹಕ್ಕುಗಳ ಸಮಿತಿಯ ಕೃಷ್ಣಪ್ಪ ಹಾಗೂ ಸದಸ್ಯ ಚಂದ್ರಶೇಖರ್ ಜಿ.ಪಿ. ಉಪಸ್ಥಿತರಿದ್ದರು.

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading