Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಮಂಗಳೂರು: ಅಮೇರಿಕನ್ ಯುದ್ಧಕೋರ ನೀತಿ ಖಂಡಿಸಿ ಪ್ರತಿಭಟನೆ

ಮಂಗಳೂರು: ಅಮೇರಿಕನ್ ಯುದ್ಧಕೋರ ನೀತಿ ಖಂಡಿಸಿ ಪ್ರತಿಭಟನೆ

ಮಂಗಳೂರು: ಅಮೇರಿಕನ್ ಸಾಮ್ರಾಜ್ಯಶಾಹಿಗಳ ಯುದ್ಧಕೋರ ನೀತಿಗಳನ್ನು ಖಂಡಿಸಿ ಜಾಗತಿಕ ಮಟ್ಟದಲ್ಲಿ ಶಾಂತಿ ನೆಲೆಗೊಳ್ಳಬೇಕೆಂದು ಒತ್ತಾಯಿಸಿ ಮಂಗಳೂರು ನಗರದ ಹೃದಯ ಭಾಗದಲ್ಲಿ CITU, DYFI, JMS, DHS ಹಾಗೂ ಆದಿವಾಸಿ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಅಮೇರಿಕನ್ ಸಾಮ್ರಾಜ್ಯಶಾಹಿಗಳ ಯುದ್ಧದಾಹದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶಭರಿತ ಘೋಷಣೆಗಳನ್ನು ಕೂಗಿದರು. ಜಗತ್ತಿನಾದ್ಯಂತ ಯುದ್ಧ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ಇದರಿಂದ ಸಾಮಾನ್ಯ ಜನರ ಜೀವನ ಸಂಕಷ್ಟಕ್ಕೀಡಾಗುತ್ತಿದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.

ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ CITU ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಅಮೇರಿಕಾ ಇಡೀ ಜಗತ್ತನ್ನು ತನ್ನ ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತಿದ್ದು, ಸುಮಾರು 80 ದೇಶಗಳಲ್ಲಿ 750ಕ್ಕೂ ಹೆಚ್ಚು ಸೈನಿಕ ನೆಲೆಗಳನ್ನು ಸ್ಥಾಪಿಸಿದೆ. ಇದರ ಮೂಲಕ ಮೂರನೇ ಜಗತ್ತಿನ ದೇಶಗಳ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಜಗತ್ತಿನ ವಿವಿಧ ಭಾಗಗಳಲ್ಲಿ ಯುದ್ಧಗಳು ನಡೆಯುವುದರಿಂದಲೇ ಅಮೇರಿಕಾ ಆರ್ಥಿಕತೆ ಉಳಿಯುತ್ತದೆ ಎಂದು ಅವರು ಆರೋಪಿಸಿದರು.

CITU ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರ್ಯ ಮಾತನಾಡಿ, ಯುದ್ಧ ಮತ್ತು ಸರ್ವನಾಶವೇ ಬಂಡವಾಳಶಾಹಿ ಹಾಗೂ ಸಾಮ್ರಾಜ್ಯಶಾಹಿಗಳ ಉಸಿರಾಗಿದೆ. ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಜಗತ್ತಿನ ಹಲವೆಡೆ ಯುದ್ಧಗಳನ್ನು ಪ್ರಚೋದಿಸಿ ಅಮಾಯಕ ಜನರ ಪ್ರಾಣಗಳನ್ನು ಬಲಿ ಪಡೆಯಲಾಗುತ್ತಿದೆ ಎಂದು ಹೇಳಿದರು.

DYFI ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಅಮೇರಿಕಾ–ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿ ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರಿದ್ದು, ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಇದರಿಂದ ಜನಸಾಮಾನ್ಯರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ಖಜಾಂಚಿ ಯೋಗೀಶ್ ಜಪ್ಪಿನಮೊಗರು, ಯುದ್ಧದ ಅಪಾಯಗಳನ್ನು ವಿವರಿಸಿ, ಅಲಿಪ್ತ ನೀತಿಯನ್ನು ಅನುಸರಿಸುತ್ತಿದ್ದ ಭಾರತವನ್ನು ಅಮೇರಿಕಾದ ಕಿರಿಯ ಪಾಲುದಾರರನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿದರು. ದೇಶದ ಆಂತರಿಕ ವಿಚಾರಗಳಲ್ಲೂ ಅಮೇರಿಕಾ ಹಸ್ತಕ್ಷೇಪ ಹೆಚ್ಚುತ್ತಿರುವುದನ್ನು ಅವರು ಖಂಡಿಸಿದರು.

ಪ್ರತಿಭಟನೆಯಲ್ಲಿ CITU ಜಿಲ್ಲಾ ನಾಯಕರಾದ ಜೆ. ಬಾಲಕೃಷ್ಣ ಶೆಟ್ಟಿ, ರವಿಚಂದ್ರ ಕೊಂಚಾಡಿ, ಜಯಂತಿ ಶೆಟ್ಟಿ, ಆಶೋಕ್ ಶ್ರೀಯಾನ್, ಜಯಂತ ನಾಯಕ್, ಜಯಲಕ್ಷ್ಮಿ, ಭಾರತಿ ಬೋಳಾರ, DYFI ನಾಯಕರಾದ ನವೀನ್ ಕೊಂಚಾಡಿ, ತಯ್ಯುಬ್ ಬೆಂಗರೆ, ಮಹಿಳಾ ಸಂಘಟನೆಗಳ ಮುಖಂಡರಾದ ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜ, ಆಶಾ ಬೋಳೂರು, ರೋಹಿಣಿ ಜಲ್ಲಿಗುಡ್ಡ, ಮಮತಾ, ಯೋಗಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

😀
0
😍
0
😢
0
😡
0
👍
0
👎
0

ಇದನ್ನೂ ಓದಿ: JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ
Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading