ಮಂಗಳೂರು, ಆಗಸ್ಟ್ 7: ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್ ಅಹಿಂಸಾ ಅವರು ರಾಜ್ಯಾದ್ಯಂತ ರಾಜಕೀಯ ಪೂರ್ವಭಾವಿ ಸಭೆಗಳ ಸರಣಿಯನ್ನು ಆರಂಭಿಸಿದ್ದು, ಅದರ ಭಾಗವಾಗಿ ಆಗಸ್ಟ್ 8ರಂದು ಮಂಗಳೂರಿನಲ್ಲಿ ಸಭೆ ನಡೆಸಲಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವೇಳಾಪಟ್ಟಿಯ ಪ್ರಕಾರ, ಆಗಸ್ಟ್ 8ರಂದು ಕಾರ್ಕಳ, ಮೂಡಬಿದ್ರೆ, ಮಂಗಳೂರು, ಉಳ್ಳಾಲ ಮತ್ತು ಪುತ್ತೂರು ಕ್ಷೇತ್ರಗಳಲ್ಲಿ ಸಭೆಗಳು ನಡೆಯಲಿವೆ. ಈ ಸಭೆಗಳು ಬೆಳಿಗ್ಗೆ 10:30, ಮಧ್ಯಾಹ್ನ 1:00, ಮಧ್ಯಾಹ್ನ 3:00, ಸಂಜೆ 5:00 ಹಾಗೂ ಸಂಜೆ 7:00 ಗಂಟೆಗೆ ಆಯೋಜಿಸಲಾಗಿದೆ.
ಈ ರಾಜಕೀಯ ಪೂರ್ವಭಾವಿ ಸಭೆಗಳ ಮೂಲಕ ರಾಜ್ಯದ ವಿವಿಧ ಕ್ಷೇತ್ರಗಳ ಜನರೊಂದಿಗೆ ನೇರ ಸಂವಾದ ನಡೆಸುವುದು, ಸ್ಥಳೀಯ ಸಮಸ್ಯೆಗಳನ್ನು ಆಲಿಸುವುದು ಹಾಗೂ ಮುಂದಿನ ರಾಜಕೀಯ ಕಾರ್ಯತಂತ್ರದ ಕುರಿತು ಚರ್ಚಿಸುವ ಉದ್ದೇಶ ಹೊಂದಿರುವುದಾಗಿ ತಿಳಿದುಬಂದಿದೆ.
ಆಗಸ್ಟ್ 9ರಿಂದ 11ರವರೆಗೆ ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಸಕಲೇಶಪುರ, ಬೇಲೂರು, ಅರಸೀಕೆರೆ, ಹಾಸನ, ಅರಕಲಗೂಡು, ಹೊಳೆನರಸೀಪುರ, ಶ್ರವಣಬೆಳಗೊಳ ಹಾಗೂ ಚನ್ನರಾಯಪಟ್ಟಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿಯೂ ಸಭೆಗಳು ನಡೆಯಲಿವೆ.
ಮಂಗಳೂರಿನ ಸಭೆಯಲ್ಲಿ ಚೇತನ್ ಅಹಿಂಸಾ ಅವರ ಮುಂದಿನ ರಾಜಕೀಯ ಯೋಜನೆ, ಜನಸಂಪರ್ಕ ಅಭಿಯಾನ ಹಾಗೂ ಸಂಘಟನಾ ವಿಸ್ತರಣೆ ಕುರಿತು ಪ್ರಮುಖ ಘೋಷಣೆಗಳು ಹೊರಬೀಳುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಆದರೆ, ಈ ಕುರಿತು ಅವರ ತಂಡದಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಪ್ರಕಟವಾಗಬೇಕಿದೆ.