ಮಂಗಳೂರು, ಆಗಸ್ಟ್ 8, 2026: ನಗರದ ಕೆನರಾ ಕಾಲೇಜು (ಸ್ವಾಯತ್ತ)ದಲ್ಲಿ ತುಳು ಸಂಘದ ಆಶ್ರಯದಲ್ಲಿ ‘ಆಟಿಡೊಂಜಿ ದಿನ’ ಕಾರ್ಯಕ್ರಮವು ಸಡಗರ-ಸಂಭ್ರಮದಿಂದ ನಡೆಯಿತು. ತುಳುನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಆಟಿ ತಿಂಗಳ ವೈಶಿಷ್ಟ್ಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರೇಮಲತಾ ವಿ. ವಹಿಸಿದ್ದರು. ತುಳು ಭಾಷೆಯಲ್ಲೇ ಮಾತನಾಡಿದ ಅವರು, ಆಟಿ ತಿಂಗಳ ಮಹತ್ವ ಹಾಗೂ ತುಳುನಾಡಿನ ವಿಶಿಷ್ಟ ಸಂಸ್ಕೃತಿಯನ್ನು ವಿದ್ಯಾರ್ಥಿಗಳು ಅರಿತುಕೊಳ್ಳುವ ಅಗತ್ಯವನ್ನು ವಿವರಿಸಿದರು.
ಮುಖ್ಯ ಅತಿಥಿಯಾಗಿ ತುಳುವರ್ಲ್ಡ್ ಫೌಂಡೇಶನ್, ಕಟೀಲು ಇದರ ನಿರ್ದೇಶಕರಾದ ಡಾ. ರಾಜೇಶ್ ಕೃಷ್ಣ ಆಳ್ವ ಭಾಗವಹಿಸಿದ್ದರು. ‘ತುಳುನಾಡಿನ ಸಂಸ್ಕೃತಿ ಬೊಕ್ಕ ಆಚರಣೆಲು’ ವಿಷಯದ ಕುರಿತು ಮಾತನಾಡಿದ ಅವರು, ಆಟಿಡೊಂಜಿ ದಿನದ ಹಿನ್ನೆಲೆ, ಆಟಿ ತಿಂಗಳ ಜೀವನ ಪದ್ಧತಿ ಹಾಗೂ ತುಳುನಾಡಿನ ಸಾಂಪ್ರದಾಯಿಕ ಜ್ಞಾನ ಪರಂಪರೆಯ ಕುರಿತು ಮಾಹಿತಿ ನೀಡಿದರು.
ತುಳು ಕೇವಲ ಒಂದು ಭಾಷೆಯಲ್ಲ, ಅದು ವಿಶಾಲವಾದ ಜ್ಞಾನ ಮತ್ತು ವಿದ್ಯಾ ಪರಂಪರೆಯನ್ನು ಒಳಗೊಂಡಿದೆ ಎಂದು ಅವರು ಹೇಳಿದರು. ತುಳುನಾಡಿನಲ್ಲಿ ಕಂಡುಬರುವ ವಿವಿಧ ಸಾಂಪ್ರದಾಯಿಕ ಜ್ಞಾನಪರಂಪರೆಗಳನ್ನು ವೈಜ್ಞಾನಿಕ ದೃಷ್ಟಿಯಿಂದ ದಾಖಲಿಸಿ, ಮರುಅಧ್ಯಯನ ನಡೆಸುವ ಅಗತ್ಯವಿದೆ. ಇಂತಹ ಜನಪದ ಜ್ಞಾನ ಹಾಗೂ ಪರಂಪರಾ ವಿದ್ಯೆಗಳು ನಿಧಾನವಾಗಿ ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಯಶಸ್ಸಿಗೆ ತುಳು ಸಂಘದ ಸಂಚಾಲಕರಾದ ಶ್ರೀಮತಿ ವಾಣಿ ಯು. ಎಸ್. ಹಾಗೂ ಕು. ಅನುಷಾ ಡಿ. ನೇತೃತ್ವ ವಹಿಸಿದ್ದರು. ತುಳು ಸಂಘದ ಕಾರ್ಯದರ್ಶಿ ಮನ್ವಿತ್ ಹಾಗೂ ಜಂಟಿ ಕಾರ್ಯದರ್ಶಿ ಪೂರ್ವಿ ಸಹಕರಿಸಿದರು. ತುಳುವರ್ಲ್ಡ್ ಫೌಂಡೇಶನ್ನ ಕಾರ್ಯದರ್ಶಿ ವಸಂತ್ ರೈ ಕುತ್ತೆತೂರು ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಆಟಿ ತಿಂಗಳ ಸಾಂಪ್ರದಾಯಿಕ ದೇಸೀ ಅಡುಗೆಗಳ ಸವಿಯೂಟ ಏರ್ಪಡಿಸಲಾಗಿತ್ತು. ಆಟಿ ತಿಂಗಳ ಆಹಾರ ಪದ್ಧತಿಯ ವೈಶಿಷ್ಟ್ಯವನ್ನು ಪರಿಚಯಿಸುವ ವಿವಿಧ ಸಾಂಪ್ರದಾಯಿಕ ಖಾದ್ಯಗಳನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸವಿದು ಸಂಭ್ರಮಿಸಿದರು.
ಈ ಮೂಲಕ ‘ಆಟಿಡೊಂಜಿ ದಿನ’ವು ಕೇವಲ ಸಾಂಸ್ಕೃತಿಕ ಆಚರಣೆಯಾಗದೆ, ವಿದ್ಯಾರ್ಥಿಗಳಿಗೆ ತುಳುನಾಡಿನ ಜೀವನ ಪದ್ಧತಿ, ಪ್ರಕೃತಿಯೊಂದಿಗೆ ಬೆಸೆದುಕೊಂಡ ಜ್ಞಾನ ಹಾಗೂ ಸಾಂಪ್ರದಾಯಿಕ ಪರಂಪರೆಯ ಅರಿವು ಮೂಡಿಸುವ ಶೈಕ್ಷಣಿಕ ಕಾರ್ಯಕ್ರಮವಾಗಿಯೂ ಗಮನ ಸೆಳೆಯಿತು.