ಬೀದರ್: ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೇಸಿಗೆ ಆರಂಭದಲ್ಲೇ ಮಂಗಳವಾರ ಬೆಳಿಗ್ಗೆ ಬಿರುಸಿನ ಮಳೆಯಾಗಿದ್ದು, ಔರಾದ್ ತಾಲೂಕಿನ ಬಾದಲಗಾಂವ್ ಗ್ರಾಮದಲ್ಲಿ ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ರಾಹುಲ್ ರಮೇಶ ಭಾಸ್ಕರೆ (25) ಮೃತ ಯುವಕ ಎಂದು ತಿಳಿದುಬಂದಿದೆ. ಕೆಲಸದ ನಿಮಿತ್ತ ಗ್ರಾಮದ ಹೊರವಲಯಕ್ಕೆ ತೆರಳಿದ್ದ ಅವರು, ಮಳೆ ಆರಂಭವಾಗುತ್ತಿದ್ದಂತೆ ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಅಪ್ಪಳಿಸಿದೆ. ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮೃತರಿಗೆ ಪತ್ನಿ, ತಂದೆ-ತಾಯಿ ಹಾಗೂ ಸಹೋದರರು ಇದ್ದಾರೆ. ಘಟನೆ ಔರಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಔರಾದ್ ತಾಲ್ಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನೊಂದೆಡೆ, ಮಂಗಳವಾರ ಬೆಳಿಗ್ಗೆಯಿಂದ ಭಾಲ್ಕಿ, ಕಮಲನಗರ, ಔರಾದ್ ತಾಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಜೋರಾದ ಮಳೆಯಾಗಿದ್ದು, ವಾತಾವರಣ ಸಂಪೂರ್ಣ ತಂಪಾಗಿದೆ. ಬೆಳಿಗ್ಗೆ 6 ಗಂಟೆ ಸುಮಾರಿಗೆ ಆರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಎಡೆಬಿಡದೆ ಸುರಿದಿದೆ. ದಟ್ಟ ಮೋಡ ಕವಿದ ವಾತಾವರಣದಿಂದ ಬೇಸಿಗೆಯ ಬಿಸಿಲಿನ ತೀವ್ರತೆ ಕಡಿಮೆಯಾದ ಅನುಭವ ಕಂಡುಬಂದಿದೆ.
ಸಿಡಿಲಿಗೆ ಎರಡು ಎಮ್ಮೆ ಸಾವು
ಸೋಮವಾರ ಸಂಜೆ ಔರಾದ್ ತಾಲೂಕಿನ ದುಡಕನಾಳ ಗ್ರಾಮದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಿದ್ದು, ಸಿಡಿಲಿಗೆ ಎರಡು ಎಮ್ಮೆ ಮೃತಪಟ್ಟಿವೆ. ರೈತ ದೇವಿದಾಸ ವಿಠ್ಠಲರಾವ ಬಿರಾದಾರ ಅವರಿಗೆ ಸೇರಿದ ಎಮ್ಮೆಗಳನ್ನು ಹೊಲದಲ್ಲಿ ಮೇಯಿಸಲು ಕಟ್ಟಿ ಹಾಕಿದ್ದ ವೇಳೆ ಸಿಡಿಲು ಅಪ್ಪಳಿಸಿ ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.
ಜಿಲ್ಲೆಯ ಕೆಲವೆಡೆ ಸೋಮವಾರ ಸಂಜೆ ಸಣ್ಣ ಪ್ರಮಾಣದ ಮಳೆಯಾಗಿದ್ದು, ಮಂಗಳವಾರ ಬೆಳಿಗ್ಗೆಯಿಂದಲೇ ಕಾರ್ಮೋಡ ಆವರಿಸಿಕೊಂಡು ಬಿರುಸಿನ ಮಳೆಯಾಗಿರುವುದರಿಂದ ಜನರಿಗೆ ಬೇಸಿಗೆಯಲ್ಲಿ ತಂಪಿನ ಅನುಭವ ದೊರಕಿದೆ.
ವರದಿ: ಅರವಿಂದ ಮಲ್ಲೀಗೆ, ಬೀದರ್