ಸುಳ್ಯ: ಅಂಬೇಡ್ಕರ್ ವಿವಿಧೋದ್ದೇಶ ಸಹಕಾರಿ ಸಂಘ (AVSS) ಸುಳ್ಯ ಶಾಖೆಯ ವತಿಯಿಂದ ಸಂವಿಧಾನ ಶಿಲ್ಪಿ B. R. Ambedkar ಅವರ 135ನೇ ಜನ್ಮ ಜಯಂತಿ ಕಾರ್ಯಕ್ರಮವನ್ನು ಭಾನುವಾರ ಸುಳ್ಯದಲ್ಲಿರುವ AVSS ಕಚೇರಿಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವು AVSS ಸುಳ್ಯ ಶಾಖೆಯ ಸಂಸ್ಥಾಪಕರಾದ ಮನೋಹರ್ ಪಿ.ಬಿ. ಪಲ್ಲತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್ ಪಿ.ಎಸ್. ಪಾತೆಟ್ಟಿ ಅವರು ಡಾ. ಅಂಬೇಡ್ಕರ್ ಅವರ ಜೀವನ ಚರಿತ್ರೆ ಹಾಗೂ ಸಮಾಜ ಪರಿವರ್ತನೆಯಲ್ಲಿ ಅವರ ಕೊಡುಗೆಗಳನ್ನು ವಿವರಿಸಿದರು.
ದಲಿತ್ ಸೇವಾ ಸಮಿತಿ (ರಿ.) ವಿಟ್ಲ ಮಹಿಳಾ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾದ ಜಯಶ್ರೀ ಮೇಡಂ ಮಾತನಾಡಿ, ಅಂಬೇಡ್ಕರ್ ಅವರ ಕಾನೂನು ಪರಿಷ್ಕರಣೆಗಳಿಂದ ಮಹಿಳೆಯರಿಗೆ ಸಮಾನ ಅವಕಾಶಗಳು ದೊರಕಿದ್ದು, ಅದರಿಂದಲೇ ಇಂದಿನ ಮಹಿಳೆಯರು ಆತ್ಮವಿಶ್ವಾಸದಿಂದ ಮುಂದೆ ಬರಲು ಸಾಧ್ಯವಾಗಿದೆ ಎಂದು ಹೇಳಿದರು. ಪ್ರತಿಯೊಬ್ಬ ಮಹಿಳೆಯರೂ ಅಂಬೇಡ್ಕರ್ ಅವರ ಚಿಂತನೆಗಳನ್ನು ಅಧ್ಯಯನ ಮಾಡಬೇಕೆಂದು ಅವರು ಸಲಹೆ ನೀಡಿದರು..
ಕಾರ್ಯಕ್ರಮದಲ್ಲಿ AVSS ನಿರ್ವಾಹಣ ಸಮಿತಿ ಸದಸ್ಯರಾದ ಕರುಣಾಕರ್ ಪಿ.ಆರ್. ಪಲ್ಲತ್ತಡ್ಕ, ಚೋಮ ಗಾಂಧಿನಗರ ಹಾಗೂ ಸೇವಾ ಪ್ರತಿನಿಧಿ ಹರೀಣಾಕ್ಷಿ ಮೇಡಂ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಭೆಯಲ್ಲಿ ಭಾಗವಹಿಸಿದ ಮೀನಾಕ್ಷಿ ಮೇಡಂ ಪಾಪೆಮಜಲು, ವಿಜಯಕುಮಾರ್ ಮರ್ಕಂಜ ಮತ್ತು ಬಾಬು ಕೆ.ಎಂ. ಜಾಲ್ಸೂರು ಅವರು ಅಂಬೇಡ್ಕರ್ ಅವರ ವಿಚಾರಧಾರೆ ಕುರಿತು ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಕು. ಬಿಂಧ್ಯಾ ಕಡೆಪಾಲ ಅವರು ಗಣ್ಯರನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ಕು. ಆಶ್ಮಿ ಸಂವಿಧಾನದ ಪೀಠಿಕೆಯನ್ನು ವಾಚಿಸಿ, ಅಂಬೇಡ್ಕರ್ ಅವರ ಕುರಿತು ಸ್ವರಚಿತ ಗೀತೆ ಹಾಡಿ ಗಮನ ಸೆಳೆದರು. ಕು. ಯೋಗ್ಯ ಮತ್ತು ತಂಡದವರು ಕ್ರಾಂತಿ ಗೀತೆಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಕು. ಪ್ರಂಜನಾ ದೊಡ್ಡೇರಿ ಅವರು ಸಿಹಿತಿಂಡಿ ನೀಡಿದ್ದು, ಲೀಲಾವತಿ ದೊಡ್ಡೇರಿ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂವಿನ ಹಾರ ಸಮರ್ಪಿಸಿದರು. AVSS ನಿರ್ವಾಹಣ ಸದಸ್ಯ ಹರೀಶ್ ಎಂ.ಎಸ್. ಮೇನಾಲ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮವನ್ನು ಚಂದ್ರಶೇಖರ ಕೆ. ಪಲ್ಲತ್ತಡ್ಕ ಅವರು ನಿರೂಪಿಸಿದರು.
ಸಂಸ್ಥೆಯ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮವು ಅಂಬೇಡ್ಕರ್ ಅವರ ಚಿಂತನೆಗಳನ್ನು ಜನರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರವಹಿಸಿದೆ.
